top of page

ಅನುಭಾವ ಶ್ರಾವಣ ಸಮಾರೋಪ

3 Sept 2024

ಚಿತ್ರದುರ್ಗ, ಸೆ.3 : ಒಬ್ಬ ಮಹಾನ್ ಪುರುಷ 53 ವರ್ಷಗಳ ಕಾಲ ನಾಡಿನ ತುಂಬಾ ಸಂಚಾರ ಮಾಡಿದ್ದರು ಎಂದರೆ ಅವರ ಶಕ್ತಿ, ಮತ್ತು ದೂರದೃಷ್ಟಿ ಎಂತಹದ್ದು ಎಂದು ಊಹಿಸಲೂ ಸಾಧ್ಯವಾಗದು. ಅವರೇ ಚಿತ್ರದುರ್ಗದ ಜಯದೇವ ಜಗದ್ಗುರುಗಳು. 1903 ರಲ್ಲಿ ಜಗದ್ಗುರುಗಳ ಪಟ್ಟಾಧಿಕಾರವಾಯಿತು. 1904 ಮೈಸೂರು ಸಂಸ್ಥಾನದ ಒಡೆಯರ ಪಟ್ಟಾಧಿಕಾರವಾಯಿತು. ಅವರು ರಾಜಾರಾದರೆ, ಜಯದೇವರು ಧರ್ಮಗುರು. ಮೊಟ್ಟಮೊದಲ ಬಾರಿಗೆ ಚಿತ್ರದುರ್ಗಕ್ಕೆ ರೈಲ್ವೆಯ ನೀಲನಕ್ಷೆ ತಯಾರಿಸಿ ರಾಜರಿಗೆ ಪತ್ರದ ಮುಖೇನ ತಿಳಿಸಿದವರು ಜಯದೇವ ಜಗದ್ಗುರುಗಳು ಎಂದು ಗತಕಾಲದ ಅನೇಕ ಮಾಹಿತಿಗಳನ್ನು ನೀಡಿದವರು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು.
ಶ್ರೀಗಳವರು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಆಯೋಜಿಸಿರುವ ಅನುಭಾವ ಶ್ರಾವಣ ಚಿಂತನ ಸರಣಿ ಮಾಲೆಯ ಸಮಾರೋಪ ಸಮಾರಂಭ ನಗರದ ಸ್ಥಳೀಯ ವೀರಶೈವ ಸಮಾಜದ ಸಹಯೋಗದಲ್ಲಿ ನೀಲಕಂಠೇಶ್ವರಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಕೊಟ್ಟೂರು ಗುರು ಬಸವೇಶ್ವರರ ವಿಷಯ ಕುರಿತ ಸಭೆಯ ಸಾನಿಧ್ಯ ವಹಿಸಿ ಮಾತನಾಡುತ್ತಾ, ಜಯದೇವ ಗುರುಗಳ 150ನೇ ವರ್ಷದ ಜಯಂತ್ಯುತ್ಸವ ಇದೀಗ ಬಂದದ್ದು ನಮ್ಮೆಲ್ಲರ ಪುಣ್ಯ. ಅಂತಹ ಜಗದ್ಗುರುಗಳ ಪಟ್ಟಾಧಿಕಾರಕ್ಕೆ ಅಂದು ಅನೇಕ ಗಣ್ಯರು ಸಾಕ್ಷಿಯಾಗಿದ್ದರು. ಜಯದೇವ ಜಗದ್ಗುರುಗಳಿಗೆ ಸುತ್ತು ಕಟ್ಟು ಎಂಬ ಕರ್ತೃವಿನ ಕನಸಿನ ಮಾತಿನಂತೆ ಅರಿವು ಮೂಡಿ, ಅಲ್ಲಿಂದ ಅವರು ನಿಲ್ಲದೆ ಸುತ್ತಾಡಿ, ಮಠವನ್ನ ಇನ್ನಿಲ್ಲದಂತೆ ಶ್ರೀಮಂತಗೊಳಿಸುತ್ತಾರೆ. ಅವರು ಅಧಿಕಾರಕ್ಕೆ ಬಂದಾಗ 5,000 ಸಾಲವಿತ್ತು. ನಂತರದಲ್ಲಿ ಅವರ ಅವಿರತ ಶ್ರಮದ ಕಾರಣ ನವಕೋಟಿ ನಾರಾಯಣ ಎಂಬ ಬಿರುದನ್ನು ಪಡೆಯುತ್ತಾರೆ. ಬಡವಿದ್ಯಾರ್ಥಿಗಳಿಗೆ ಅನ್ನ, ಅರಿವು, ಆಶ್ರಯ ನೀಡುವ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪನೆ ಮಾಡುತ್ತಾರೆ. ಜ್ಞಾನದ ಬೆಳಕನ್ನು ಎಲ್ಲಡೆಯೂ ಹೊತ್ತಿಸುತ್ತಾರೆ. ಆ ಕಾಲಕ್ಕೆ ಏಳು ರಾಜಮನೆತನಗಳು ಶ್ರೀಮಠಕ್ಕೆ ನಡೆದುಕೊಳ್ಳುತ್ತಿದ್ದರು. ಅಂತಹ ಶ್ರೀಮಂತ, ಧೀಮಂತ, ಆಧ್ಯಾತ್ಮಿಕ, ಸಾಮಾಜಿಕ ಕಾರ್ಯಗಳಿಂದ ಜನಾನುರಾಗಿಯಾಗಿ ಮಠವನ್ನು ಬೆಳೆಸಿದ ಕೀರ್ತಿ ಜಯದೇವ ಜಗದ್ಗುರುಗಳವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.
ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್. ತಿಪ್ಪೇಸ್ವಾಮಿ ಮಾತನಾಡುತ್ತಾ, ಇಂದು ಎಲ್ಲರ ಮನಸ್ಸುಗಳು ಯಾಂತ್ರಿಕವಾಗಿವೆ. ಮನಸ್ಸಿಗೆ ನೆಮ್ಮದಿ, ಶಾಂತಿ ಇಲ್ಲದಾಗಿದೆ. ಇಂತಹ ಸಂದರ್ಭದಲ್ಲಿ ಶರಣರ ಮೌಲ್ಯಗಳನ್ನು ಅನುಭಾವ ಶ್ರಾವಣ ಕಾರ್ಯಕ್ರಮದಿಂದ ಶರಣರ ಸತ್ಸಂಗದ ಮುಖಾಂತರ ಮನಸ್ಸಿಗೆ ನೆಮ್ಮದಿ ಶಾಂತಿ ಕಂಡುಕೊಳ್ಳಬೇಕಾಗಿದೆ. ಬಸವಣ್ಣನವರು ಹಾಕಿಕೊಟ್ಟ ಸಮಾನತೆಯ ಕನಸು ಮುಂದುವರಿಸುತ್ತಾ ಅನುಭಾವ ಶ್ರಾವಣ ಕಾರ್ಯಕ್ರಮವಾಗಿ ಹಳ್ಳಿಹಳ್ಳಿಗೂ ತಲುಪುತ್ತಿದೆ. ಇಂಥ ಕಾರ್ಯಕ್ಕೆ ವೀರಶೈವ ಸಮಾಜದ ಸಹಕಾರ ಯಾವಾಗಲೂ ಇದೆ. ಸ್ವಲ್ಪ ಹಿಂದಿನ ಕಾಲದವರನ್ನ ಮಾತನಾಡಿಸಿದರೆ ಗೊತ್ತಾಗುತ್ತದೆ. ಸಮಾಜದ ಬಹುತೇಕ ಉನ್ನತ ಹುದ್ದೆಯಲ್ಲಿರುವವರೆವರೆಲ್ಲ ಜಯದೇವ ಹಾಸ್ಟೆಲ್‌ನಲ್ಲಿ ಓದಿ ಸಾಧನೆಗೈದವರಾಗಿದ್ದಾರೆ. ಅಂತಹ ಅದ್ಭುತ ಕಲ್ಪನೆ ಹೊಂದಿದ ಗುರುಗಳು ಜಯದೇವ ಸ್ವಾಮೀಜಿ. ಅವರ ಕರ್ತೃತ್ವ ಶಕ್ತಿ ಬಹಳ ದೊಡ್ಡದು ಎಂದರು.
ಸಮ್ಮುಖ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿಯವರು ಮಾತನಾಡುತ್ತಾ ಪ್ರತಿದಿನ ಸಂಜೆ ಈ ಕಾರ್ಯಕ್ರಮದ ಬಗ್ಗೆ ಕುತೂಹಲ ಇತ್ತು. ಅಂತಹ ಅನುಭಾವ ಶ್ರಾವಣ ಕಾರ್ಯಕ್ರಮ ಇಂದು ಮುಕ್ತಾಯಗೊಳ್ಳುತ್ತಿದೆ. ಅದು ಮುಕ್ತಾಯ ಹಂತ ತಲುಪಿತಲ್ಲಾ ಎಂದು ಒಂದಷ್ಟು ಬೇಸರವೆನಿಸುತ್ತದೆ. ಜಯದೇವ ಸ್ವಾಮೀಜಿಯವರ ಬಗ್ಗೆ ಬಸವಕುಮಾರ ಶ್ರೀಗಳು ಸಂಪೂರ್ಣ ಮಾಹಿತಿ ನೀಡುತ್ತಿರುವುದು ಖುಷಿಯ ವಿಚಾರ. ಕೊಟ್ಟೂರು ಬಸವೇಶ್ವರರು ಮನೆ ಮನೆಗೆ ಬಸವಾದಿ ಶರಣರ ತತ್ವ ಪ್ರಚಾರ ಮಾಡಿದ. ಅವರ ಕನಸನ್ನ ಆದರ್ಶಗಳನ್ನು ಕಾರ್ಯರೂಪಕ್ಕೆ ತಂದ ಪುಣ್ಯಾತ್ಮ. ಕೊಟ್ಟೂರು ಬಸವೇಶ್ವರರು ಜಾತ್ಯಾತೀತವಾದ ನಿಲುವನ್ನು ಹೊಂದಿದ್ದವರು ಎಂಬುದು ಜನಜನಿತ. ಮೂಲಾನಕ್ಷತ್ರದ ಸಮಯದಲ್ಲಿ ರಥವನ್ನು ಚಲಿಸಲಾಗುತ್ತದೆ. ಇಂಥ ಕೊಟ್ಟೂರು ಬಸವೇಶ್ವರರು ಪಂಚಗಣಾಧೀಶರಾದ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ, ಅರಸೀಕೆರೆಯ ಕೋಲಶಾಂತಯ್ಯನವರು, ಕೆಂಪಯ್ಯನವರು, ಮತ್ತು ಮದ್ದಾನೇಶರು, ಈ 5 ಪಂಚಗಣಾಧೀಶರಲ್ಲಿ ಒಬ್ಬರು. ಸಮಾಜದ ಮೌಡ್ಯವನ್ನು ಹೋಗಲಾಡಿಸುವಲ್ಲಿ ಅವರದು ಅವಿರತ ಶ್ರಮವಿದೆ. ಅಂತಹದೇ ಸಾಲಿನಲ್ಲಿ ನಮ್ಮ ಜಯದೇವ ಶ್ರೀಗಳು ಕೂಡ ನಿಲ್ಲುತ್ತಾರೆ. 1934ರಲ್ಲಿ ಗಾಂಧೀಜಿಯವರು ಜಯದೇವ ಶ್ರೀಗಳ ಕುರಿತಂತೆ ಬೇರೆಯವರಿಗೆ ಪತ್ರ ಬರೆಯುತ್ತಾರೆ. ಅದರಲ್ಲಿ ಸರ್ವ ಜಾತಿಯವರಿಗೂ ಶಿಕ್ಷಣ ನೀಡಿ ಉದ್ದರಿಸಿದವರು, ಅಸ್ಪೃಶ್ಯತಾ ನಿವಾರಣೆ ಮಾಡಿದವರು ಜಯದೇವ ಶ್ರೀಗಳು ಎಂದು ಉಲ್ಲೇಖಿಸುತ್ತಾರೆ. ಹೀಗೆ ತುಂಬಿದ ವ್ಯಕ್ತಿತ್ವ ಗಳಿಸಿದ ಶ್ರೀಗಳು ಯಾವ ಸಂಚಾರದ ವ್ಯವಸ್ಥೆ ಇಲ್ಲದ ಆ ಕಾಲದಲ್ಲಿ ಸಂಚಾರ ಮಾಡಿ ಮಠದ ಅಭಿವೃದ್ಧಿಯ ಜೊತೆ ಹಾಸ್ಟೆಲ್ ನಿರ್ಮಿಸಿದವರು ಜಯದೇವ ಶ್ರೀಗಳು. ಇವರು ಶಾಂತವೀರ ಮುರುಗಿ ಸ್ವಾಮಿಗಳವರ ಎರಡನೇ ಅವತಾರ ಎಂದು ಬಣ್ಣಿಸಿದರಲ್ಲದೆ, ಇಂಥವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ನುಡಿದರು.
ಸಮಾರಂಭದ ವೇದಿಕೆಯಲ್ಲಿ ಶ್ರೀ ಬಸವನಾಗಿದೇವ ಸ್ವಾಮೀಜಿ ಹಾಗೂ ಶ್ರೀ ಮುರುಗೇಂದ್ರ ಸ್ವಾಮೀಜಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ
ಸಮಾಜದ ಕಾರ್ಯದರ್ಶಿ ಪಿ. ವೀರೇಂದ್ರಕುಮಾರ್, ನಿರ್ದೇಶಕರುಗಳಾದ ನಿರಂಜನ ದೇವರಮನೆ, ಗುತ್ತಿನಾಡುಪ್ರಕಾಶ್, ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜಕಟ್ಟಿ, ಸಾರ್ವಜನಿಕರು ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ನೌಕರರು ಭಾಗವಹಿಸಿದ್ದರು.
ಸಮಾರಂಭದ ಆರಂಭಕ್ಕೆ ಜಮುರಾ ಕಲಾವಿದರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಸಮಾಜದ ನಿರ್ದೇಶಕ ಎಸ್. ಷಡಕ್ಷರಯ್ಯ ಸ್ವಾಗತಿಸಿದರು. ಉಪನ್ಯಾಸಕ ನವೀನ್ ಮಸ್ಕಲ್ ನಿರೂಪಿಸಿದರು. ಎಸ್.ವಿ. ಕೊಟ್ರೇಶ್ ಶರಣು ಸಮರ್ಪಣೆ ನೆರವೇರಿಸಿದರು.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page