
5 Oct 2024
ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150 ನೇ ಜಯಂತ್ಯುತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ-2024 ರ ಕಾರ್ಯಕ್ರಮದಲ್ಲಿ ವಚನ ಕಮ್ಮಟ ಪರೀಕ್ಷೆಯ ರ್ಯಾಂಕ್ ವಿಜೇತರರಿಗೆ ಬಹುಮಾನ ವಿತರಣೆ ಸಮಾರಂಭ ದಿನಾಂಕ:05-10-2024 ರಂದು ಶ್ರೀಮಠದ ಅನುಭವ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮದ ಸಮ್ಮುಖ ವಹಿಸಿಕೊಂಡಿದ್ದ ಹೆಗ್ಗುಂದದ ಶ್ರೀ ವನಕಲ್ ಮಲ್ಲೇಶ್ವರ ಮಠದ ಡಾ. ಬಸವರಮಾನಂದ ಸ್ವಾಮಿಗಳು ಮಾತನಾಡಿ 1998 ರಿಂದ 26 ವರ್ಷಗಳ ಕಾಲ ನಿರಂತರವಾಗಿ ನಡೆದುಕೊಂಡು ಬಂದಿರುವಂತಹದ್ದು ಈ ವಚನ ಕಮ್ಮಟ ಪರೀಕ್ಷೆ. ಶ್ರೀ ಮಠದ ಎರಡು ಕಣ್ಣುಗಳು ಬಸವತತ್ವ ಮಹಾವಿದ್ಯಾಲಯ ಹಾಗೂ ವಚನ ಕಮ್ಮಟ ಪರೀಕ್ಷೆ. ವಚನ ಸಾಹಿತ್ಯ ಈ ನಾಡಿನ ಕಾವ್ಯಾತ್ಮಕವಾಗಿರುವಂತಹ ಸಂವಿಧಾನ ಎಂದು ಎಸ್. ನಿಜಲಿಂಗಪ್ಪನವರು ಡಾ. ಬಿ.ಆರ್. ಅಂಬೇಡ್ಕರ್ ರವರಿಗೆ ತಿಳಿಸಿದ್ದರು ಎಂದು ನುಡಿದರು.
ಹಿರೇಮಾಗಡಿಯ ಶ್ರೀ ವಿರಕ್ತ ಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ ಈ ದಿನ ಮಕ್ಕಳಿಗೆ ತ್ರಿಕರಣ ಶುದ್ದಿಯ ಶಿಕ್ಷಣವನ್ನು ನೀಡಬೇಕಾಗಿದೆ. ಹೊಟ್ಟೆಯನ್ನು ತುಂಬಿಸುವಂತಹ ಮತ್ತು ಮೆದುಳನ್ನು ತುಂಬಿಸುವ ಸಂಸ್ಕಾರಯುತ ಶಿಕ್ಷಣವನ್ನು ನೀಡಬೇಕೆಂದು ತಿಳಿಸಿದರು.
ಖಜೂರಿಯ ಶ್ರೀ ಮುರುಘರಾಜೇಂದ್ರ ವಿರಕ್ತಮಠದ ಶ್ರೀ ಮುರುಘಂದ್ರ ಕೋರುಣೇಶ್ವರ ಸ್ವಾಮಿಗಳು ಮಾತನಾಡಿ ವಚನ ಎಂದರೆ ಮಾತು, ನುಡಿದಂತೆ ನಡೆ, ವಚನವನ್ನು ಪಚನ ಮಾಡಿಕೊಂಡರೆ, ಬದುಕಿನಲ್ಲಿ ಅನುಷ್ಠಾನಕ್ಕೆ ತಂದುಕೊಂಡರೆ ಪೋಲೀಸ್ ಠಾಣೆಗಳೇ ಬೇಕಿಲ್ಲ ಎಂದು ತಿಳಿಸಿದರು.
ವಚನ ಕಮ್ಮಟ ಪರೀಕ್ಷೆಯ ನಿವೃತ್ತ ನಿರ್ದೇಶಕರಾದ ಪ್ರೊ. ಚಂದ್ರಪ್ಪ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿಯವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿ, ಶಿಲ್ಪ ಸ್ವಾಗತಿಸಿದರು, ನೇತ್ರಾವತಿ ನಿರೂಪಿಸಿದರು. ಮಂಗಳಾ ವಂದಿಸಿದರು. ಕಾರ್ಯಕ್ರಮವನ್ನು ಎಸ್.ಜೆ.ಎಂ. ಆಂಗ್ಲ ಮಾದ್ಯಮ ಶಾಲೆಯ ಸಿಬ್ಬಂದಿ ವರ್ಗದವರು ನಡೆಸಿಕೊಟ್ಟರು.




