top of page

ಕೃಷಿಮೇಳ: ವಿಷಯ: ಕೃಷಿ ಸಮಸ್ಯೆ ಮತ್ತು ಪರಿಹಾರೋಪಾಯಗಳು

8 Oct 2024

ಕೃಷಿಮೇಳ: ವಿಷಯ: ಕೃಷಿ ಸಮಸ್ಯೆ ಮತ್ತು ಪರಿಹಾರೋಪಾಯಗಳು
ಜಯದೇವ ಜಗದ್ಗುರುಗಳು 150ನೇ ಜಯಂತ್ಯುತ್ಸವ ಅಂಗವಾಗಿ ಕೃಷಿ ಮೇಳ, ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ, ಜೊಡೆತ್ತು ಪ್ರದರ್ಶನ ಮತ್ತು ಸಾಕು ಪ್ರಾಣಿಗಳ ಪ್ರದರ್ಶನ ಆಯೋಜಿಸಲಾಗಿತ್ತು. ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ಕರ್ನಾಟಕ ಸರ್ಕಾರದ ಸಾರಿಗೆ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ನೆರವೇರಿಸಿದರು. ಕಾರ್ಯಕ್ರಮವನ್ನು ರೈತ ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲಾ ಶರಣ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಕೆ.ಎಂ. ವೀರೇಶ್ ಸ್ವಾಗತಿಸಿದರು.
ಕರ್ನಾಟಕ ಸರ್ಕಾರದ ಸಾರಿಗೆ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿಯವರು ಮಾತನಾಡಿ ನಮ್ಮ ಕ್ಷೇತ್ರದ 23 ಸರ್ಕಾರಿ ಶಾಲೆಗಳನ್ನು ಐಟೆಕ್ ಶಾಲೆಗಳನ್ನಾಗಿ ಪರಿವರ್ತನೆ ಮಾಡಿ ದತ್ತು ಸ್ವೀಕರಿಸಿ ಅವುಗಳನ್ನು ಮಾದರಿ ಶಾಲೆಗಳನ್ನಾಗಿ ಮಾಡಿದ್ದೇವೆ. 1963 ರಲ್ಲಿ ಬರಗಾಲ ಬಂದಾಗ ಹೆಚ್ಚು ಇಳುವರಿ ಬೇಕು ಎನ್ನುವ ಕಾರಣಕ್ಕಾಗಿ ರಾಸಾಯನಿಕೆಗಳನ್ನು ಬಳಸಿ ರೈತ ಕೃಷಿ ಮಾಡಲು ಆರಂಭಿಸಿದೆವು. ಅದಕ್ಕಿಂತ ಹಿಂದೆ ಎಲ್ಲಾ ಕಡೆಯೂ ಸಾವಯವ ಕೃಷಿಯನ್ನೇ ರೈತರು ಮಾಡುತ್ತಿದ್ದರು ಎಂದರು. ಜಯದೇವ ಜಗದ್ಗುರುಗಳು ಜಯದೇವ ಹೃದ್ರೋಗ ಆಸ್ಪತ್ರೆ ತೆರೆಯಲು ಕಾರಣರಾದವರು ಅಂತ ಶ್ರೀಗಳ 150 ನೇ ಜಯಂತಿ ಅಂಗವಾಗಿ ಚಿತ್ರದುರ್ಗ ಜಿಲ್ಲೆಯಲ್ಲೂ ಜಯದೇವ ಹೃದ್ರೋಗಾಲಯವನ್ನು ತೆರೆಯಲು ಅಧಿವೇಶನದಲ್ಲಿ ಒತ್ತಾಯಮಾಡುವುದಾಗಿ ತಿಳಿಸಿದರು.
ಎಸ್.ಜೆ.ಎಂ. ವಿದ್ಯಾಪೀಠದ ಅಧ್ಯಕ್ಷರಾದ ಶ್ರೀ ಶಿವಯೋಗಿ ಕಳಸದ ಮಾತನಾಡಿ ನಮ್ಮ ರಾಜ್ಯದಲ್ಲಿ ಸಾವಯವ ಕೃಷಿಯನ್ನು ಬೆಳೆಯಲು ಯಾವುದೇ ತೊಂದರೆ ಇಲ್ಲ. ಆದರೆ ರೈತನು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕಿದೆ. ಶೇ. 70% ಕ್ಕಿಂತ ಹೆಚ್ಚು ಕೃಷಿಕರು ಈ ದೇಶದಲ್ಲಿ ಇನ್ನು ಹೆಚ್ಚಿನ ಉತ್ಪಾದನೆಗೆ ಗಮನ ಹರಿಸಬೇಕು. ಕೃಷಿ ಪದವಿಯ ನಂತರ ವಿದ್ಯಾರ್ಥಿಗಳು ಮರಳಿ ತಮ್ಮ ಊರಿಗೆ ಬಂದು ವೈಜ್ಞಾನಿಕ ಕೃಷಿಯನ್ನು ಬೆಂಬಲಿಸ ಬೇಕಾಗಿದೆ, ಶರಣ ಸಂಸ್ಕೃತಿ ಉತ್ಸವ ನಿಮ್ಮೆಲ್ಲರ ಮನೆ ಮನೆ ಹಬ್ಬವಾಗಿದೆ ಎಂದರು.
ತುಮಕೂರು ಶ್ರೀ ಸಿದ್ದಗಂಗಾ ಕ್ಷೇತ್ರದ ಶ್ರೀ ನಿ.ಪ್ರ.ಸ್ವ. ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ ಮಧ್ಯ ಕರ್ನಾಟಕದಲ್ಲಿ ನಡೆಯುವ ಬಹದೊಡ್ಡ ಉತ್ಸವ ಎಂದರೆ ಶರಣ ಸಂಸ್ಕೃತಿ ಉತ್ಸವವಾಗಿದೆ. ಶರಣ ಸಂಸ್ಕೃತಿ ಉತ್ಸವದ ಮೂಲಕ ರೈತರಿಗೆ ಮಕ್ಕಳಿಗೆ ಸಾಂಸ್ಕೃತಿಕ ವಿಷಯಗಳಿಗೆ ಒತ್ತು ನೀಡುತ್ತಾ ಬಂದಿದ್ದಾರೆ. ಅದರಲ್ಲಿ ಕೃಷಿಗೆ ಹೆಚ್ಚಿನ ಮಹತ್ವವನ್ನು ಶ್ರೀ ಮಠ ನೀಡುತ್ತಾ ಬಂದಿದೆ. ಡಾಕ್ಟರ್ ಆಗಲು ಇಂಜಿನಿಯ‌ರ್ ಆಗಲು ಎಲ್ಲಾ ಮಕ್ಕಳು ಕೈ ಎತ್ತಿದರೇ ರೈತರಾಗಲು ಅಥವ ಕೃಷಿಕನಾಗಲು ಯಾವ ಮಕ್ಕಳು ಕೈ ಎತ್ತುವುದಿಲ್ಲ . ಕಾರಣ ರೈತನ ಕೆಲಸ ಕಷ್ಟದ ಕೆಲಸ ಚಳಿ, ಮಳೆ ಗಾಳಿ ಬಿಸಿಲನ್ನು ಲೆಕ್ಕಿಸದೆ ರೈತನು ಕೆಲಸ ಮಾಡಬೇಕಿದೆ. ಕೃಷಿ ಮಾಡಲು ಮನೆಮಂದಿ ಎಲ್ಲಾ ಬೇಕು. ಇವತ್ತಿನ ಆಹಾರದಿಂದ ಆರೋಗ್ಯ ಹದಗೆಡುತ್ತಿದೆ. ಜಯದೇವ ಜಗದ್ಗರುಗಳ ದೂರ ದೃಷ್ಟಿ ಅಪಾರವಾದದ್ದು ಆಕಾಲದಲ್ಲಿಯೇ ನಾಡಿನಾದ್ಯಂತ ವಿದ್ಯಾರ್ಥಿನಿಲಯಗಳನ್ನು ನಿರ್ಮಾಣಮಾಡಿದರು. ಅಂತಹ ಮಹಾತ್ಮರ 150 ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳುವುದೇ ನನ್ನ ಭಾಗ್ಯ ಎಂದು ಆಶೀರ್ವಚನ ನೀಡಿದರು.
ಜಯದೇವ ಜಗದ್ಗುರುಗಳು ಈ ನಾಡಿಗೆ ಕೊಟ್ಟ ಕೊಡುಗೆಯನ್ನು ಸ್ಮರಿಸಲು ಅವರ 150 ನೇ ಜಯಂತೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಮುರುಘಾಮಠದ 24 ನೇ ಜಗದ್ಗುರುಗಳಾದ ಜಯದೇವ ಜಗದ್ಗುರುಗಳು ಸಮಾಜದ ಎಲ್ಲಾ ವರ್ಗಗಳಿಗೂ ಉಪಯೋಗವಾಗುವಂತಹ ಕಾರ್ಯಗಳನ್ನು ಮಾಡಿದ್ದಾರೆ. 1924 ರಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮಗಾಂಧೀಜಿಯವರಿಗೆ ವಚನ ಪುಸ್ತಕಗಳನ್ನು ಕೊಟ್ಟು ಬಸವಣ್ಣನವರ ವಿಚಾರದಾರೆಗಳನ್ನು ಪರಚಯಿಸಿಕೊಟ್ಟವರು, ಜಯದೇವ ಜಗದ್ಗುರುಗಳಾಗಿದ್ದಾರೆಂದು ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.
ಕಾರಿಗನೂರಿನ ಪ್ರಗತಿಪರ ರೈತ ಶ್ರೀ ತೇಜಸ್ವಿ ವಿ ಪಟೇಲ್ ಮಾತನಾಡಿ ಒಬ್ಬ ರೈತ ನಾಲ್ಕು ತಿಂಗಳು ಬೆಳೆದ ಬೆಳೆಯನ್ನು ಮಾರುಕಟ್ಟೆಯಲ್ಲಿ ಬಂಡವಾಳಗಾರರು ಕೇಳಿದ ಬೆಲೆಗೆ ಮಾರಾಟ ಮಾಡ ಬೇಕಾಗುತ್ತದೆ. ರೈತನಿಗೆ ಯಾರ ಬಯವೂ ಇಲ್ಲ ಆನೆ, ಹುಲಿ, ಚಿರತೆ ಯಂತಹ ಕ್ರೂರ ಪ್ರಾಣಿಗಳಿದ್ದರೂ ರೈತ ಭಯವಿಲ್ಲದೆ ಕೃಷಿ ಮಾಡುತ್ತಾನೆ. ಆದರೆ ಅವನಿಗೆ ಭಯ ಇರುವುದು ಇಂದಿನ ಮಾರುಕಟ್ಟೆಯ ಮೇಲೆ. ಉಣ್ಣೆ ರಕ್ತ ಹೀರುವಂತೆ ರೈತನ ಬೆಳೆಯ ಹಣವನ್ನೆಲ್ಲ ಸಾಲ ಹೀರುತ್ತಿದ್ದೆ ಎಂದರು.
ಈಚಘಟ್ಟದ ರೈತ ಸಿದ್ದವೀರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಚಿತ್ರದುರ್ಗ ಜಿಲ್ಲೆ ಸದಾ ಬರಗಾಲದ ಪ್ರದೇಶ ಮಳೆ ಬಂದರೂ ರೈತರಿಗೆ ತೊಂದರೆ ಬರದೇ ಇದ್ದರೂ ತೊಂದರೆ. ರೈತನ ಬೆಳೆಗೆ ಬೆಂಬಲ ಬೆಲೆ ಇಲ್ಲದ ಕಾರಣ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾನೆ. ಮನಷ್ಯನ ಆಹಾರ ಇಂದು ಕಲುಷಿತವಾಗಿದೆ. ವಿಷದ ಆಹಾರವನ್ನು ನಾವಿಂದು ಸೇವಿಸುತ್ತಿದ್ದೇವೆ. ಇಂದು ಎಲ್ಲಾ ಅಧಿಕಾರಿಗಳು ರೈತನ ಕೃಷಿ ಸಮಸ್ಯೆಗಳಿಗೆ ಗಮನಹರಿಸಬೇಕಿದೆ. ಇಂದು ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಆಸ್ಪತ್ರೆಯನ್ನೇ ಅವಲಂಭಿಸುವ ಸ್ಥಿತಿ ಬಂದಿದೆ. ಮಗು ಹುಟ್ಟಿದ ತಕ್ಷಣವೇ ಐ ಸಿ ಯು ನಲ್ಲಿ ಚಿಕಿತ್ಸೆ ಪಡೆಯುವಂತಹ ಪರಿಸ್ಥಿತಿ ಇದೆ. ಎಲ್ಲಾ ರೈತರ ಹೊಲಗಳಿಗೆ ನೀರಿನ ವ್ಯವಸ್ಥೆಯನ್ನು ಮಾಡುವಂತಹ ಜವಾಬ್ದಾರಿ ಸರ್ಕಾರದ್ದು, ಸ್ವಾಮಿ ನಾಥನ್ ವರದಿ ಜಾರಿಗೆಯಾಗಬೇಕು. ಆರೋಗ್ಯಯುತವಾದ ಆಹಾರವನ್ನು ನೀಡುವುದು ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕು. ಚಿತ್ರದುರ್ಗದ ಏಕೈಕ ಜೀವನದಿ ವೇದಾವತಿ ನದಿಯನ್ನು ಪುನಃಚೇತನಗೊಳಿಸಿ ಹರಿಯಲು ಬಿಡಬೇಕು. ನಮ್ಮ ಮುಂದಿನ ಮಕ್ಕಳಿಗೆ ಆರೋಗ್ಯ ಪೂರ್ಣವಾದ ಆರೋಗ್ಯ ನೀಡುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.
ವಸ್ತು ಪ್ರದರ್ಶನದಲ್ಲಿ ತೋಟಗಾರಿಕೆ ಇಲಾಖೆ ಪ್ರಥಮ ಸ್ಥಾನ ಗಳಿಸಿದರೆ ಕೃಷಿ ಇಲಾಖೆ ದ್ವಿತೀಯ ಸ್ಥಾನಗಳಿಸಿದರೆ, ಭದ್ರಾ ಮೇಲ್ದಂಡೆ ಯೋಜನೆಯ ಮಾದರಿಗೆ ಜಲಸಂಪನ್ಮೂಲ ಇಲಾಖೆ ತೃತೀಯ ಸ್ಥಾನ ಗಳಿಸಿತು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಶಾಸಕರಾದ ಶ್ರೀ ಕೆ.ಸಿ ವಿರೇಂದ್ರ (ಪಪ್ಪಿ) ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರಗತಿಪರ ರೈತರಾದ ಹಿರಿಯೂರಿನ ಶ್ರೀ ಸಿದ್ದರಾಮಪ್ಪ, ದೊಣ್ಣೆ ಹಳ್ಳಿಯ ವೈ ಎನ್ ಸಂತೋಷಕುಮಾರ್ ಗಜ್ಜಗಾನಹಳ್ಳಿಯ ಪಿ. ಬಾಗ್ಯಮ್ಮ ಕುರಕಾಲ ಹಟ್ಟಿಯ ಟಿ ರವಿಕುಮಾರ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಆಕಾಶವಾಣಿಯ ನವೀನ್ ಮಸ್ಕಲ್ ನಿರೂಪಿಸಿದರು. ಎಸ್.ಜೆ.ಎಂ. ಕನ್ನಡ ಮಾದ್ಯಮಶಾಲೆ ಹಾಗೂ ನಾಟ್ಯ ರಂಜಿನಿ ನೃತ್ಯ ಕಲಾ ಕೇಂದ್ರ ಇವರಿಂದ ಸಾಂಸ್ಕೃತಿಕ ಸಂಭ್ರವು ಜರುಗಿತು.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page