
29 Aug 2024
ಹೊಸದುರ್ಗ/ಚಿತ್ರದುರ್ಗ, ಆ.29 : ಎಲ್ಲರಿಗೂ ಅಮೂಲ್ಯವಾದ ಬದುಕು ಇದೆ. ಅದರಲ್ಲೂ ಮಾನವರದ್ದು ವಿಶೇಷ. ಪ್ರಾಣಿಗಳಿಗೆ ಹೋಲಿಸಿದರೆ ಅವನದು ವಿಶೇಷ ವ್ಯಕ್ತಿತ್ವ. 12ನೇ ಶತಮಾನದ ಶರಣರು ಸಮಾಜಕ್ಕೆ ವಚನಗಳ ಅತ್ಯಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಆಸ್ತಿ ಒಡವೆ ಕೊಡುವ ಬದಲು ಜ್ಞಾನ ನೀಡಿದರೆ ಅದು ಶಾಶ್ವತ ಕೊಡುಗೆಯಾಗುತ್ತದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪಿ. ಓಂಕಾರಪ್ಪ ಅಭಿಪ್ರಾಯಪಟ್ಟರು.
ಅವರು ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಆಯೋಜಿಸಿರುವ ಅನುಭಾವ ಶ್ರಾವಣ ಕಾರ್ಯಕ್ರಮದ ಚಿಂತನ ಸರಣಿ ಮಾಲೆಯು ಪಟ್ಟಣದ ಜಯದೇವ ಸಮುದಾಯ ಭವನದಲ್ಲಿ ನಿನ್ನೆ ನಡೆದಿದ್ದು, ಬದುಕಿಗೆ ವಚನ ಸಾಹಿತ್ಯದ ಕೊಡುಗೆ ವಿಚಾರ ಕುರಿತು ಉಪನ್ಯಾಸ ನೀಡಿದ ಅವರು, ಶರಣರು ನಡೆದಂತೆ ನುಡಿ ನುಡಿದಂತೆ ನಡೆಯುವ, ಮಾರ್ಗವನ್ನು ತಿಳಿಸಿದ್ದಾರೆ. ಅದು ವಚನಗಳ ಮೂಲಕ. ಈ ವಚನಗಳು ಕಾಲ್ಪನಿಕವಲ್ಲ. ತಮ್ಮ ಬದುಕಿನ ವಿಚಾರ ಅನುಭವಗಳನ್ನು ವಚನದ ಮೂಲಕ ಪ್ರಸ್ತುತಪಡಿಸಿದ್ದಾರೆ. ಭೂಮಿ, ಬಂಗಾರ, ಹೆಂಡತಿ, ಮಕ್ಕಳು ಇವೆಲ್ಲ ಬಂದು ಹೋಗುವ ಭೌತಿಕ ಸಂಪತ್ತುಗಳು. ಆದರೆ ಜ್ಞಾನ ಎಂದೂ ಮುಗಿಯದ ಸಂಪತ್ತು. ನಮ್ಮನ್ನು ಅದು ಸತ್ಪಥದಲ್ಲಿ ಸಾಗುವಂತೆ ಮಾಡುತ್ತದೆ. ನಡೆ ನುಡಿ ಉಣ್ಣುವ ಉಡುವುದನ್ನು ಶರಣರು ಕಲಿಸಿದರು. ನಾವು ಊಟ ಎನ್ನುತ್ತಿದ್ದೆವು ಅವರು ಪ್ರಸಾದ ಎಂದು ಭಕ್ತಿ ಸ್ವರೂಪ ನೀಡಿದರು. ಸತಿಪತಿಗಳು ಒಂದಾದ ಭಕ್ತಿ ಹಿತವಾಗಿತ್ತು ಶಿವಂಗೆ ಅಂದರು. ಮಾನವ ದೇವರನ್ನು ಎಲ್ಲೆಲ್ಲೋ ಹುಡುಕಬೇಡ, ಸತ್ಯ ಶುದ್ಧ ಕಾಯಕವಿದ್ದರೆ ದೇವರೇ ನಿನ್ನನ್ನು ಹುಡುಕುತ್ತಾನೆ ಎಂದರು ಬಸವಣ್ಣನವರು. ಪರಮಾತ್ಮನು ಈ ಜಗತ್ತಿನ ಜಾಣ ವ್ಯಾಪಾರಿ. ಅವನು ತೂಕದಲ್ಲಿ, ಹಣದಲ್ಲಿ ಎಂದು ಮೋಸ ಮಾಡುವುದಿಲ್ಲ. ಸಂಪತ್ತನ್ನ ಕೊಟ್ಟರೆ ಕೆರೆ ತುಂಬಿದಂತೆ ಕೊಡುತ್ತಾನೆ. ಅದು ಬಂದಾಗ ಮೈಮರೆತರೆ ಒಣಗಿದ ಕೆರೆಯಾಗುತ್ತದೆ. ಆತನ ಸ್ಮರಣೆ ನಿರಂತರವಾಗಿರಲಿ. ಮನಸ್ಸಿನ ಕೊಳೆ ತೊಳೆಯಲು ಶರಣರ ಸಂಗ ಮಾಡಬೇಕು. ವೈಯಕ್ತಿಕ ಲೇಸ ಬಯಸಿಕೊಳ್ಳಲಿಲ್ಲ. ಸಕಲ ಜೀವರಾಶಿಗಳಿಗೂ ಲೇಸ ಬಯಸಿದರು ಶರಣರು. ಇವೆಲ್ಲ ನಮಗೆ ಅವರು ಕೊಟ್ಟ ದೊಡ್ಡ ಕೊಡುಗೆಗಳು. ಅವನ್ನು ಸದ್ವಿನಿಯೋಗ ಮಾಡಿಕೊಳ್ಳೋಣ ಎಂದ ಅವರು ವಚನ ಬದುಕಿನ ಮರ್ಮವನ್ನು ತಿಳಿಸಿ ಹೇಳಿದರು.
ಹೆಬ್ಬಳ್ಳಿಯ ಮುಖಂಡರಾದ ಎಚ್.ಸಿ. ಮಲ್ಲಿಕಾರ್ಜುನಪ್ಪ ಮಾತನಾಡುತ್ತಾ, 12ನೇ ಶತಮಾನದ ಶರಣರು ಜಾತ್ಯಾತೀತ ಧರ್ಮಾತೀತ ವರ್ಗಾತೀತ ಸಮಾಜ ನಿರ್ಮಾಣ ಮಾಡಿ ಅಂಗೈಯಲ್ಲಿ ದೇವರನ್ನು ಕರುಣಿಸಿದರು. ಆಚಾರ ವಿಚಾರ ನಡೆ-ನುಡಿಗಳನ್ನು ಕಲಿಸಿದರು. ಆದರೆ ನಾವಿಂದು ಅವುಗಳೆಲ್ಲವುದರಿಂದ ವಿಮುಖರಾಗಿದ್ದೇವೆ. ಹಾಗಾಗಿ ಈ ಸಮಾಜ ದುರಂತದ ಹಾದಿ ಹಿಡಿದಿದೆ. ಆಗ ಅಪ್ಪ ಅಮ್ಮರ ನುಡಿ ವೇದವಾಕ್ಯವಾಗಿತ್ತು. ಆದರೆ ಇಂದು ತಂದೆ ತಾಯಿ ಮಾತಿಗೆ ಬೆಲೆ ಇಲ್ಲ. ಆದ್ದರಿಂದ ಇಂದು ವಿಚ್ಛೇದನವೆಂಬ ಪಿಡುಗು ತಾಂಡವವಾಡುತ್ತಿದೆ. ಹಾಗಾಗಿ ಪೋಷಕರು ಮಕ್ಕಳಿಗೆ ಬಾಲ್ಯದಲ್ಲಿರುವಾಗಲೇ ಸಂಸ್ಕಾರ ಕಲಿಸಬೇಕು. ಇಲ್ಲವಾದಲ್ಲಿ ಈ ಪ್ರಪಂಚ ಹಾಳಾಗುವುದು ಖಂಡಿತ. ಎದ್ದ ತಕ್ಷಣ ಮೊಬೈಲ್ ಹಿಡಿಯುವ ಸಂಸ್ಕೃತಿ ದೂರಾಗಿ, ವಚನ ಓದುವ, ಶರಣರ ಮಾರ್ಗದರ್ಶನ ಅನುಸರಿಸುವ ಸಮಾಜ ಸೃಷ್ಟಿಯಾಗಬೇಕು ಎಂದು ಕಳಕಳಿಯ ಮನವಿ ಮಾಡಿದರು.
ಕೋಡಿಹಳ್ಳಿಯ ಮತ್ತೋರ್ವ ಮುಖಂಡರಾದ ಆರ್. ತಮ್ಮಣ್ಣನವರು ಮಾತನಾಡುತ್ತಾ, ಇಂದಿನ ಸಮಾಜ ಎದುರಿಸುತ್ತಿರುವ ಸಮಸ್ಯೆ ಪಿಡುಗುಗಳನ್ನು ದೂರ ಮಾಡಿ, ಎಲ್ಲರಿಗೂ ಧರ್ಮದ ತಿರುಳು ತಿಳಿಸಿ ಅವರನ್ನ ಬಸವಪಥಕ್ಕೆ ಅರ್ಥಾತ್ ಸತ್ಪದತ್ತ ಕರೆತರಲು ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಅನಿವಾರ್ಯ. ನಮ್ಮ ಬಾಲ್ಯದ ದಿನಗಳಲ್ಲೂ ಸಹ ಶ್ರಾವಣ ಮಾಸದಲ್ಲಿ ಮಕ್ಕಳಿಗೆ ಸಿಹಿಯ ಸಂಭ್ರಮ, ಹಿರಿಯರಿಂದ ಸಮಾಜಕ್ಕೆ ಅನುಭಾವ ಹಂಚುವ ಸಂಭ್ರಮವಿತ್ತು. ಅದನ್ನು ಮುಂದುವರಿಸುವ ಮನಸ್ಸು ಮಾಡಬೇಕು. ನಮ್ಮ ಮನೆಯಲ್ಲಿ ಶರಣರ ಮೌಲ್ಯಗಳ ಪರಿಚಯವನ್ನು ನಾವುಗಳು ಮಾಡಿದರೆ ಖಂಡಿತ ಮಕ್ಕಳು ಕಲಿಯುತ್ತಾರೆ. ಆ ಪ್ರಯತ್ನವನ್ನು ನಾವುಗಳು ಮಾಡಬೇಕೆಂದು ಪೋಷಕರ ಜವಾಬ್ದಾರಿಯನ್ನು ಹೇಳಿದರು.
ಒಂಟಿಕಂಬ ಮುರುಘಾಮಠದ ತಿಪ್ಪೇರುದ್ರಸ್ವಾಮೀಜಿ ಮಾತನಾಡುತ್ತಾ, 25 ಸಾವಿರಕ್ಕಿಂತಲೂ ಹೆಚ್ಚು ವಚನ ದೊರೆತಿವೆ. ಅದನ್ನು ಓದಿ ಪಾಲಿಸುವ ಮನಸ್ಸು ಮಾಡಬೇಕು. ನಾನು ಗುರುವಿನ ಕರುಣೆಯಿಂದ ಗುರು ಲಿಂಗ ಜಂಗಮವ ತಿಳಿದೆ ಎಂದ ಅಕ್ಕನ ವಚನದಲ್ಲಿ ತಿಳಿಸಿರುವಂತೆ ನಾವು ಕೂಡ ಗುರುಗಳ ಕಾರುಣ್ಯಕ್ಕೆ ಒಳಗಾಗಬೇಕು. ಬಸವಣ್ಣನವರು ಮೊದಲು ಇಷ್ಟಲಿಂಗ ಪರಿಶೋಧನೆ ಮಾಡಿದರು. ಸ್ವತಂತ್ರ ವಿಚಾರವಾದವನ್ನು ಬಸವಣ್ಣ ಹೇಳಿದರೆಂದು ನುಡಿದರು.
ಹೊಸದುರ್ಗದ ನಿವೃತ್ತ ಪ್ರಾಚಾರ್ಯ ಎನ್.ಬಿ. ತಿಪ್ಪೇಸ್ವಾಮಿ ಮಾತನಾಡುತ್ತಾ, ನಾನು ಕೂಡ ಮುರುಘಾಮಠದ ವಿದ್ಯಾರ್ಥಿ, ಮಲ್ಲಿಕಾರ್ಜುನ ಶ್ರೀಗಳಿದ್ದಾಗ ನಾನು ಅಲ್ಲಿ ವಿದ್ಯಾರ್ಥಿಯಾಗಿದ್ದೆ. ಆಗಲೂ ಕೂಡ ಶ್ರಾವಣ ಮಾಸ ಮತ್ತು ಶರಣ ಸಂಸ್ಕೃತಿ ಉತ್ಸವ ವಿಶೇಷವಾದ ಕಾರ್ಯಕ್ರಮಗಳಾಗಿದ್ದವು. ಶೂನ್ಯಪೀಠ ಪರಂಪರೆಯ ಮಠ ಅದು. ದೇಶ ವಿದೇಶಗಳಲ್ಲೂ ಅದರ ಬೇರು ಇದೆ.



