top of page

ಕಡೂರಿನಲ್ಲಿ ನಡೆದ ಅನುಭಾವ ಶ್ರಾವಣ

28 Aug 2024

ಹೊಳಲ್ಕೆರೆ / ಚಿತ್ರದುರ್ಗ ಆ.26 : ಅಂತರಂಗ ಮತ್ತು ಬಹಿರಂಗ ಎರಡು ಶುದ್ಧವಾಗಿರಬೇಕು. ಬಹಿರಂಗ ಶುದ್ದಿ ಬಹುತೇಕ ಎಲ್ಲರದು ಸ್ವಚ್ಛವಾಗಿರುತ್ತದೆ. ಆದರೆ ಅಂತರಂಗ ಅದು ನಿರ್ಮಲವಾಗಿರಬೇಕಾದರೆ ದಾರ್ಶನಿಕರ ತತ್ವಾದರ್ಶಗಳ ಶ್ರವಣ ಮತ್ತು ಮನನ ಮತ್ತವುಗಳ ಅನುಸರಣೆಯಿಂದ ಸಾಧ್ಯವಿದೆಯೆಂದು ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಶ್ರೀಗಳವರು ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಆಯೋಜಿಸಿರುವ ಅನುಭಾವ ಶ್ರಾವಣ ಸರಣಿ ಚಿಂತನ ಮಾಲೆಯು ಹೊಳಲ್ಕೆರೆ ತಾಲೂಕಿನ ಕಡೂರು ವೀರಭದ್ರಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ನಡೆದಿದ್ದು ಚಿತ್ರದುರ್ಗದ ಮುರುಗಿ ಪರಂಪರೆಯ ಸಣ್ಣ ಗುರುಪಾದ ಮುರುಘರಾಜೇಂದ್ರ ಸ್ವಾಮಿಗಳ ವಿಷಯ ಕುರಿತು ಚಿಂತನ ನಡೆಸುತ್ತಾ ಮುರುಘಾಮಠದ ಮೂಲಕ ಹಳ್ಳಿ ಹಳ್ಳಿಗೆ ಸಂಚರಿಸಿ ಅನುಭಾವ ಶ್ರಾವಣ ಕಾರ್ಯಕ್ರಮದ ಮೂಲಕ ಅರಿವು ಮೂಡಿಸುತ್ತಿದೆ. ಅದು ಬಸವತತ್ವದ ಜಾಗೃತಿಯ ಶಿವಾನುಭವ ಸಂದೇಶವಾಗಿದೆ. ಬಸವಾದಿ ಶರಣರ ವಚನಗಳ ಆಲಿಸುವುದು, ಓದುವುದು, ಮುರುಘಾ ಪರಂಪರೆಯ ಶ್ರೀಗಳವರ ಜೀವನ, ಆದರ್ಶ ಕಾರ್ಯಗಳನ್ನು ಅಧ್ಯಯನ ಮಾಡುವುದು, ಮುಂತಾದವುಗಳಿಂದ ಅಂತರಂಗ ಶುದ್ದಿ ಮಾಡಿಕೊಳ್ಳಬೇಕು. ಬಹಿರಂಗವಾಗಿ ನಮಗೆ ಒಳ್ಳೆಯ ವ್ಯವಸ್ಥೆ ಇದ್ದೇ ಇದೆ. ಆದರೆ ಇವೆಲ್ಲವುದರಿಂದ ದೊರೆಯದ ಶಾಂತಿ ನೆಮ್ಮದಿಯನ್ನ ಅಂತರಂಗದಿಂದಲೇ ಪಡೆಯಬೇಕು. ಅದು ಹೊರಗೆ ಸಿಗುವುದಿಲ್ಲ. ಧ್ಯಾನ ಬಸವಾದಿ ಶರಣರ ಆದರ್ಶದ ಅಳವಡಿಕೆಯಿಂದ ಶಾಂತಿ ದೊರೆಯುತ್ತದೆ ಎಂದರು.
ಮುರುಘಾ ಪರಂಪರೆ, ಮತ್ತು ಬಸವ ಪರಂಪರೆಗಳು ಆದರ್ಶವನ್ನು ಸಮಾಜಕ್ಕೆ ನೀಡಿದ ಪರಂಪರೆಗಳು. ಅಂಥವರ ಸ್ಮರಣೆಯಿಂದ ಶಾಂತಿ ನೆಮ್ಮದಿ ಪಡೆಯಬಹುದು. ಅಲ್ಲಿ ಆಗಿ ಹೋದ ಗುರುಗಳು ಸಮಾಜದ ಒಳಿತಿಗಾಗಿ ಶ್ರಮಿಸಿದ್ದಾರೆ. ಮೂರು ಸಾವಿರ ಸಣ್ಣ ಗುರುಪಾದ ಸ್ವಾಮಿಗಳು ಸ್ವತಃ ಕವಿಗಳಾಗಿದ್ದರು. ಹೈದರಾಲಿ ಎಂಬ ನಾಯಕ ಮುರುಘಾ ಮಠದ ಸಂಪತ್ತನ್ನು ದೋಚಲು ಬರುವಾಗ ತಲೆ ಸುತ್ತು ಬಂದು ಬಿದ್ದನಂತೆ. ಕಾರಣ ಆ ವೇಳೆಯಲ್ಲಿ ಮೂರು ಸಾವಿರ ಗುರುಪಾದ ಸ್ವಾಮಿಗಳು ಧ್ಯಾನಸಕ್ತರಾಗಿದ್ದರಂತೆ. ಆನಂತರ ದಿನಗಳಲ್ಲಿ ಗುರುಪಾದ ಸ್ವಾಮಿಗಳು ಲೋಕ ಸಂಚಾರ ಹೊರಟರೆಂದು ಚರಿತ್ರೆಯಲ್ಲಿ ಬರುತ್ತದೆ. ಸಾಮಾಜಿಕ ಧಾರ್ಮಿಕ ಕಾರ್ಯಗಳನ್ನು ಮಾಡಿದ ಐತಿಹ್ಯಗಳು ನಮಗೆ ದಾಖಲೆಗಳಲ್ಲಿ ಸಿಗುತ್ತದೆ. ಪ್ರಸಿದ್ಧವಾದ ಐತಿಹಾಸಿಕ ಹಿನ್ನೆಲೆಯುಳ್ಳ ಬೃಹನ್ಮಠ ಅದುವೇ ಮುರುಘಾಮಠ. ಮೊಟ್ಟ ಮೊದಲ ಪ್ರಸಾದ ನಿಲಯ ಸ್ಥಾಪಿಸಿದ ಆರಂಭಿಸಿದ್ದ ಕೀರ್ತಿ ಬೃಹನ್ಮಠಕ್ಕೆ ಸಲ್ಲುತ್ತದೆ. ಅವರು ಸ್ಥಾಪಿಸಿದ ಜಯದೇವ ವಿದ್ಯಾರ್ಥಿ ನಿಲಯ ಗಳಲ್ಲಿ ಓದಿದ ಬಹುತೇಕರು ಆದರ್ಶ ಜೀವನವನ್ನು ರೂಪಿಸಿಕೊಂಡು ಉನ್ನತ ಪದವಿ, ಅಧಿಕಾರ ಹಿಡಿದಿದ್ದನ್ನು ನಾವು ಕಾಣಬಹುದಾಗಿದೆ. ಅಂತಹ ಮಹಾತ್ಮರು ಜನ್ಮ ತಾಳಿ 150 ವರ್ಷಗಳು ಸಂದುತ್ತಿರುವ ಕಾರಣ ಶ್ರೀಮಠದ ವತಿಯಿಂದ ಇಡೀ ಒಂದು ವರ್ಷ ಅವರ ಸಾಮಾಜಿಕ ಅನನ್ಯ, ಅನುಪಮಾ ಸೇವೆಯನ್ನು ಜನಮಾನಸಕ್ಕೆ ಪರಿಚಯಿಸುವ ಕೆಲಸ ಮಾಡಲಾಗುತ್ತದೆ ಎಂದು ನುಡಿದರು.
ಸಮಾರಂಭದ ಸಮ್ಮುಖವನ್ನು ಮುರುಘಾಮಠದ ಮುರುಘಂದ್ರ ಸ್ವಾಮೀಜಿಯವರು ಹಾಗೂ ತಿಪ್ಪೇರುದ್ರಸ್ವಾಮಿಜಿ ವಹಿಸಿದ್ದರು.
ವೇದಿಕೆಯಲ್ಲಿ ದೇವಸ್ಥಾನ ಕಮಿಟಿಯ ನಾಗರಾಜಪ್ಪ, ನಟರಾಜಪ್ಪ, ವೀರಭದ್ರಪ್ಪ, ಓಂಕಾರಪ್ಪ, ಪರಮೇಶ್ವರಪ್ಪ, ಈಶ್ವರಪ್ಪ, ಬಸವರಾಜಪ್ಪ ಪಟ್ಟಣಶೆಟ್ಟಿ, ಷಡಕ್ಷರಯ್ಯ ಮತ್ತಿತರರು ಉಪಸ್ಥಿತರಿದ್ದರು. ಅಂದಿನ ದಿನದ ಶ್ರಾವಣ ಸೋಮವಾರದ ದಾಸೋಹ ಸೇವೆಯನ್ನು ಪಿ .ಎಸ್. ಷಣ್ಮುಖಪ್ಪ ಅವರು ವಹಿಸಿಕೊಂಡಿದ್ದರು.
ಇದಕ್ಕೂ ಮೊದಲು ವೀರಭದ್ರ ಸ್ವಾಮಿ ದೇವಾಲಯದ ತಪ್ಪಲಿನ ಬೆಟ್ಟದಲ್ಲಿ ವಿವಿಧ ತಳಿಯ ಸಸಿಗಳನ್ನು ನೀಡಲಾಯಿತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಆಸ್ಪತ್ರೆಯ ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.
ಸಮಾರಂಭದ ಆರಂಭಕ್ಕೆ ಜಮುರಾ ಕಲಾವಿದರು ವಚನ ಸಂಗೀತ ಹಾಗೂ ಪ್ರಾರ್ಥನೆಯನ್ನು ನಿರ್ವಹಿಸಿದರು. ದೇವಾಲಯ ಕಾರ್ಯನಿರ್ವಾಹಕ ಸಮಿತಿಯ ಉಪಾಧ್ಯಕ್ಷ ಎಚ್. ಎಂ. ದಯಾನಂದ್ ಸ್ವಾಗತ ಕೋರಿದರು. ಉಪನ್ಯಾಸಕ ಕೆ.ಎಚ್. ಸಿದ್ದಲಿಂಗಪ್ಪ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ನಿಸಾರ್ ಅಹಮದ್ ಶರಣು ಸಮರ್ಪಣೆ ಮಾಡಿದರು.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page