
30 Sept 2024
ಚಿತ್ರದುರ್ಗ, ಸೆ. 30 - ಜಾಗೃತ ಮನಸ್ಸು ಉಸಿರೊಂದಿಗೆ ಬೆರೆತಾಗ ಗಮನ ಕೇಂದ್ರೀಕೃತವಾಗುತ್ತದೆ. ದೇಹದ ಒಳಗೆ ಉಸಿರಿನೊಂದಿಗೆ ಮನಸ್ಸು ಅಂತರ್ಗಮನವಾದಾಗ ಶರೀರ ಸ್ವಚ್ಛವಾಗುತ್ತದೆ. ಇದರಿಂದ ಶರೀರದ ಅವಗುಣಗಳು, ಜಡತ್ವ, ಮತ್ತು ಮರೆವು ಮರೆಮಾಚುತ್ತದೆ ಎಂದು ಯೋಗಗುರು ಚನ್ನಬಸವಣ್ಣ ತಿಳಿಸಿದರು.
ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆಯುತ್ತಿರುವ ಆರೋಗ್ಯ ಹಾಗೂ ಆಧಾತ್ಮಿಕ ಶಿಬಿರದ 6ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತ, ಕೌಟುಂಬಿಕ ಬೆಸುಗೆಯ ಮಹತ್ವವನ್ನು ಪ್ರಸ್ತುತ ಪಡಿಸಿ, ಪೋಷಕರು ತಮ್ಮ ಮನೆಯಲ್ಲಿ ಭೋಜನವನ್ನು ತಮ್ಮ ಮಕ್ಕಳೊಂದಿಗೆ ಸವಿದರೆ ಕೌಟುಂಬಿಕ ಬೆಸುಗೆ ಭದ್ರವಾಗುತ್ತದೆ. ಬೆಳಗ್ಗೆ ಹಣ್ಣು, ಮಧ್ಯಾಹ್ನ ಮಜ್ಜಿಗೆ ಹಾಗೂ ರಾತ್ರಿ ಹಾಲು ಸೇವಿಸುವುದು ಆರೋಗ್ಯಕ್ಕೆ ಉತ್ತಮ ಎಂದರು.
ಶ್ರೀಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಮಾತನಾಡಿ, ಈ ಯೋಗ ಶಿಬಿರವು ದಿನನಿತ್ಯದ ಯೋಗಾಭ್ಯಾಸಕ್ಕೆ ಒಳಗಾದಲ್ಲಿ ನಮ್ಮ ಆರೋಗ್ಯದಲ್ಲಿ ಚೇತರಿಕೆ ಇದ್ದೇ ಇರುತ್ತದೆ. ಯೋಗ ಹಾಗೂ ಶಿವಯೋಗ ನಮ್ಮೆಲ್ಲರ ಉಸಿರಾಗಲಿ ಎಂದು ಯೋಗಪಟುಗಳನ್ನು ಹುರಿದುಂಬಿಸಿದರು.
ಎಸ್.ಜೆ.ಎಂ. ಐಟಿಐ ಕಾಲೇಜು ಹಾಗೂ ಬೃಹನ್ಮಠ ಪ್ರೌಢಶಾಲೆಯ ಸಿಬ್ಬಂದಿವರ್ಗದವರು ಇದ್ದರು.


