
26 Aug 2024
ಚಿತ್ರದುರ್ಗ, ಆ, 26, ಮುರುಘಾಮಠದ ಐತಿಹಾಸಿಕ ರೂಪುರೇಷೆಯನ್ನು ಭವ್ಯವಾಗಿ ತ್ರಿಕರಣ ಶುದ್ಧಿಯಾಗಿ ರೂಪಿಸುವ ಕೆಲಸ ಎಲ್ಲ ಶ್ರೀಗಳಿಂದ ನಡೆದಿದೆ. ಅವರುಗಳು ಓಡಾಡಿದ ಪ್ರದೇಶ ಈ ಸುತ್ತ ಮುತ್ತಲ ಭಾಗವಾಗಿದೆ. ಅಂತಹವರ ಸಾಲಿನಲ್ಲಿ ಬರುವವರೇ ಶಿರಸಂಗಿ ಮಹಾಲಿಂಗ ಸ್ವಾಮೀಜಿಯವರು ಎಂದು ವಿಶ್ರಾಂತ ಪ್ರಾಚಾರ್ಯರಾದ ಎಸ್.ಎಂ. ಕೊಟ್ರೇಶಪ್ಪ ಅವರು ಅಭಿಪ್ರಾಯಪಟ್ಟರು.
ಅವರು ಚಿತ್ರದುರ್ಗದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಆಯೋಜಿಸಿರುವ ಅನುಭಾವ ಶ್ರಾವಣ ಸರಣಿ ಚಿಂತನ ಮಾಲೆಯ ಕಾರ್ಯಕ್ರಮ ನಗರದ ಗಾರಹಟ್ಟಿಯ ಚೋಳೇಶ್ವರ ದೇವಾಲಯದ ಆವರಣದಲ್ಲಿ ನಿನ್ನೆ ಏರ್ಪಡಿಸಿದ್ದು ಸಿರಸಂಗಿಯ ಮಹಾಲಿಂಗ ಸ್ವಾಮಿಗಳು ವಿಷಯ ಕುರಿತು ಮಾತನಾಡುತ್ತಾ, 25ನೇ ಜಗದ್ಗುರುಗಳಾಗಿ ಪಟ್ಟಕ್ಕೆ ಬಂದ ಅವರ ಬಗ್ಗೆ ಮಹಾದೇವ ಎಂಬ ಸಾಹಿತಿ ರಚಿಸಿದ "ಮಹಾಲಿಂಗೇಂದ್ರ ವಿಜಯ" ಗ್ರಂಥದಲ್ಲಿ ಶಿರಸಂಗಿ ಮಹಾಲಿಂಗ ಗುರುಗಳ ಬಗೆಗಿನ ಉಲ್ಲೇಖ ಇದೆ. ಇದನ್ನ ಮನಃಶಾಂತಿಗಾಗಿ ಬರೆದುದ್ದಾಗಿ ಸಾಹಿತಿಗಳು ತಿಳಿಸುತ್ತಾರೆ. ಶಿರಸಂಗಿ ಸ್ವಾಮೀಜಿಗಳಿಗೆ ಪ್ರಾಣಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಪಂಡಿತರಿಗೆ,ಗಾಯಕರಿಗೆ, ನಾಟ್ಯ ಕಲಾವಿದರಿಗೆ, ಪಾಮರರಿಗೆ, ಮಠದಲ್ಲಿ ಅವಕಾಶ ನೀಡಿ ಸತ್ಕರಿಸುತ್ತಿದ್ದರು. ಪ್ರತಿನಿತ್ಯ ವಚನಾನುಭವ ಗೋಷ್ಠಿ ನಡೆಸಿದ ಕೀರ್ತಿ ಶ್ರೀಗಳದ್ದು. ಸವಣೂರಿನಲ್ಲಿ ಕೂಡ ನವಾಬರು ಆಹ್ವಾನ ನೀಡಿ ಊರಿನ ತುಂಬಾ ಮೆರವಣಿಗೆ ಮಾಡಿ, ಗುರುಮಠ ಕಟ್ಟಿಸಿಕೊಡಲು ಮುಂದಾಗುತ್ತಾರೆ. ಒಮ್ಮೆ ಇವರು ಮಾಡಿದ ಚಿತ್ರದುರ್ಗದಿಂದ ಉಳಿವಿಗೆ ಕಾಲ್ನಡಿಗೆಯ ಯಾತ್ರೆಗೆ ಮೂರು ಲಕ್ಷ ಜನರ ಸೇರ್ಪಡೆಯಾಗಿತ್ತು ಎಂಬುದು ಇತಿಹಾಸ. ಇಂಥ ಶಿರಸಂಗಿ ಮಹಾಲಿಂಗ ಸ್ವಾಮೀಜಿಯವರು ಶಿರಸಂಗಿಯಲ್ಲಿ ಲಿಂಗೈಕ್ಯರಾಗುತ್ತಾರೆ ಎಂದು ತಮ್ಮ ಅನುಭಾವ ಹಂಚಿಕೊಂಡರು.
ಸಮಾರಂಭದ ಮತ್ತೋರ್ವ ಉಪನ್ಯಾಸ ನೀಡಲು ಆಗಮಿಸಿದ್ದ ಶಿಕ್ಷಕಿ ಅನಿತಾ ಟಿ.ಬಿ.ಯವರು ಗುಡ್ಡಾಪುರದ ದಾನಮ್ಮ ಅವರ ವಿಷಯ ಕುರಿತಾಗಿ ಮಾತನಾಡುತ್ತ ಸಮಾಜದಲ್ಲಿ ಸ್ತ್ರೀ ಸಮಾನತೆ, ವೃತ್ತಿ ಸಮಾನತೆ, ವರ್ಣ ಸಮಾನತೆ, ಸಾಧಿಸಲು ಹೊರಟ ಶಿವಶರಣೆ ದಾನಮ್ಮದೇವಿ ಯವರು ಒಬ್ಬರು. ಇಂಥ ದಾನಮ್ಮನವರನ್ನು ಕಾಣಲು ಲಕ್ಷಾಂತರ ಭಕ್ತರು ಚಟ್ಟಿ ಅಮಾವಾಸ್ಯೆಯಂದು ವಿಜಯಪುರಕ್ಕೆ ಭಕ್ತಿ ತುಂಬಿ ತಮ್ಮ ಹರಕೆ ಸಲ್ಲಿಸಲು ಈಗಲೂ ಬರುತ್ತಾರೆ. ಅವರಲ್ಲಿ ಅವ್ಯಕ್ತವಾದ ಶಕ್ತಿ ಒಂದು ಸಂಚರಿಸುವ ಭಾವ ನಮ್ಮ ಜನರಲ್ಲಿದೆ. ದಾನಮ್ಮ ನವರು ಬಸವಾದಿ ಶರಣರ ಮಾರ್ಗದರ್ಶನದಲ್ಲಿ ನಡೆದ ಶಿವಶರಣೆ. ವಿಜಯಪುರ ನಗರದಿಂದ ಸುಮಾರು 50 ಕಿಲೋ ಮೀಟರ್ ಬೆಟ್ಟ ಗುಡ್ಡದ ನಡುವೆ ಗುಡ್ಡಾಪುರದ ದಾನಮ್ಮನವರ ಸ್ಥಾನವಿದೆ. ಇವರ ಮೂಲ ಹೆಸರು ಲಿಂಗಮ್ಮ. ತಂದೆ ಅನಂತ ರಾಯರು ತಾಯಿ ಸಿರಸವ್ವ, ವಿಶ್ವಕರ್ಮ ಕಾಯಕದ ಕುಟುಂಬದಲ್ಲಿ ದಾನಮ್ಮನವರು ಜನಿಸುತ್ತಾರೆ. ಅಲ್ಲಮಪ್ರಭುವನ್ನು ಯೋಗ ಗುರುವಾಗಿ ಸ್ವೀಕರಿಸುತ್ತಾರೆ. ಒಮ್ಮೆ ಜಂಗಮರೊಬ್ಬರ ಮನೆಯಲ್ಲಿ ಶಿವ ಪೂಜೆಗೆಂದು ದಾನಮ್ಮನವರನ್ನ ಆಹ್ವಾನಿಸಲು, ಪೂಜೆ ಮುಗಿಸಿ ಪ್ರಸಾದ ಸ್ವೀಕರಿಸುವಾಗ ನಾನು ಜಂಗಮರಿಗೆ ಮೊದಲ ಪ್ರಸಾದ ನೀಡಲು ಬಯಸುತ್ತೇನೆ, ಹಾಗಾಗಿ ಜಂಗಮರನ್ನ ಆಹ್ವಾನಿಸಿ, ಎಷ್ಟು ಜನ ಜಂಗಮರೆಂದರೆ ಲಕ್ಷ ಲಕ್ಷ ಜನ ಜಂಗಮರು ಎನ್ನಲು ಆ ಮನೆಯವರು ಪ್ರಸಾದ ಸ್ವಲ್ಪವೇ ತಯಾರಾಗಿದೆ ಲಕ್ಷ ಜನರಿಗೆ ಹೇಗೆ ಬಡಿಸುವುದು. ಎಂದು ಕಳವಳಿಸುತ್ತಾರೆ, ಆಗ ದಾನಮ್ಮನವರು, ಕಳವಳ ಪಡಬೇಡಿ ಹಂಚಿ ತಿನ್ನುವುದು ಕಲ್ಯಾಣದ ಧೇಯ ಗುಣ. ಇಂದು ಬಂದ ಜಂಗಮರಿಗಲ್ಲ ಇವರೇ ಸ್ವತಃ ಪ್ರಸಾದ ಬಡಿಸುತ್ತಾರೆ. ಅಂತ ಶರಣೆ ದಾನಮ್ಮನವರು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಪ್ರಯಾಣ ಬೆಳೆಸಿ, ಶರಣ ತತ್ವವನ್ನು ಪ್ರಚಾರಪಡಿಸುತ್ತಾರೆ. ದೀನ ದಲಿತರ ಉದ್ಧಾರ ಮಾಡುವುದು, ದಾನ ಧರ್ಮದಲ್ಲಿ ಎತ್ತಿದ ಕೈ ಆದ್ದರಿಂದ ಅವರಿಗೆ ದಾನಮ್ಮನೆಂದು ಹೆಸರು ಇಡುತ್ತಾರೆ. ಧ್ಯಾನದಲ್ಲಿ ಕುಳಿತ ಹಾಗೆಯೇ ಲಿಂಗೈಕ್ಯರಾಗುವ, ಕರುನಾಡಿನ ಅನರ್ಥ್ಯ ರತ್ನ ದಾನಮ್ಮನವರು ಎಂದು ನುಡಿದರು.






