
5 Oct 2024
ಲಕ್ಷಾಂತರ ಜನರ ಬದುಕು ಅನ್ನಮಯ ಜ್ಞಾನಮಯವಾಗಲು ಕಾರಣ ಶರಣರ ಅನುಭವದ ಬದುಕು. ದೈವದ ಜೊತೆಗೆ ಕನ್ನಡವು ಮಾತನಾಡುತ್ತಿದೆ ಎಂದು ತೋರಿಸಿದವರು ಶರಣರು. ದಯವೇ ಧರ್ಮದ ಮೂಲವೆಂದು ಸಾರಿದವರು ಬಸವಣ್ಣನವರು ಎಂದು ಕಡೂರಿನ ಡಾ.ಮಂಜುನಾಥ್ ತಿಳಿಸಿದರು. ಅವರು ದಿನಾಂಕ 05.05.2024 ರ ಬೆಳಿಗ್ಗೆ 10.00 ಗಂಟೆಗೆ ಅಲ್ಲಮಪ್ರಭು ಸಂಶೋಧನಾಕೇಂದ್ರದಲ್ಲಿನ ವಚನ ಕಮ್ಮಟ ಗೋಷ್ಠಿ-1ರ ಕುರಿತು ಮಾತನಾಡುತ್ತಾ ಈ ಬ್ರಹ್ಮಾಂಡ ಅಷ್ಟಾವರಣದಿಂದ ನಿಂತಿದೆ. ಅದರಂತೆ ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ ಪಾದೋದಕ ಪ್ರಸಾದವೆಂಬ ಅಷ್ಟಾವರಣಗಳು ಮನುಷ್ಯನ ಬದುಕಿಗೆ ಶ್ರೇಷ್ಠವಾಗಿ ನಿಂತಿವೆ. ಅದರಲ್ಲಿ ಮೊದಲನೆಯದು ಗುರು. ಸುಜ್ಞಾನದ ಜೊತೆಗೆ ಬರುವ ಅರಿವನ್ನು ಗುರುವೆಂದು ಕರೆಯುತ್ತಾರೆ. ಶರಣ ಪರಂಪರೆಯಲ್ಲಿ ಗುರುವಿಗೆ ಶ್ರೇಷ್ಠವಾದ ಸ್ಥಾನವಿದೆ. ಬಸವಣ್ಣನವರನ್ನು ವಿಶ್ವಗುರು ಎಂದು ಕರೆಯುತ್ತೇವೆ. ಹಾಲಿನೊಳಗೆ ತುಪ್ಪವನ್ನು ಶೋಧಿಸುವಂತೆ ನಮ್ಮೊಳಗೆ ದೇವರನ್ನು ಕಾಣಬೇಕು. ಇಷ್ಟಲಿಂಗ ಎನ್ನವುದು ಆಚಾರದ ಪ್ರತೀಕ. ಅರಿವಿನ ಕುರುಹು, ಅದು ಇಷ್ಟಲಿಂಗವನ್ನು ಕೊಟ್ಟಂತಹ ವ್ಯಕ್ತಿ ಗುರು. ಯೋಗ್ಯವಾದ ಸಮರ್ಥನಾದ ಶರಣರ ವಿಚಾರಗಳನ್ನು ಅರಿತಂತಹ ವ್ಯಕ್ತಿಯಿಂದ ಇಷ್ಟಲಿಂಗವನ್ನು ಪಡೆಯಬೇಕು ಎಂದು ತಿಳಿಸಿದರು.
ವಚನ ಕಮ್ಮಟ ಕಲಿಕಾ ಶಿಬಿರದ ಗೋಷ್ಠಿಯಲ್ಲಿ ಶ್ರೀಮತಿ ಲತಾ ಅವರು ಗುರುವಿನ ಬಗ್ಗೆ ಮಾತನಾಡಿ ಶರಣ ಸಂಸ್ಕೃತಿಯಲ್ಲಿ ಶರಣರ ಬಗ್ಗೆ ಅರಿತಾಗ ಗುರುವಿನ ಮಹತ್ವ ಅರಿವಾಗುತ್ತದೆ. ಬಸವಾದಿಶರಣರ ಪ್ರಕಾರ ಅರಿವೇ ಗುರು ಅಂದಕಾರವನ್ನು ಹೋಗಲಾಡಿಸುವವನೆ ಗುರು ಎಂದು ತಿಳಿಸಿದರು.
ಲಿಂಗದ ಬಗ್ಗೆ ಮಾತನಾಡಿದ ಕೊಟ್ರೇಶ್ ಎಸ್ ಉಪ್ಪಾರ ರವರು ಲಿಂಗದಲ್ಲಿ ಹಲವಾರು ಪ್ರಭೇದಗಳಿವೆ, ಆದರೆ ಬಸವಾಧಿ ಶರಣರು ನಮಗೆ ಇಷ್ಟಲಿಂಗವನ್ನು ನೀಡಿದರು. ದೇವರಿಂದಲೇ ದೂರವಿದ್ದ ಎಷ್ಟೋ ಜನರ ಕೈಗೆ ಬಸವಣ್ಣನವರು ಇಷ್ಟ ಲಿಂಗವನ್ನು ಕೊಟ್ಟರು. ದೈವೀಪರಿಕಲ್ಪನೆ ರೂಪವೇ ಇಷ್ಟ ಲಿಂಗ, ಇಷ್ಟ ಲಿಂಗ ದೇವರಲ್ಲ, ದೇವರೆಡೆಗೆ ಸಾಗುವ ಒಂದು ಸಾಧನ ಇಷ್ಟಲಿಂಗದ ಉದ್ದೇಶ, ಏಕದೇವರ ಆರಾಧನೆಯನ್ನು ತಿಳಿಸುವುದು, ದೇವರು ಮತ್ತು ಭಕ್ತ ಆತ್ಮ ಮತ್ತು ಪರಮಾತ್ಮನ ನೇರ ಸಂಪರ್ಕವನ್ನು ಕೊಡುವುದೇ ಇಷ್ಟಲಿಂಗ ಎಂದರು.
ಉಳವಿಯ ಶ್ರೀ ಚೆನ್ನಬಸವೇಶ್ವರ ಮಹಾಮಠದ ಶ್ರೀ ಬಸವಲಿಂಗ ಮೂರ್ತಿ ಸ್ವಾಮಿಗಳು ಮಾತನಾಡಿ ಯಾವುದು ಈ ಜಗತ್ತಿನ ಸೃಷ್ಟಿಗೆ ಕಾರಣವೊ ಅದೇ ಲಿಂಗ ಎಂದು ತಿಳಿಸಿದರು. ಜಂಗಮದ ಬಗ್ಗೆ ಶ್ರೀ ಮರುಳಶಂಕರ ದೇವರ ಗುರುಪೀಠದ ಶ್ರೀ ಸಿದ್ಧಬಸವ ಕಬೀರಸ್ವಾಮಿಗಳು ಮಾತನಾಡಿ ಸಂತಸದ ವಸಂತಗಾಳಿಯಂತೆ ಜಂಗಮ ಇರಬೇಕು. ಬಾಯಲ್ಲಿ ಬಸವತತ್ವ ಇಟ್ಟುಕೊಂಡು ಎದೆಯಲ್ಲಿ ಕತ್ತಿಯನ್ನು ಹಿಡಿದ ಜಂಗಮರೇ ಈ ದಿನ ಎಲ್ಲಾ ಕಡೆ ಕಾಣಸಿಗುತ್ತಾರೆ. ಜಂಗಮ ಅಂದರೆ ಜಗತ್ತು ಎಲ್ಲಿ ತತ್ವ ಇರುತ್ತೋ ಅಲ್ಲಿ ಜಗತ್ತು ಇರುತ್ತೆ. ಎಲ್ಲಿ ತತ್ವ ಇರುವುದಿಲ್ಲವೋ ಅಲ್ಲಿ ಕತ್ತಲು ಇರುತ್ತದೆ. ತಮ್ಮ ಹೊಟ್ಟೆಯನ್ನು ಹೊರಿಯುವುದಕ್ಕಾಗಿ ಮುಗ್ಧ ಜನರನ್ನು ಸುಲಿಯುವವನನ್ನು ಜಂಗಮ ಎಂದು ಕರೆಯಲು ಸಾಧ್ಯವಿಲ್ಲ. ನಿಜವಾದ ಜಂಗಮ ಪ್ರಾಪಂಚಿಕ ಜನರಲ್ಲಿ ಏನನ್ನು ಬೇಡುವುದಿಲ್ಲ. ಯಾರು ನಿರಾಕಾರ ತತ್ವನ್ನು ರೂಡಿಸಿಕೊಂಡಿರುತ್ತಾರೋ ಅಂತವರನ್ನು ನಾವು ಜಂಗಮ ಎಂದು ಕರೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಂಭಾರ ಗುಂಡಯ್ಯ ಶ್ರೀಗಳು ಬಸವ ನಾಗಿದೇವ ಶ್ರೀಗಳು, ಮುರುಘರಾಜೇಂದ್ರ ಸ್ವಾಮಿಗಳು ಉಪಸ್ಥಿತರಿದ್ದರು. ಬಸವ ಟಿ.ವಿ ವಾಹಿನಿಯ ಶ್ರೀ ಕೃಷ್ಣಪ್ಪ ರವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿ, ಶ್ರೀಮಠದ ವಟುಗಳಾದ ಲಂಕೇಶ್ ಸ್ವಾಗತಿಸಿ, ನಿವೃತ್ತ ಪ್ರಾಂಶುಪಾಲರಾದ ಟಿ.ಪಿ.ಜ್ಞಾನಮೂರ್ತಿ ನಿರೂಪಿಸಿ ವಂದಿಸಿದರು.




