
ಶರಣ ಸಂಸ್ಕೃತಿ ಉತ್ಸವ-2023
ಏಷ್ಯಾ ಖಂಡದಲ್ಲಿ, ಭಾರತ ಧರ್ಮದ ನೆಲೆವೀಡು. ನಮ್ಮ ದೇಶದ ರಾಜರುಗಳು ಋಷ್ಯಾಶ್ರಮಗಳಲ್ಲಿ ಧರ್ಮ ನೀತಿಗಳನ್ನು ಅಧ್ಯಯನ ಮಾಡಿ ರಾಜ್ಯಭಾರ ನಿರ್ವಹಿಸುತ್ತಿದ್ದರು. ಲೌಕಿಕ, ಪಾರಮಾರ್ಥಿಕ ಸಂಯೋಗದ ತತ್ವ ಪ್ರಚಾರ ಮಾಡಿ ಲೋಕ ಕಲ್ಯಾಣ ಸಾಧಿಸುವ ದಿಸೆಯಲ್ಲಿ ಮಹತ್ತರ ಸೇವೆ ಸಲ್ಲಿಸುತ್ತಿದ್ದರು. ಐತಿಹಾಸಿಕವಾಗಿ ಪೌರಾಣಿಕವಾಗಿ ಹಿಂದಿನ ರಾಜ ಮಹಾರಾಜರುಗಳು ಧರ್ಮ ನೀತಿಗಳ ನೆಲೆಗಟ್ಟಿನ ಮೇಲೆ ರಾಜ್ಯಭಾರ ಮಾಡಲು ಆಚಾರ್ಯರು, ಋಷಿಗಳು ನೆರವಾಗುತ್ತಿದ್ದರು.


ಭಾರತವು ಧಾರ್ಮಿಕ ಪ್ರಧಾನವಾದುದು. ಭಾರತೀಯರು ವಿವಿಧ ಮತ ಪಂಥಗಳನ್ನು ಅವಲಂಬಿಸಿದ್ದರೂ ಸೌಹಾರ್ದತೆ ನೆಲೆಸಿದೆ. ಈ ದಿಸೆಯಲ್ಲಿ ಸರ್ವಧರ್ಮ ಸಮನ್ವಯ ಹಾ ಗು ಸಾರ್ಥಕ ಬದುಕಿನ ದರ್ಶನ ಮಾಡಿಸಲು ಹತ್ತು ಹಲವು ಧಾರ್ಮಿಕ ಪೀಠಗಳು ಪ್ರಯತ್ನಿಸುತ್ತಿರುವುದು ಶ್ಲಾಘನೀಯ. ಅಂತಹ ಮಹತ್ತರವಾದ ಪೀಠಗಳಲ್ಲಿ ಒಂದಾದ ಚಿತ್ರದುರ್ಗ ಶ್ರೀ ಮುರುಘರಾಜೇಂದ್ರ ಬೃಹನ್ಮಠವು ಕರ್ನಾಟಕದ ಧಾರ್ಮಿಕ ಭೂಪಟದಲ್ಲಿ ಶೋಭಿಸುತ್ತಿದ್ದು, ಪ್ರಪ್ರಥಮವಾಗಿ ಲಿಂಗಾಯತ ಧರ್ಮದ ಕಹಳೆ ಮೊಳಗಿಸಿದ ಪುರಾತನ ಮಠವಾಗಿದೆ.
ಮಹಾಮಾನವ ಬಸವಣ್ಣನವರು ೧೨ನೇ ಶತಮಾನದಲ್ಲಿ ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಸಾಹಿತ್ಯಿಕವಾದ ಕ್ರಾಂತಿಕಾರಿ ಸುಧಾರಣೆಗಳನ್ನು ತರುತ್ತ, ಮಹಾಮನೆ ಅಥವಾ ಅನುಭವಮಂಟಪ ಸ್ಥಾಪಿಸಿ, ಶೂನ್ಯಪೀಠವನ್ನು ನಿರ್ಮಿಸಿ, ಅಲ್ಲಮಪ್ರಭುಗಳನ್ನು ನೇಮಿಸಿದರು. ಅಲ್ಲಮ ಪ್ರಭುದೇವರು ಅದ್ವೈತ ಸಿದ್ಧಾಂತದ ಪ್ರತಿಪಾದಕರಾಗಿದ್ದರು. ಮುಂದೆ ಶೂನ್ಯಪೀಠದ ಅಧ್ಯಕ್ಷರಾದರು. ಎರಡನೆಯವರಾಗಿ ಚೆನ್ನಬಸವಣ್ಣನವರು, ಮೂರನೇ ಪೀಠಾಧೀಶರಾಗಿ ಕಾಯಕಯೋಗಿ ಸಿದ್ಧರಾಮೇಶ್ವರರು, ನಂತರ ಬಂದಂತಹ ತೋಂಟದ ಸಿದ್ಧಲಿಂಗ ಶಿವಯೋಗಿಗಳು ಶೂನ್ಯಸಿದ್ಧಾಂತವನ್ನು ಪ್ರಚಾರಪಡಿಸಿದರು. ಅಲ್ಲಿಯವರೆಗೂ ಚರಪೀಠವಾಗಿದ್ದ ಶೂನ್ಯಪೀಠವು ಸ್ಥಿರಪೀಠವಾಗುತ್ತದೆ. ಮೂರುವರೆ ಶತಮಾನಕ್ಕೂ ಹೆಚ್ಚಿನ ಗುರುಪರಂಪರೆ ಈ ಶೂನ್ಯಪೀಠಕ್ಕೆ ಇದೆ. ಇದರ ಒಂದು ಸಾಂಸ್ಕೃತಿಕ ಮಾದರಿಯಾಗಿ ಚಿತ್ರದುರ್ಗದ ಶ್ರೀಮುರುಘರಾಜೇಂದ್ರ ಬೃಹನ್ಮಠವಿರುವುದು ಎಲ್ಲರಿಗೂ ತಿಳಿದ ವಿಷಯ.


ಶ್ರೀಮಠವು ಹನ್ನೆರಡನೆಯ ಶತಮಾನದ ಬಸವಾದಿ ಪ್ರಮಥರ ತತ್ವಾದರ್ಶಗಳನ್ನು ಜನಮಾನಸಕ್ಕೆ ತಲುಪಿಸುವ ಕೆಲಸದಲ್ಲಿ ನಿತ್ಯನಿರಂತರವಾಗಿ ತೊಡಗಿಸಿಕೊಂಡಿದೆ. ಪ್ರತಿವರ್ಷ ಶರಣ ಸಂಸ್ಕೃತಿ ಉತ್ಸವ ವನ್ನು ಅರ್ಥಪೂರ್ಣವಾಗಿ ಆಚರಿಸುತ್ತ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವ, ಕಂದಾಚಾರಗಳಿಂದ ದೂರವಾಗಿಸುವ, ದುಶ್ಚಟಗಳಿಂದ ದೂರವಿರುವ ಅರಿವಿನ ಮಾರ್ಗದಲ್ಲಿ ಸಾಗುವ ಪ್ರೇರಣೆಯನ್ನು ನೀಡುತ್ತಿದೆ. ಮಾನವನಲ್ಲಿರುವ ದಾನವ ಗುಣಗಳನ್ನು ಇಲ್ಲವಾಗಿಸಿ ಮಾನವೀಯತೆಯ ಗುಣಗಳನ್ನು ಪಡೆಯುವಂತಹ ರೀತಿಯಲ್ಲಿ ಈ ಶರಣಸಂಸ್ಕೃತಿ ಉತ್ಸವವನ್ನು ಜನತೆಯ ಉತ್ಸವವನ್ನಾಗಿಸಿ ಅರ್ಥಪೂರ್ಣತೆಯನ್ನು ತಂದುಕೊಟ್ಟಿದೆ. ನಾಡಿನ ಹಿರಿಮೆ ಎನಿಸಿರುವ ಮೈಸೂರು ದಸರಾ ರಾಜವೈಭವದ ನಾಡಹಬ್ಬವಾದರೆ ಚಿತ್ರದುರ್ಗ ಶ್ರೀ ಮುರುಘಾಮಠದ ಶರಣಸಂಸ್ಕೃತಿ ಉತ್ಸವ ಪ್ರಜಾಪ್ರಭುತ್ವ ಮೌಲ್ಯವೈಭವದ, ಅಭಿವೃದ್ಧಿಯ ಹಲವು ಆಯಾಮಗಳನ್ನು ಏಕಕಾಲಕ್ಕೆ ಪ್ರತಿಬಿಂಬಿಸುವ ಮತ್ತು ಪ್ರೇರೇಪಿಸುವ ಮಧ್ಯಕರ್ನಾಟಕದ ಜನಸಾಮಾನ್ಯರ ಮಣ್ಣಿನ ಹಬ್ಬವಾಗಿದೆ.
ಈ ಉತ್ಸವವು ಗ್ರಾಮೀಣ ಸಂಸ್ಕೃತಿಯ ಅನಾವರಣದ ಜೊತೆಜೊತೆಗೆ ಉಪನ್ಯಾಸ, ಮಾನವಮುಖಿ ವಿಚಾರಗಳ ಚಿಂತನ-ಮಂಥನದ ವೇದಿಕೆಯಾಗಿದೆ. ಬಸವಣ್ಣನವರ ವಚನಾದರ್ಶವಾದ ಜಾತಿ, ಮತ, ವರ್ಣ, ಲಿಂಗಭೇದ, ವರ್ಗರಹಿತ ಸಮಾಜವೇ ಸಂಸ್ಕೃತಿ ಎನ್ನುವುದನ್ನು ಪ್ರತಿಪಾದಿಸುವ ಶರಣಸಂಸ್ಕೃತಿ ಉತ್ಸವವಾಗಿದೆ. ಕ್ರೀಡಾಳುಗಳಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರತಿವರ್ಷ ಬೇರೆಬೇರೆ ಕ್ರೀಡೆಗಳ ಜಮುರಾ ಕಪ್ ಪಂದ್ಯಾವಳಿ, ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಉತ್ತಮ, ಒತ್ತಡರಹಿತ ಆರೋಗ್ಯ ನೀಡುವ, ಒಂದು ಆರೋಗ್ಯಪೂರ್ಣ ಸಮಾಜದೆಡೆಗೆ ಕರೆದೊಯ್ಯುವ ಸಹಜ ಶಿವಯೋಗ, ರೈತರ ಸಾಧಕ-ಬಾಧಕಗಳ ಮೇಲೆ ಬೆಳಕು ಚೆಲ್ಲಲು ಕೃಷಿಮೇಳ, ಯುವಜನರನ್ನೂ ಪ್ರೇರೇಪಿಸಿ ಬೆನ್ನುತಟ್ಟಲು ಯುವಜನಮೇಳ, ಮಹಿಳಾ ಸಮಾವೇಶ, ಮಕ್ಕಳ ಮೇಳ, ಸಂಗೀತ ಸಂಭ್ರಮ, ಹಾಸ್ಯ ನಾಟಕೋತ್ಸವ, ನಾಡಿನ ಜಾನಪದ ಕಲೆಯನ್ನು ಪ್ರತಿಬಿಂಬಿಸುವ ಜಾನಪದ ಕಲಾಮೇಳ, ಸಾಹಸ ಕ್ರೀಡೋತ್ಸವ ಹಾಗೂ ಬಸವಶ್ರೀ ಪ್ರಶಸ್ತಿ ಪ್ರದಾನ ಇವೆಲ್ಲವೂ ಉತ್ಸವದ ಪ್ರಮುಖ ಘಟ್ಟಗಳಾಗಿವೆ.

ಈ ಉತ್ಸವವು ಮಧ್ಯಕರ್ನಾಟಕದ ಭಾಗದಲ್ಲಿ ನಡೆಯುವ ಪರ್ಯಾಯ ಶರಣರ ದಸರಾ ಆಗಿ ದ್ದು, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ಬಳ್ಳಾರಿ, ಗುಲ್ಬರ್ಗಾ, ಬೀದರ್, ಬಿಜಾಪುರ, ಗದಗ, ಚಿಕ್ಕಮಗಳೂರು, ತುಮಕೂರು, ಕೊಪ್ಪಳ ಮೊದಲಾದ ಜಿಲ್ಲೆಗಳಿಂದ ಶರಣರು ಸಾವಿರಾರು ಸಂಖ್ಯೆಯಲ್ಲಿ ಶ್ರೀಮಠಕ್ಕೆ ಹರಿದುಬರುತ್ತಾರೆ. ಪ್ರತಿದಿನ ಲಕ್ಷಾಂತರ ಮಂದಿಗೆ ಶ್ರೀಮಠದಲ್ಲಿ ಉತ್ಸವ ಮುಗಿಯುವವರೆಗೂ ತ್ರಿಕಾಲ ದಾಸೋಹವು ನಡೆಯುತ್ತದೆ










