
6 Aug 2025
ಚಿತ್ರದುರ್ಗ/ಹೊಳಲ್ಕೆರೆ, ಆ.6 : ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಲಿಂಗೈಕ್ಯ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ 31ನೇ ಸ್ಮರಣೋತ್ಸವವು ಇದೇ 8ರಂದು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಹೊಳಲ್ಕೆರೆಯ ಒಂಟಿಕಂಬದ ಮುರುಘಾಮಠದ ಅವರ ಲೀಲಾವಿಶ್ರಾಂತಿ ತಾಣದಲ್ಲಿ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಅಂದು ಲಿಂಗೈಕ್ಯ ಮಹಾಸ್ವಾಮಿಗಳವರ 30ನೇ ಸ್ಮರಣೋತ್ಸವ ಸಂಪುಟ 'ಚಿನ್ಮೂಲಾದ್ರಿ ಚಿತ್ಕಳೆ' ಪರಿಷ್ಕೃತ ಮತ್ತು ವಿಸೃತ ಆವೃತ್ತಿಯ ಲೋಕಾರ್ಪಣೆಯೂ ಇರಲಿದೆ. ಈ ಸಮಾರಂಭದಲ್ಲಿ ನಾಡಿನ ಮಠಾಧೀಶರು, ಶ್ರೀ ಜಗದ್ಗುರು ಮುರುಘರಾಜೇಂದ್ರ ಗುರುಕುಲದ ಬಸವತತ್ತ್ವ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ಸರ್ವ ಸಮಾಜದ ಸ್ವಾಮಿಗಳು, ಬೃಹನ್ಮಠದ ಖಾಸಾ-ಶಾಖಾಮಠದ ಸ್ವಾಮಿಗಳವರು, ಜಿಲ್ಲೆಯ ಜನಪ್ರತಿನಿಧಿಗಳು ಸಾಹಿತಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಶ್ರೀಮಠದ ಅಭಿಮಾನಿ ಭಕ್ತರು, ಸರ್ವ ಬಸವಕೇಂದ್ರಗಳ ಪದಾಧಿಕಾರಿಗಳು, ತಾಲ್ಲೂಕಿನ ಮಹಾಜನತೆ ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಎಂದಿನಂತೆ ಈ ಸ್ಮರಣೀಯ ಸಮಾರಂಭಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ ಐ.ಎ.ಎಸ್.(ನಿ.) ಅವರು ಕೋರಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರದುರ್ಗದಲ್ಲಿ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ವಿದ್ಯಾರ್ಥಿ ನಿಲಯ ಕಟ್ಟಡದ ಅಡಿಗಲ್ಲು ಸಮಾರಂಭ ಅಂದು ಬೆಳಗ್ಗೆ 9 ಗಂಟೆಗೆ ಎಸ್.ಜೆ.ಎಂ. ಕ್ಯಾಂಪಸ್‌ನಲ್ಲಿ ನಡೆಯಲಿದೆ

