
22 May 2025
ಚಿತ್ರದುರ್ಗ, ಮೇ 22 : ಒಮ್ಮೊಮ್ಮೆ ನಾವು ಜೀವನದಲ್ಲಿ ಯಾವುದನ್ನು ಅಮುಖ್ಯ ಎಂದು ಪರಿಗಣಿಸುತ್ತೇವೆಯೋ ಅವು ಒಂದು ಕಾಲಕ್ಕೆ ಮುಖ್ಯವಾಗುವುದು ಶತಸಿದ್ದ. ಅದರಲ್ಲಿ ಆರೋಗ್ಯದ ಬಗೆಗಿನ ಕಾಳಜಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಬಸವೇಶ್ವರ ಸಭಾಂಗಣದಲ್ಲಿ ಶ್ರೀ ಮುರುಘಾಮಠ ಹಾಗೂ ರಾಷ್ಟ್ರೀಯ ಯೋಗ ಶಿಕ್ಷಣ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇಮಾಭಿವೃದ್ಧಿ ಸಂಘ, ಚಿತ್ರದುರ್ಗ ಇವರ ಸಹಯೋಗದಲ್ಲಿ ಉಚಿತ ಯೋಗ ಪ್ರಾಣಾಯಾಮ ನಿರಂತರ ತರಗತಿ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಆರೋಗ್ಯ ಕಡೆಗಣಿಸಿ ಹಣ ಗಳಿಕೆ, ಅಧಿಕಾರ ಹಿಡಿಯುವಂತಹ ಮತ್ತು ಭೌತಿಕ ವಸ್ತುಗಳ ಕಡೆಗೆ ಗಮನಹರಿಸಿ ಆರೋಗ್ಯವನ್ನು ಲೆಕ್ಕಕ್ಕೆ ತೆಗೆದುಕೊಂಡಿರುವುದಿಲ್ಲ. ಆರೋಗ್ಯ ಇಲ್ಲ ಅಂದ್ರೆ ಏನೂ ಇಲ್ಲ ಎನ್ನುವುದು ಗೊತ್ತಿದೆ ಆದರೂ ಅಲಕ್ಷ್ಯ ಮಾಡಿ ತೀವ್ರ ತರಹದ ಕಾಯಿಲೆಗಳಿಗೆ ತುತ್ತಾದಾಗ ಅದರ ಮಹತ್ವ ಗೊತ್ತಾಗುತ್ತದೆ. ಈಗೀಗ ದೀರ್ಘಾಯುಷ್ಯ ಕಡಿಮೆಯಾಗಿ ಅಲ್ಪಾಯುಷಿಗಳಾಗುತ್ತಿರುವುದು. ಹಾಗೆಯೇ ಚಿಕ್ಕ ವಯಸ್ಸಿಗೆ ಗಂಭೀರ ಎನ್ನುವ ರೋಗಗಳಿಗೆ ತುತ್ತಾಗುತ್ತಿರುವುದು ಸಾಮಾನ್ಯ ಸಂಗತಿ ಆಗಿದೆ ಎಂದರು.
ನಮ್ಮ ನಿತ್ಯದ ಜೀವನ ಕ್ರಮದಲ್ಲಿ ಒಂದು ಗಂಟೆಯಾದರೂ ನಮ್ಮ ದೇಹಾರೋಗ್ಯದ ಕಡೆಗೆ ಗಮನಹರಿಸಿದರೆ ಒಂದಷ್ಟು ಸುಸ್ಥಿತಿಯಲ್ಲಿರಿಸಿಕೊಳ್ಳಲು ಸಾಧ್ಯವಿದೆ. ನಿರಂತರ ಯೋಗ ಅದು ಬದ್ಧತೆಯಿಂದ ಕೂಡಿರಬೇಕು. ಈಗಿನ ಪರಿಸ್ಥಿತಿ ನೋಡಿದರೆ ಪ್ರಪಂಚದ ಮುಂದಿನ ಜಮಾನ ಯೋಗದ ಜಗತ್ತಾಗಿ ಪರಿಣಮಿಸುವ ಮೂಲಕ ಎಲ್ಲರೂ ಯೋಗದ ಕಡೆಗೆ ಮುಖ ಮಾಡುವಂತಾದರೆ ಅಚ್ಚರಿಪಡುವಂತಿಲ್ಲ. ಇದಕ್ಕೆ ಎಲ್ಲರೂ ಸಮರ್ಪಣಾ ಭಾವದಿಂದ ತೊಡಗಿಸಿಕೊಳ್ಳಬೇಕಾಗಿದೆ. ನಮ್ಮ ನಮ್ಮ ಆರೋಗ್ಯ ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕಾಪಿಟ್ಟುಕೊಳ್ಳಬೇಕಿದೆ. ಆರೋಗ್ಯ ಸುಧಾರಣೆಯ ಮೂಲಕ ಆರೋಗ್ಯವಂತ ಸಮಾಜಕ್ಕೆ ನಾವು ಸಹಕರಿಸಬೇಕಾಗಿದೆ ಎಂದ ಶ್ರೀಗಳು ಶ್ರೀಮಠದ ಮೂಲಕ ರಾಷ್ಟ್ರೀಯ ಯೋಗ ಶಿಕ್ಷಣ ಸಂಸ್ಥೆಯವರು ಉಚಿತವಾಗಿ ಯೋಗ ನಡೆಸಿಕೊಡುವ ಈ ಕ್ರಮವನ್ನು ಎಲ್ಲರೂ ಪಡೆಯಿರಿ. ನೀವೆಲ್ಲ ನಿಮ್ಮ ಅಕ್ಕಪಕ್ಕದವರು ಸೇರಿದಂತೆ ಇತರರು ಪಾಲ್ಗೊಳ್ಳಲು ಹೇಳಿ ಅವರನ್ನು ಕರೆತನ್ನಿ ಎಂದು ಕರೆ ನೀಡಿದರು.
ಮುಖ್ಯ ಅತಿಥಿ ಜಿಲ್ಲಾ ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ.ಟಿ. ಶಿವಕುಮಾರ್ ಮಾತನಾಡಿ ನೂರಾರು ಸಮಸ್ಯೆಗಳಿದ್ದರೆ ಅದಕ್ಕೆ ನಾವು ಪರಿಹಾರ ಕಂಡುಕೊಳ್ಳಬಹುದು. ಆದರೆ ದೇಹಕ್ಕೆ ಒಂದೇ ಒಂದು ಜಾಡ್ಯ ಬಂತೆಂದರೆ ಅದರ ಕಡೆಗೆ ನಮ್ಮ ಚಿಂತೆ ಇರುತ್ತದೆ. ದೇಹ ಗಟ್ಟಿಯಾಗಿದ್ದರೆ ಮಾತ್ರ ಏನಾದರೂ ಸಾಧನೆ ಸಾಧ್ಯ. ಅಂತಹ ಸದೃಢ ದೇಹ ಸಂಪಾದಿಸಲು ಯೋಗದಿಂದ ಸಾಧ್ಯವಿದೆ. ಶಾರೀರಿಕ ಸಮತೋಲನ ಜೊತೆಗೆ ಮಾನಸಿಕ ಒತ್ತಡಕ್ಕೂ ಇದು ಸಹಕಾರಿಯಾಗುವ ಹಾಗೆಯೇ ಸರಿಯಾದ ಆಹಾರ, ನಿದ್ದೆ ಇತ್ಯಾದಿ ಉಪಕ್ರಮಗಳಿಂದ ಉತ್ತಮವಾದ ಆರೋಗ್ಯ ಸಂಪಾದಿಸಲು ಸಾಧ್ಯವಿದೆ. ಹಾಗೆ ಚಿಕಿತ್ಸೆ ದೊಡ್ಡದಲ್ಲ ಆರೋಗ್ಯ ದೊಡ್ಡದು. ಜಗತ್ತಿಗೆ ಯೋಗ ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲಬೇಕು. ಅಂತ ವಿಶ್ವಯೋಗ ಆರಂಭವಾಗಿ ಇದೀಗ ಹತ್ತು ವರ್ಷಗಳಾಗುತ್ತಿದ್ದು ಮುಂದಿನ 21ಕ್ಕೆ ದಶಮಾನೋತ್ಸವದ ಆಚರಿಸುವ ಹೊಸ್ತಿಲಲ್ಲಿ ನಾವು ಇದ್ದೇವೆ. ಅದರಿಂದ ಯೋಗದ ಮಹತ್ವವನ್ನು ಪ್ರಪಂಚದ ನಾನಾ ದೇಶಗಳು ಬೆಂಬಲಿಸಿ ಅನುಷ್ಠಾನಕ್ಕೆ ತರಲು ಮುಂದಾಗಿರುವುದು ಸಂತಸದ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು.
ಮತ್ತೋರ್ವ ಅತಿಥಿ ಚಿತ್ರದುರ್ಗ ಜಿಲ್ಲೆಯ ಯೋಗಾಚಾರ್ಯ ಎಂದೇ ಖ್ಯಾತರಾಗಿರುವ ಎಲ್.ಎಸ್. ಚಿನ್ಮಯಾನಂದ ಮಾತನಾಡಿ, ಆನಂದ ಅನ್ನುವುದು ಯಾವುದೇ ಭೌತಿಕ ವಸ್ತುಗಳಲ್ಲಿಲ್ಲ ಬದಲಿಗೆ ಆರೋಗ್ಯದಲ್ಲಿದೆ. ಅದನ್ನು ಸಂಪಾದಿಸಿದರೆ ಎಲ್ಲವನ್ನು ಸಂಪಾದಿಸಬಹುದು. ಯಾರ ಬಲವಂತಕ್ಕೆ ಯೋಗ ಮಾಡದೆ ವೈಯಕ್ತಿಕ ಹಿತಾಸಕ್ತಿಗೆ ಮಾಡಿ ಎಂದು ಸಲಹೆ ನೀಡಿದರು.
ಕಡ್ಲೆಗುದ್ದು ಪ್ರೌಢಶಾಲೆಯ ಮುಖ್ಯಶಿಕ್ಷಕ ಮಹೇಶ್ ಕೆ.ಎನ್. ಮಾತನಾಡಿ, ಆರೋಗ್ಯದಿಂದಲೇ ಎಲ್ಲವೂ ಸಾಧ್ಯವಿದೆ. ನಾವು ವಸ್ತುಗಳಿಗೆ ಆದ್ಯತೆ ನೀಡಿ ಆರೋಗ್ಯದ ಕಡೆಗೆ ನಿರ್ಲಕ್ಷ್ಯ ಮಾಡಿರುವುದರಿಂದ ಹಾಗೂ ಪರಿಸರ ಶೈಲಿಯ ಜೀವನ ಕ್ರಮಕ್ಕೆ ವಿರುದ್ಧವಾದ ನಮ್ಮ ಬದುಕಿನ ನಡೆ ಆಗಿರುವುದರಿಂದ ಅಸಮತೋಲನಕ್ಕೆ ಕಾರಣವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಒಂದೂ ಕಾರಣ ಎಂದು ಹೇಳಿದರು. ಆದ್ದರಿಂದ ಯೋಗದಿಂದ ಮಾನಸಿಕ ಸದೃಢತೆ ಸಾಧ್ಯವಿದೆ. ಈಗೀಗ ಚಿಕ್ಕ ಚಿಕ್ಕ ಕಾರಣಕ್ಕೂ ಆತ್ಮಹತ್ಯೆ ಹಾದಿ ಹಿಡಿದಿರುವುದು ವಿಷಾದ ಸಂಗತಿ ಎಂದ ಅವರು ಇಂತಹ ಸಾಮಾಜಿಕ ಅನಿಷ್ಟ ಪದ್ಧತಿಗೆ ಯೋಗ ಮದ್ದಾಗಿದ್ದು ಅದನ್ನು ಮೆಟ್ಟಿ ನಿಲ್ಲಲು ಸಹಕಾರಿಯಾಗಿದೆ. ಮುರುಘಾಮಠ ಸಾಮಾಜಿಕ ಕಾರ್ಯಗಳಿಗೆ ಎಲ್ಲ ರೀತಿಯ ಸಲಹೆ ಸಹಕಾರ ನೀಡುತ್ತಿರುವುದು ಅದನ್ನು ಸಮಾಜ ಸದ್ವಿನಿಯೋಗ ಮಾಡಿಕೊಳ್ಳಬೇಕೆಂದು ಹೇಳಿದರು.
ಅಮೃತ ಆಯುರ್ವೇದ ಮೆಡಿಕಲ್ ಕಾಲೇಜಿನ ಉಪನ್ಯಾಸಕ ಭರಮಸಾಗರ ತಿಪ್ಪೇಸ್ವಾಮಿ ಎಂ. ಮಾತನಾಡಿ, ಜನರ ದೌರ್ಬಲ್ಯವನ್ನು ಅರ್ಥ ಮಾಡಿಕೊಂಡಿರುವ ಈಗಿನ ಸಂದರ್ಭದಲ್ಲಿ ಎಲ್ಲವೂ ವ್ಯಾಪಾರೀಕರಣವಾಗಿ ಮಾನವೀಯ ಸಂಬಂಧ ಅರ್ಥಾತ್ ಮಾನವೀಯತೆ ಕಡಿಮೆಯಾಗಿರುವ ಈ ಸಂದರ್ಭದಲ್ಲಿ ಮುರುಘರಾಜೇಂದ್ರ ಮಠದಲ್ಲಿ ರಾಷ್ಟ್ರೀಯ ಯೋಗ ಶಿಕ್ಷಣ ಸಂಸ್ಥೆಯವರು ಉಚಿತವಾಗಿ ಯೋಗ ಕಲಿಸಲು ಮುಂದಾಗಿರುವುದು ಅನುಕರಣೀಯ ಹಾಗೂ ಮಾದರಿ ನಡೆ ಎಂದರು. ಯೋಗದ ಬಗ್ಗೆ ಅನೇಕ ಸಲಹೆ ಹಾಗೂ ಮಾಹಿತಿಗಳನ್ನು ನೀಡುತ್ತಾ ಕೆಲ ನಿಮಿಷಗಳ ಕಾಲ ಯೋಗ ಅದರ ಬಗೆಗಿನ ಮಾಹಿತಿಯನ್ನು ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಉಚಿತ ಯೋಗ ತರಗತಿ ನಡೆಸಿಕೊಡುವ ರಾಷ್ಟ್ರೀಯ ಯೋಗ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಮಂಜುನಾಥ್ ಎಂ.ಆರ್. ಹಾಗೂ ಪ್ರಧಾನ ಕಾರ್ಯದರ್ಶಿ ಬಸವರಾಜ್ ಎಲ್.ಎಸ್. ಉಪಸ್ಥಿತರಿದ್ದು ಕಾರ್ಯಕ್ರಮ ನಡೆಸಿಕೊಟ್ಟರು.
ಜಮುರಾ ಕಲಾಲೋಕದ ಉಮೇಶ್ ಪತ್ತಾರ್ ವಚನ ಗಾಯನ, ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಡಿ.ಪಿ. ಕೃತಿಕಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ನಾಳೆಯಿಂದ ಪ್ರತಿ ದಿನ ಬೆಳಗ್ಗೆ 5:45 ಗಂಟೆಯಿಂದ ಶ್ರೀ ಮುರುಘಾಮಠದ ಬಸವೇಶ್ವರ ಸಭಾಂಗಣದಲ್ಲಿ ಯೋಗ ತರಗತಿಗಳು ಆರಂಭವಾಗಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.







