
17 Apr 2025
ಚಿತ್ರದುರ್ಗ, ಏ. 17 ಕೃತಕ ಬುದ್ಧಿಮತ್ತೆ ನಮ್ಮಲ್ಲಿರುವ ಕಾಯಿಲೆಗಳನ್ನು ಕಂಡು ಹಿಡಿಯುತ್ತದೆ. ತೋಟಗಾರಿಕೆಯನ್ನು ಹೇಗೆ ಉತ್ತಮಗೊಳಿಸಬಹುದೆಂದು ಮಾಹಿತಿ ಒದಗಿಸುತ್ತದೆ. ಮುಂದಿನ ದಿನಗಳಲ್ಲಿ ವ್ಯಕ್ತಿಯ ದಿನನಿತ್ಯದ ಕೆಲಸ ಕಾರ್ಯಗಳನ್ನು ಕೃತಕ ಬುದ್ಧಿಮತ್ತೆ ಮೂಲಕ ಮಾಡಿಸುವ ವ್ಯವಸ್ಥೆ ಬರಲಿದೆ. ಇದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು. ಸ್ಮಾರ್ಟ್ ಫೋನ್‌ನಿಂದ ಜಗತ್ತು ಇಂದು ಹಳ್ಳಿಯಂತಾಗಿದೆ ಎಂದು ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪಿ.ಬಿ. ಭರತ್ ಹೇಳಿದರು.
ನಗರದ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ ತಾಲ್ಲೂಕಿನ ಲಕ್ಷ್ಮೀಸಾಗರದಲ್ಲಿ ನಡೆಯುತ್ತಿರುವ ಎನ್.ಎಸ್.ಎಸ್. ಶಿಬಿರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ ವಿಷಯ ಕುರಿತು ಮಾತನಾಡಿದರು.
ಮುಖ್ಯಅತಿಥಿ ಬೃಹನ್ಮಠ ಪ.ಪೂ. ಕಾಲೇಜಿನ ಪ್ರಾಚಾರ್ಯ ರಾಜೇಶ್ ಮಾತನಾಡಿ, ಎನ್.ಎಸ್.ಎಸ್. ಘಟಕದಿಂದ ಅನೇಕ ಪ್ರಯೋಜನಗಳಿವೆ. ವಿದ್ಯಾರ್ಥಿ ಜೀವನದಲ್ಲಿ ಸಹಬಾಳ್ವೆ ಕಲಿಸುತ್ತದೆ. ಮನೆಯಲ್ಲಿನ ಪ್ರೀತಿಗೂ ಇದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಇಲ್ಲಿ ಪೊರಕೆ ಹಿಡಿಯದವರೆಲ್ಲ ಪೊರಕೆ ಹಿಡಿದಿದ್ದಾರೆ. ಬದುಕುವ ರೀತಿಯನ್ನು ಇಂಥ ಶಿಬಿರಗಳು ಕಲಿಸುತ್ತವೆ. ಇದು ಸಾಕಷ್ಟು ಖುಷಿ ನೀಡುತ್ತದೆ. ಅವಕಾಶಗಳು ಬಂದಾಗ ಉಪಯೋಗಿಸಿಕೊಳ್ಳಬೇಕು. ಶಿಬಿರಗಳಲ್ಲಿ ಆಗುವ ಅನುಭವ ಎಲ್ಲಿಯೂ ಸಿಗಲು ಸಾಧ್ಯವಿಲ್ಲ ಎಂದರು.
ಡಾ. ಎ.ಜೆ. ಶಿವಕುಮಾರ್ ಮಾತನಾಡಿ, ಎನ್‌ಎಸ್ಎಸ್ ಶಿಬಿರವು ಬದುಕಿನಲ್ಲಿ ಶಿಸ್ತನ್ನು ಕಲಿಸುತ್ತದೆ. ಮನುಷ್ಯ ಪ್ರತಿಷ್ಠೆ ಹಿಂದೆ ಹೋಗುತ್ತಿದ್ದಾನೆ. ಶಿಬಿರದಲ್ಲಿ ಆಗುವ ಅನುಭವ ಅತೀತವಾದದ್ದು ಎಂದು ಹೇಳಿದರು.
ಡಾ. ಕೆ. ರಮೇಶ್ ಮತ್ತು ಟಿ.ಎನ್. ಗಿರೀಶ್ ಮಾತನಾಡಿ, ದೇಶೀ ಜ್ಞಾನ ಪರಂಪರೆ ಮತ್ತು ಆಧುನಿಕತೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ವಿದ್ಯಾರ್ಥಿಗಳು ಶಿಬಿರಗಳಲ್ಲಿ ಭಾಗವಹಿಸುವುದರಿಂದ ನಿಮ್ಮ ಬುದ್ಧಿಮತ್ತೆ ವಿಭಿನ್ನವಾಗಿ ರೂಪುಗೊಳ್ಳುತ್ತದೆ ಎಂದರು.
ಲಕ್ಷ್ಮೀಸಾಗರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಶ್ರೀಮತಿ ತಾರಾಕ್ಷ. ವಿಜಯಕುಮಾರ್, ವಿಜಯಾನಂದಪ್ಪ ವೇದಿಕೆಯಲ್ಲಿದ್ದರು.
ಶಿಬಿರಾರ್ಥಿಗಳು ಗ್ರಾಮದಲ್ಲಿ ಶ್ರಮದಾನ ಮಾಡಿದರು.
ಕು! ರಾಜೇಶ್ವರಿ ಪ್ರಾರ್ಥಿಸಿದರು. ಕು| ಶ್ವೇತ ಸ್ವಾಗತಿಸಿದರು. ಕುಃ ಸಿಂಧು ನಿರೂಪಿಸಿದರು.