
2 Sept 2024
ಚಿತ್ರದುರ್ಗ, ಸೆ.2 : ಸಮಾನತೆ ಎಂಬ ಶ್ರೇಷ್ಠತೆಯ ಬೀಜ ಬಿತ್ತಿದ್ದು 12ನೇ ಶತಮಾನ. ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆ ವಚನ ಸಾಹಿತ್ಯ. ತಮ್ಮ ಅನುಭವವನ್ನು ಅನುಭಾವವಾಗಿಸಿ ಎಲ್ಲರಿಗೂ ಉಣಬಡಿಸಿದವರು ಬಸವಾದಿ ಶರಣರು. ಎಲ್ಲ ಧರ್ಮಗಳನ್ನು ಗೌರವಿಸುವ ಉದಾತ್ತತೆ ತೋರಿದವರು. ಬದುಕುವ ಧೈರ್ಯ, ಧೈರ್ಯ, ಸ್ಫೂರ್ತಿ ತುಂಬಿದ ಅವರು ಮೌಡ್ಯದ ಆಚರಣೆ ನಿಲ್ಲಿಸಿ, ಸಮಾನತೆ ಅದರ ಜೊತೆಗೆ ಕಾಯಕವೇ ಕೈಲಾಸ ಎಂಬ ತತ್ವದ ದಾರಿಯನ್ನು ತೋರಿ ಅದೇ ದಾರಿಯಲ್ಲಿ ಸಾಗಿ ಬಂದವರು ಗೋಸಲ ಚೆನ್ನಬಸವೇಶ್ವರರು ಎಂದು ಚಿತ್ರದುರ್ಗ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕ ನವೀನ್ ಮಸ್ಕಲ್ ಅವರು ಅಭಿಪ್ರಾಯಪಟ್ಟರು.
ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಆಯೋಜಿಸಿರುವ ಅನುಭಾವ ಶ್ರಾವಣ ಸರಣಿ ಚಿಂತನ
ಮಾಲೆಯು ತಾಲ್ಲೂಕಿನ ಚಿಕ್ಕಗೊಂಡನಹಳ್ಳಿಯಲ್ಲಿ ನಡೆದ ಸಂದರ್ಭದಲ್ಲಿ ಗೋಸಲ ಚೆನ್ನಬಸವೇಶ್ವರರು ಕುರಿತು ವಿಷಯದ ಮೇಲೆ
ಮಾತನಾಡಿದ ಅವರು, ವಚನಗಳೆಂದರೆ ಸರಳವಾದ ನುಡಿ, ಭಾಷೆ ಜೀವನದ ಆದರ್ಶಗಳು ಅವು. ಎಲ್ಲ ಧರ್ಮದ ಮೂಲ
ಆಶಯಗಳು ಆ ವಚನದಲ್ಲಿವೆ. ಮಾನವತೆಯನ್ನು ಮೇಲಕೆತ್ತಿ ಧರ್ಮದ ಆಶಯ ಕಾರುಣ್ಯ ತುಂಬಿದ ಧರ್ಮ ಅದು ಬಸವಧರ್ಮ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಾಹಿತಿಕ, ಸಾಂಸ್ಕೃತಿಕ ಸಂದರ್ಭಗಳಲ್ಲಿ ಗುಬ್ಬಿಯ ಜಾತ್ರಾ ಮಹೋತ್ಸವ ಕೂಡ ಒಂದು.
ದೇಶ ವಿದೇಶಗಳಿಂದ ಜನರು ಅಲ್ಲಿಗೆ ಆಗಮಿಸುತ್ತಾರೆ. ಗೋಸಲ ಚನ್ನಬಸವೇಶ್ವರರು ಅದ್ಭುತ ಅನುಭಾವಿಗಳು, ಜನಸಾಮಾನ್ಯರ
ಶೋಷಿತರ, ರೈತರ ಬಾಳಿಗೆ ಬೆಳಕಾದವರು ಗೋಸಲ ಚನ್ನಬಶ್ವೇಶ್ವರ. ಅಂತರಂಗವನ್ನು ಶುದ್ಧ ಮಾಡುವಲ್ಲಿ ಚನ್ನಬಸವೇಶ್ವರರ ಪಾತ್ರ
ಅನನ್ಯ. ವಚನ ಸಾಹಿತ್ಯ ಗುರುಲಿಂಗ ಜಂಗಮದ ಅರಿವನ್ನು ನಮಗೆ ಕಲಿಸಿದವು. ಅದರಂತೆಯೇ ಗೋಸಲ ಚೆನ್ನಬಸವೇಶ್ವರರು.
ಚಿತ್ರದುರ್ಗ ಭಾಗದಲ್ಲಿ ತಿಪ್ಪೇರುದ್ರ ಸ್ವಾಮಿಗಳು ಹೇಗೋ ಗುಬ್ಬಿಯ ಭಾಗದಲ್ಲಿ ಗೋಸಲ ಚನ್ನಬಸವೇಶ್ವರರು ಹಾಗೆಯೇ.
ಸಮಾನತೆಯ ಪರ, ಜನಪರ ಜೀವಪರ, ಕಾರುಣ್ಯಪರ ಸಮಾಜ ನಿರ್ಮಾಣವಾಗಬೇಕು ಎಂದು ಶ್ರಮಿಸಿದರು.
ಸಮಾರಂಭದ ಸಮ್ಮುಖ ವಹಿಸಿದ್ದ ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿಯವರು ಮಾತನಾಡುತ್ತಾ, ನಾವು ನೀವು ಕೇಳುವಾಗ ಶಬ್ದವಷ್ಟೇ ನಮಗೆ ಕೇಳುತ್ತದೆ. ಆದರೆ ಆ ರೂಪ ಕಣ್ಣಿಗೆ ಕಾಣೋ ಹಾಗೆ ಮಾಡಬೇಕಾದರೆ ಅಕ್ಷರಗಳ ಸಹಕಾರ ಬೇಕು. ಮಾತು ನಿರಾಕಾರ ಅಕ್ಷರ ಶಾಶ್ವತ, ದೇಹ ನಶ್ವರ, ಚೈತನ್ಯ ಈಶ್ವರ. ನಾವು ನಮ್ಮಗಳ ಚೈತನ್ಯವನ್ನು ಸಂಗೀತದ ಸ್ವರದಂತೆ ಜೀವನದ ಸ್ವರವನ್ನು ಹಿಡಿಯುವ ಸಾಧಕರು ನಾವಾಗಬೇಕು. ಆ ಎಂಬುದು ಮೊದಲ ಅಕ್ಷರವಾಗಿದೆ ಕಾರಣ ಹುಟ್ಟಿದ ಪ್ರಾಣಿಗಳು ಮನುಷ್ಯರು ಕೂಡ ಅಮ್ಮ ಅಮ್ಮ ಎಂದು ಕೂಗಿ ಕೊಳ್ಳುತ್ತವೆ. ಅ-ಎಂದರೆ ಅರಿವು. ಆ ಎಂದರೆ ಆಚರಣೆಯಾಗಿದೆ. ಈ ರೀತಿಯಾಗಿ ಅರಿವನ್ನ ಆಚರಿಸಿ ಇತರರಿಗೆ ಉತ್ತಮವಾದದ್ದನ್ನು ತಿಳಿಸಿ ತನ್ನ ಆಚರಣೆಗೆ ಒಳಪಡಿಸಿ ಊರ್ಧ್ವಮುಖವಾಗಿ ಬೆಳೆಯುವುದೇ ಜೀವನದ ಗುರಿಯಾಗಿದೆ. ಬಸವಾದಿ ಶರಣರು ಜ್ಞಾನಮಾರ್ಗ ಚೈತನ್ಯವಿದೆಯೆಂದು ಒಪ್ಪಿ ದೇಹವನ್ನು ಅಂಗವಾಗಿಸಿಕೊಂಡು ಅಂಗವನ್ನು ಜ್ಞಾನದಿಂದ ಲಿಂಗವಾಗಿಸಿಕೊಳ್ಳುವ ಮಾರ್ಗವನ್ನು ತೋರಿದವರು. ಉತ್ತಮವಾದ ಎಲ್ಲವನ್ನು ಒಳ ತುಂಬಿಕೊಳ್ಳಬೇಕು ಅದೇ ಅಂತರಂಗ ಶುದ್ದಿ. ಬಹಿರಂಗದಲ್ಲೂ ಇತರರಿಗೆ ಒಳ್ಳೆಯದನ್ನೇ ಬಯಸಿ ಗೋಚರಿಸುವಂತೆ ಮಾಡಬೇಕು ಇದೇ ಬಹಿರಂಗ ಶುದ್ದಿ. ಅಂತರಂಗ ಬಹಿರಂಗದಲ್ಲಿ ಸತ್ಯ ಶುದ್ಧ ಮೇಲು ಕೀಳೆನ್ನದೆ ಎಲ್ಲರನ್ನೂ ಸಮಾನ ಭಾವದಿಂದ ಕಂಡಾಗ ಕೂಡಲಸಂಗಮ ದೇವರನ್ನು ನುಡಿದರು. ಹೊಲಿಸಿಕೊಳ್ಳುವ ಪರಿ ಬಸವಣ್ಣನವರು ನಮಗೆ ತಿಳಿಸಿದ್ದಾರೆ ಎಂದು
ಸಮಾರಂಭದ ಸಾನಿಧ್ಯ ವಹಿಸಿದ್ದ ಮುರುಘಾಮಠದ ಮುರುಗೇಂದ್ರ ಸ್ವಾಮೀಜಿಯವರು ಮಾತನಾಡುತ್ತಾ ಬದುಕನ್ನು ನಡೆಸುವ ರೀತಿ ಹೇಗೆ ಎಂಬುದನ್ನು ತಿಳಿಸಿದವರು ಬಸವಾದಿ ಶರಣರು ಎಂದು ನುಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರುಗಳಾದ ಗೌಡ್ರನಾಗರಾಜ್, ತಿಪ್ಪೇಸ್ವಾಮಿ, ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭಕ್ಕೂ ಮುನ್ನ ದೇವಾಲಯಗಳ ಆವರಣದಲ್ಲಿ ಸಸಿಯನ್ನು ನೆಡಲಾಯಿತು. ಅಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತಜ್ಞವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಗ್ರಾಮದಲ್ಲಿ ನಡೆಸಲಾಯಿತು.
ಸಮಾರಂಭದ ಆರಂಭಕ್ಕೆ ಜಮುರಾ ಕಲಾವಿದರು ವಚನ ಸಂಗೀತ ಹಾಗೂ ಪ್ರಾರ್ಥನೆ ನಡೆಸಿಕೊಟ್ಟರು. ಸ್ವಾಗತವನ್ನು ಎಂ.ಎಂ. ನಾಗರಾಜ್, ನಿರೂಪಣೆಯನ್ನು ಪ್ರಭಾಕರ್ ಶರಣು ಸಮರ್ಪಣೆಯನ್ನು ಭರತ್ ಎಸ್.ಎಂ. ನಡೆಸಿಕೊಟ್ಟರು.


