top of page

ಕೃಷಿಮೇಳ ಪೂರ್ವಭಾವಿ ಸಭೆ

17 Sept 2024

ಚಿತ್ರದುರ್ಗ,ಸೆ, 17 ಚಿತ್ರದುರ್ಗ ಜಿಲ್ಲೆಯ ಕೃಷಿಯ ಸಮಗ್ರ ಸಮಸ್ಯೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಚರ್ಚೆ, ಸಂವಾದ, ಹೋರಾಟ, ಅದಕ್ಕೆ ಪರಿಹಾರ ಕಂಡುಕೊಳ್ಳುವ ತುರ್ತು ಅಗತ್ಯವಿದೆ ಎಂದು ಸೇರಿದ ಸ್ವಾಮಿಗಳು, ರೈತರು, ಕೃಷಿ ಚಿಂತಕರು ಆ ಪರವಾಗಿ ಕೆಲಸ ಮಾಡುತ್ತಿರುವವರ ಅಭಿಪ್ರಾಯ ಅದಾಗಿತ್ತು. ಇತ್ತೀಚೆಗೆ ಬೆಳೆಗಳಿಗೆ ರಾಸಾಯನಿಕ ಬಳಸುವುದರಿಂದ ನಾವು ತಿನ್ನುವ ಆಹಾರ ಸಂಪೂರ್ಣ ವಿಷಮಯವಾಗಿದೆ. ಸಾಧ್ಯವಾದಷ್ಟು ಇದರಿಂದ ಹೊರ ಬಂದು ಸಾವಯವ ಕೃಷಿಗೆ ಹೊತ್ತು ನೀಡಬೇಕಾದ ಅನಿವಾರ್ಯತೆ ಇದೆ ಎಂದೂ ಚರ್ಚಿಸಲಾಯಿತು.
ಅಂತಹ ಸಭೆ ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಬರುವ ಅಕ್ಟೋಬರ್ 5ರಿಂದ 13ರವರೆಗೆ ಶರಣ ಸಂಸ್ಕೃತಿ ಉತ್ಸವ ಹಾಗೂ ಬೃಹನ್ಮಠದ 24 ನೇ ಪೀಠಾಧಿಪತಿಗಳಾಗಿದ್ದ ಜಯದೇವ ಜಗದ್ಗುರುಗಳವರ 150ನೇ ಜಯಂತ್ಯುತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಸಲಹೆ ಸೂಚನೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದಿದ್ದ ಕೃಷಿಕರು ರೈತ ಪರ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸೇರಿದ್ದ ಸ್ವಾಮಿಗಳ ಸಮ್ಮುಖದಲ್ಲಿ ಶ್ರೀ ಮುರುಘಾಮಠದ ಅಲ್ಲಮಪ್ರಭು ಸಂಶೋಧನ ಕೇಂದ್ರದಲ್ಲಿ ಸೇರಿದ್ದ ಪೂರ್ವ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ ಅನೇಕರು ತಮ್ಮ ಅನುಭವಗಳನ್ನು ಆ ಮೂಲಕ ಹಂಚಿಕೊಂಡರು.
ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳವರು ಶ್ರೀ ಮುರುಘಾಮಠ ಹಿಂದಿನಿಂದಲೂ ಜನಪರವಾಗಿಯೇ ಬಹುತೇಕ ಕೆಲಸಗಳನ್ನು ಮಾಡುತ್ತಾ ಬಂದಿದೆ. ಅದು ಜಯದೇವಸ್ವಾಮಿಗಳ ಕಾಲಕ್ಕೆ ಇನ್ನಷ್ಟು ಮತ್ತಷ್ಟು ಪ್ರಖರವಾಗಿ ನಡೆಯಿತು. ಅದನ್ನ ಬಳಿವಿಡಿದುಕೊಂಡು ಬಂದು ಈಗಲೂ ಆ ಕಾರ್ಯ ನಡೆದಿದೆ. ಶರಣ ಸಂಸ್ಕೃತಿ ಉತ್ಸವದ ಒಂದು ಪ್ರಮುಖ ಆಕರ್ಷಕಣೆ ಅಂದರೆ ಕೃಷಿಮೇಳ, ಅದು ಈ ಬಾರಿ ಜಯದೇವ ಜಗದ್ಗುರುಗಳ ಜಯಂತ್ಯುತ್ಸವದ ಅಂಗವಾಗಿ ವಿಶೇಷವಾಗಿ ನಡೆಯಬೇಕೆಂಬುದು ಶ್ರೀಮಠದ ಆಶಯವಾಗಿದೆ. ಅದಕ್ಕೆ ಪೂರಕವಾಗಿ ಏನೇನು ಆಯೋಜನೆ ಮಾಡಬೇಕೆಂಬುದರ ಬಗ್ಗೆ ನಿಮ್ಮಿಂದ ಚರ್ಚೆ ನಡೆಯಲಿ ಎಂದು ನುಡಿದರು.
ಆಹಾರಕ್ಕೂ ಆರೋಗ್ಯಕ್ಕೂ ನೇರ ಸಂಬಂಧವಿದೆ. ಆದರೆ ಈಗ ಆ ಸಂಬಂಧದ ಕೊಂಡಿ ಕಳಚುತ್ತಿದೆ. ಅದು ಹೇಗೆಂದರೆ ತಿನ್ನುವ ಆಹಾರ ಸಂಪೂರ್ಣವಾಗಿ ವಿಷಕಾರಿಯಾಗಿದೆ. ಅದನ್ನ ಗಮನದಲ್ಲಿಟ್ಟುಕೊಂಡು ನಾವು ಸಾವಯವ ಕೃಷಿ ಪದ್ಧತಿಯ ಮೂಲಕ ಹೋಗದೆ ಹೋದರೆ ಭವಿಷ್ಯದಲ್ಲಿ ನಮಗೆ ಉಳಿಗಾಲವಿಲ್ಲ. ಗರ್ಭದರಲ್ಲಿರುವ ಶಿಶುವಿನಿಂದ ಹಿಡಿದು ಈಗೀಗ ಕಾಯಿಲೆಗಳು ಬರುತ್ತಿವೆ. 5-10 ವರ್ಷದ ಮೃಕಳಿಗೆ ಮಧುಮೇಹದಂತಹ ಕಾಯಿಲೆಗಳು ಬೆನ್ನತ್ತಿವೆ. ಸತ್ವಯುತ, ಸಾಂಪ್ರದಾಯಿಕ ಜೀವನ ಶೈಲಿ ಮಾಯವಾಗಿ, ಆಧುನಿಕ ಜೀವನಶೈಲಿಗೆ ಒಗ್ಗಿಕೊಂಡಿರುವ ನಾವು, ಅವಿಭೂತ ಕುಟುಂಬ ಮಾಯವಾಗಿ ಸ್ವಾರ್ಥಪರ ಜೀವನ ಕ್ರಮದಿಂದ ಮಾನವೀಯತೆ, ಮನುಷ್ಯತ್ವ ಕಡಿಮೆಯಾಗುತ್ತಾ ದುರಾಸೆ ಹೆಚ್ಚಾಗಿದೆ. ಎಂಎನ್‌ಸಿಗಳಿಂದ ಹಸಿರು ಕ್ರಾಂತಿ ನಲುಗಿದೆ. ಇಂತಹ ಸಂಕಷ್ಟದ ದಿನಗಳಲ್ಲಿ ನಾವು ಕೃಷಿ ಮೇಳಗಳನ್ನು ಅರ್ಥಪೂರ್ಣವಾಗಿ ನಡೆಸುವ ಮೂಲಕ ಜನರಲ್ಲಿ ಜಾಗೃತಿಯನ್ನು ಉಂಟುಮಾಡಬೇಕಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಾಧ್ಯಕ್ಷರಾದ ಈಚಘಟ್ಟದ ಸಿದ್ದವೀರಪ್ಪ ಅವರು ಸಲಹೆ ನೀಡಿದರು.
ಕೆಲವರ ಹಾದಿ ತಪ್ಪಿದ ವಿಜ್ಞಾನದ ನಡೆ, ಪ್ರಕೃತಿಗೆ ವಿರುದ್ಧವಾದ ಸಂಶೋಧನೆಯಿಂದ ಭೂಮಿ ಕಲುಷಿತಕಗೊಂಡಿದೆ. ಕೃಷಿ ಮೇಳದಲ್ಲಿ ಸಿರಿ ಧಾನ್ಯದ ಅಡುಗೆ, ದೇಸಿ ತಳಿಯ ಹಸುಗಳಿಗೆ ಪ್ರಾಧಾನ್ಯತೆ ನೀಡಬೇಕು. ಪ್ರತಿ ಹಂತದಲ್ಲಿ ಸಿರಿಧಾನ್ಯಗಳನ್ನು ಬಳಸುವುದರಿಂದ ಹಿಂದಿನ ಗತವೈಭವವನ್ನು ಮತ್ತೆ ಮರುಕಳಿಸಬಹುದು ಎಂಬ ಆಶಯ ವ್ಯಕ್ತಪಡಿಸಿದರು. ಭದ್ರಾ ಮೇಲ್ದಂಡೆ ಯೋಜನೆಯಂತೂ ನಮಗೆ ಕನ್ನಡಿಯೊಳಗಿನ ಗಂಟಾಗಿದೆ. ಇದನ್ನು ಹೋರಾಟ ಮಾಡಿ ಕಾರ್ಯಗತಗೊಳಿಸಿ, ಮತ್ತೆ ಇದರೊಂದಿಗೆ ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಗೆ ಕಾಯಕಲ್ಪ ನೀಡಬೇಕಾಗಿದೆ ಎಂದು ಸಲಹೆ ನೀಡುವುದರ ಮೂಲಕ ಗಮನ ಸೆಳೆದರು.
ಪಶುಪಾಲನಾ ಇಲಾಖೆಯ ಡಾ. ಮುರುಗೇಶ್ ಅವರು ಮಾತನಾಡಿ ಜೋಡೆತ್ತುಗಳ ಹಾಗೂ ವಿಶೇಷ ಸಾಕುಪ್ರಾಣಿಗಳ ಪ್ರದರ್ಶನವನ್ನು ಸಹ ಈ ಬಾರಿ ವಿಶೇಷವಾಗಿ ಮಾಡಲಾಗುವುದೆಂದರು.
ಚಿತ್ರದುರ್ಗ ನಗರಸಭೆಯ ಮಾಜಿ ಅಧ್ಯಕ್ಷರಾದ. ದೇವಿಕುಮಾರಿ ವಿಶ್ವನಾಥ್ ಅವರು ಮಾತನಾಡಿ ಜೆ.ಎಚ್. ಪಟೇಲ್ ಅವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಚಿತ್ರದುರ್ಗ ನಗರಕ್ಕೆ ಹೋರಾಟ ಮಾಡಿ ಶಾಂತಿ ಸಾಗರದಿಂದ ನೀರನ್ನು ತರಲಾಯಿತು. ಹಾಗೆ ಉಳಿದ ಕೆಲಸಗಳು ಸಹ ಹೋರಾಟದಿಂದಲೇ ಆಗಬೇಕೆಂದು ಸಲಹೆ ನೀಡಿದರು.
ಹೊಸದುರ್ಗದ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಜಿ. ಬಸವರಾಜ್ ಅವರು ಮಾತನಾಡಿ ರಾಸಾಯನಿಕ ಮುಕ್ತ ವ್ಯವಸಾಯ ಮಾಡುವ ಅನೇಕ ರೈತರಿದ್ದಾರೆ. ಅಂತಹ ರೈತರ ಪರಿಚಯ ಮಾಡಿಕೊಡಬೇಕು. ಹಾಗೆಯೇ ಜಿಲ್ಲೆಯ ಪರ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿಯೂ ಸಾವಯವ ಕೃಷಿ ಮಾಡುವಂತಹ ಅನೇಕ ಮಹನೀಯರಿದ್ದಾರೆ. ಅಂತವರ ಕಾರ್ಯಕ್ಷೇತ್ರ ದರ್ಶನವನ್ನು ಆಗಾಗ ಮಠಗಳು ಮಾಡಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದ ಅವರು ನಾಟಿ ಹಸುವಿನ ಉತ್ಪನ್ನ ಆರೋಗ್ಯಕ್ಕೆ ಬಹುಮುಖ್ಯವಾಗಿ ಉಪಯೋಗವಿದೆ. ಅಂತಹ ಉತ್ಪನ್ನಗಳನ್ನು ಈ ಸಂದರ್ಭದಲ್ಲಿ ಪ್ರದರ್ಶನಕೆ ಇಟ್ಟು ಸಾರ್ವಜನಿಕರಿಗೆ ಅದರ ಉಪಯೋಗ ಮಾಡಿಕೊಡಬೇಕು ಎಂದರು.
ಹಿರಿಯ ಪರ್ತಕರ್ತರಾದ ಜಿ.ಎಸ್. ಉಜ್ಜನಪ್ಪ ಮಾತಾಡಿ ನಾವು ಬಹಳಷ್ಟು ಮಾತನಾಡಿ ಕಡಿಮೆ ಕೆಲಸ ಮಾಡುತ್ತೇವೆ. ಆದರೆ ಜಾಸ್ತಿ ಕೆಲಸ ಮಾಡಿ ಕಡಿಮೆ ಮಾತನಾಡುವ ಮೂಲಕ ಸಮಗ್ರ ಕೃಷಿ ಬದುಕನ್ನು ಮಾದರಿ ಎನ್ನುವಂತೆ ಜಿಲ್ಲೆಯಲ್ಲಿ ಮಾಡಿ ತೋರಿಸುವ ಬಗ್ಗೆ ಸಲಹೆ ನೀಡಿದರು.
ಹಸಿರು ಅದು ಶಾಂತಿ ನೆಮ್ಮದಿ ಮತ್ತು ಸುಭಿಕ್ಷದ ಸಂದೇಶ ಸಾರುವ ಸಂಕೇತ. ಅದಕ್ಕೇ ಅನಾರೋಗ್ಯಕೆ ಕಾಡಿದರೆ ಇಡೀ ಬದುಕೇ ಕಲ್ಮಶವಾಗುತ್ತದೆ. ಅದು ಆಗಲು ಬಿಡಬಾರದೆಂಬ ಹಿನ್ನೆಲೆಯಲ್ಲಿ ಚಿತ್ರದುರ್ಗದ ಶ್ರೀಮಠ ಕಾಲಕಾಲಕ್ಕೆ ಜನಪರ ಯೋಜನೆಗಳನ್ನು ಜನಮುಖಿಯಾಗಿಯೇ ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ದಾವಣಗೆರೆ ವಿರಕ್ತ ಮಠದ ಡಾ. ಬಸವ ಪ್ರಭುಸ್ವಾಮಿಗಳವರು ನುಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಸಿ. ಸಿದ್ದರಾಮಣ್ಣ, ಪಿ. ಸಿ. ನಾಗರಾಜಪ್ಪ, ಕವಿತಾ ಎ.ಎನ್. ಮಲ್ಲಿಕಾರ್ಜುನ, ಎಚ್ .ಪ್ರಸನ್ನ, ಬಿ.ಎಸ್. ರಂಗಸ್ವಾಮಿ, ಸಿ. ನಾಗರಾಜ, ಎಂ. ಬಿ. ತಿಪ್ಪೇಸ್ವಾಮಿ, ಸಿ .ರುದ್ರಪ್ಪ ಜಾಲಿಕಟ್ಟೆ, ರಾಗಿ ಶಿವಲಿಂಗಪ್ಪ, ಕುಮಾರ್. ಟಿ, ಈಶ್ವರಪ್ಪ ಎಂ. ಜಿ ಎಸ್ .ಚಂದ್ರಮೌಳಿ, ಎಸ್ .ಮಹದೇವಪ್ಪ, ಸಿ.ಆರ್. ಜಯಪ್ಪ .ಎಂ .ಸದಾಶಿವಪ್ಪ, ಇಂದೂದರ ಎಚ್.ಎಸ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಜಿ.ಎಸ್.ಉಜ್ಜನಪ್ಪ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಮಾರಂಭಕ್ಕೆ ಅಲ್ಲಮಪ್ರಭು ಸಂಶೋಧನಾ ಕೇಂದ್ರದ ಡಾ.ವಿ.ನಾಗರಾಜ ಸ್ವಾಗತಿಸಿದರು. ಕೃಷಿ ಮೇಳದ ಸಂಘಟಕರಾದ ಪಿ.ವೀರೇಂದ್ರಕುಮಾರ್ ಕಾರ್ಯಕ್ರಮ ನಿರೂಪಿಸಿ, ಶರಣು ಸಮರ್ಪಣೆ ಮಾಡಿದರು.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page