top of page

ಚಿತ್ರದುರ್ಗದ ಮುರುಘಾ ಮಠದಲ್ಲಿ ಅಲ್ಲಮಪ್ರಭು ಜಯಂತಿ ಮತ್ತು ನೂತನ ವರ್ಷಾರಂಭ ಆಚರಣೆ

31 Mar 2025

ಚಿತ್ರದುರ್ಗ, ಮಾತಿ : ಆಧ್ಯಾತ್ಮಿಕ ಪರಂಪರೆಯಲ್ಲಿ ಅಲ್ಲಮಪ್ರಭುವನ್ನು ತಾತ್ವಿಕವಾಗಿ ಸರಿಗಟ್ಟಲು ಸಾಧ್ಯವಿಲ್ಲವೇನೋ?
ಎಂಬ ಆಶಯ ಶಿಶುನಾಳ ಶರೀಫರದಾಗಿದೆ. ಅವರಿಗೆ ಅವರೇ ಸಾಟಿ. ಒಂದು ಅಧ್ಯಾತ್ಮಿಕ ಪರುಷ ಅವರು, ಯಾವುದನ್ನು ಪ್ರಶ್ನಿಸದೇ ಒಪ್ಪಿಕೊಳ್ಳುವಂತಹ ಜಾಯಮಾನದವರಾಗಿರಲಿಲ್ಲ. ಅಂತಹ ಪ್ರಚಂಡ ಶಕ್ತಿ ಅನುಭವ ಮಂಟಪದ ಅಧ್ಯಕ್ಷರಾಗಿದ್ದು ಒಂದು ವಿಸ್ಮಯ. ಅಂದಿನ ಆ ಸಂಸತ್ತನ್ನು ಮುನ್ನಡೆಸಿದ ಪರಿಯೇ ರೋಮಾಂಚನಕಾರಿ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ನರ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಶ್ರೀಗಳು, ಭಾನುವಾರ ಸಂಜೆ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಎಸ್.ಜೆ.ಎಂ. ನರ್ಸಿಂಗ್ ಕಾಲೇಜಿನ ಸಹಯೋಗದೊಂದಿಗೆ ನಡೆದ ಶೂನ್ಯಪೀಠ ಪರಂಪರೆಯ ಪ್ರಥಮಾಧ್ಯಕ್ಷರಾದ ಅಲ್ಲಮಪ್ರಭುದೇವರ ಜಯಂತಿ (ಶರಣೋತ್ಸವ) ಹಾಗೂ ನೂತನ ವರ್ಷಾರಂಭ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ತತ್ವಜ್ಞಾನವೂ ಕೂಡ ಪ್ರಭುದೇವರ ಮುಂದೆ ನಿಂತುಕೊಳ್ಳುವಂತಹ ಮಹಾಜ್ಞಾನಿಯಾಗಿದ್ದ ಅಲ್ಲಮರು ಈ ನಾಡಿನಲ್ಲಿ ಅವರ ವಚನಗಳಿಗೆ ನಿರ್ವಚನ ಮಾಡಿದವರನ್ನು ನಾನು ಕಂಡಿಲ್ಲ. ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳವರಿಂದ ಒಂದೆರಡು ಕೃತಿಗಳು ಬಂದದ್ದು ಬಿಟ್ಟರೆ ಪರಿಪೂರ್ಣವಾದ ಸಾರವತ್ತಾದ ವಚನ- ನಿರ್ವಚನ ಕೃತಿಗಳು ಬಂದಿಲ್ಲ ಎಂದರು.
ಮಾತಿಗೆ ಜ್ಯೋತಿರ್ಲಿಂಗ ಅಂದವರು ಪ್ರಭುದೇವರು. ಶಬ್ದದೆಂಜಲು ಅನ್ನುವ ಪದ ಕಂಡುಹಿಡಿದವರು ಅದಕ್ಕೆ ಅವರೇ ಹೇಳುವಂತೆ ಶಬ್ದದಲ್ಲಿ ನಿಶ್ಯಬ್ದವಿಲ್ಲದೆ ಹೋದಾಗ ಅದು ಶಬ್ದದೆಂಜಲು ಎಂದು ವ್ಯಾಖ್ಯಾನಿಸಿದ್ದಾರೆ. ಶೂನ್ಯ-ಸಂಪಾದನೆ ಆಗಬೇಕು ಆದರೆ ಸಂಪಾದನೆ ಶೂನ್ಯವಾಗಿರಬಾರದು ಎಂದು ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ವಿದ್ವಾಂಸರೊಬ್ಬರಿಗೆ ಹೇಳಿದ ಮಾತನ್ನು ನೆನಪಿಸಿದ ಶ್ರೀಗಳು, ಶೂನ್ಯಪೀಠ ಪರಂಪರೆಯು ಬೌದ್ಧಿಕತೆಗೆ ಒತ್ತು ಕೊಟ್ಟಿದ್ದನ್ನು ನಾವು ಕಾಣಬಹುದಾಗಿದೆ. ಅಲ್ಲಿ ದ್ವೇಷ, ಅಸೂಯೆ ಗುಣಕ್ಕಿಂತ ಜೀವನ ಮೌಲ್ಯವನ್ನು ಬಸವಾದಿ ಶರಣರು ಅನುಭವ ಮಂಟಪದ ಮೂಲಕ ನಮಗೆ ಬಿಟ್ಟು ಹೋಗಿದ್ದಾರೆ. ಅಂತಹ ಪರಂಪರೆಯಲ್ಲಿ ಸಾಗಿ ಬಂದ ಮುರುಘಾಮಠದಲ್ಲಿ ಆಗಿಹೋದ ಪೂಜ್ಯರೆಲ್ಲರೂ ಸಮಾಜ ಸೇವೆಯೇ ಪರಮಗುರಿ ಎಂದು ನಡೆದ ಮಾರ್ಗವನ್ನ ನಾವು ಅನುಸರಿಸಿ ನಡೆಯಬೇಕಾಗುತ್ತದೆ. ಜೀವನದಲ್ಲಿ ಬರುವ ಸಿಹಿ ಕಹಿ ಅನುಭವವನ್ನು ಬೇವು ಬೆಲ್ಲಕ್ಕೆ ಹೋಲಿಸಿ ಪ್ರಕೃತಿ ಸಹಜ ನಡೆಯನ್ನು ಹಿಂದಿನವರು ನಮಗೆ ಕಲಿಸಿಕೊಟ್ಟಿದ್ದಾರೆ ಎಂದು ನುಡಿದರು.
ಸಮ್ಮುಖ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮಿಗಳು ಮಾತನಾಡಿ, ಅಲ್ಲಮರದು ಅನುಭವ ಮಾರ್ಗ ನಡೆ ಆಧ್ಯಾತ್ಮಿಕದ ಮೌಂಟ್ ಎವರೆಸ್ಟ್ ಇದ್ದಂತೆ ಅವರ ರಚನೆಯ ಬೆಡಗಿನ. ಒಗಟಿನಂತಿರುವ ವಚನಗಳು ಸಾಮಾನ್ಯರಿಗೆ ಅರ್ಥವಾಗುವುದೇ ಕಷ್ಟ. ಅಂಥವರ ನೆರಳಿನಲ್ಲಿ ನಾವು ಇರುವುದು ಮತ್ತು ನಡೆಯುತ್ತಿರುವುದು ವೈಶಿಷ್ಟಪೂರ್ಣ ಮತ್ತು ನಮ್ಮಗಳ ಸೌಭಾಗ್ಯವೇ ಸರಿ ಎಂದು ಹೇಳಿದರು.
ಸಾಮಾಜಿಕ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ಮನುಷ್ಯರು ಸಾಗಬೇಕಿದೆ. ನಮ್ಮ ಪಂಚೇಂದ್ರಿಯಗಳನ್ನು ಶುದ್ಧವಾಗಿಸುವುದೇ ಶ್ರೇಷ್ಠತೆ. ಇವನ್ನು ಪರಿಶುದ್ಧವಾಗಿಟ್ಟುಕೊಂಡು ಅವುಗಳಿಂದ ಆಗುವ ಪರಿಭಾವಿಸಬೇಕಾಗಿದೆ. ಮನಸನ್ನು ಬೇರೆ ಕಡೆ ಹರಿಯದಂತೆ ಏಕಾಗ್ರಚಿತ್ತದಲ್ಲಿರಿಸಿ ದ್ವಂದ್ವ ನಿಲುವುಗಳನ್ನು ಅನುಸರಿಸದೇ ಒಂದೇ ಮನದಲ್ಲಿ ಇರಿಸುವುದು ಕಷ್ಟವಾದರೂ ಅದನ್ನು ಹಿಡಿತದಲ್ಲಿಟ್ಟುಕೊಳ್ಳುವುದು ನಮ್ಮ ಆದ್ಯತೆಯಾಗಬೇಕೆಂದು ಪ್ರಭುದೇವರ ಮೂಾಲ್ಕು ವಚನಗಳಿಗೆ ಅರ್ಥ ವಿವರಣೆಯನ್ನು ಸಂಕ್ಷಿಪ್ತವಾಗಿ ನೀಡುವ ಮೂಲಕ ಶ್ರೀಗಳು ಚಿಂತನೆ ನೀಡಿದರು.
ಗುರುಮಠಕಲ್ ಖಾಸಾ ಮುರುಘಾಮಠದ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡುತ್ತ, ನಮ್ಮಲ್ಲಿ ಬರುವ ಯುಗಾದಿ ಮತ್ತು ಸಂಕ್ರಾಂತಿ ಹಬ್ಬಗಳು ಯಾವುದೇ ದೈವಾರಾಧನೆ ಇಲ್ಲದೆ ನೇರವಾಗಿ ರೈತ ಮತ್ತು ಪ್ರಕೃತಿ ನಡುವೆ ನಡೆಯುವ ಪರಿವರ್ತನೆಯ ವಿಶಿಷ್ಟದ ಆಚರಣೆಗಳು, ಪ್ರಕೃತಿಯಲ್ಲಾಗುವ ಹೊಸತನ
ಮನುಷ್ಯರ ಜೀವನದಲ್ಲಿಯೂ ಆಗಬೇಕೆಂಬುದು ನಮ್ಮ ಪೂರ್ವಿಕರ ಆಶಯ. ಅದರಂತೆ ಸದಾ ಹೊಸತನ್ನು ಕಲಿಯುತ್ತಾ ಅದಕ್ಕೆ ಹೊಂದಿಕೊಳ್ಳುವ ಮೂಲಕ ಆರೋಗ್ಯಪೂರ್ಣ ಸಮಾಜಕ್ಕೆ ಅವರು ನಾಂದಿ ಹಾಡಿದ್ದಾರೆ. ಅಕ್ಕಮಹಾದೇವಿ, ಅಲ್ಲಮರು ಈ ನಾಡಿನ ದೊಡ್ಡ ಆಧ್ಯಾತ್ಮ ಜೀವಿಗಳು, ಮಲೆನಾಡಿನ ಶಿವಮೊಗ್ಗದಿಂದ ಕಲ್ಯಾಣದವರೆಗೆ ಇಬ್ಬರು ಸಾಗಿ ಅಲ್ಲಿ ಮಹಾನ್ ಸಾಧನೆಯನ್ನು ಮಾಡಿ, ಜೀವನ ಮೌಲ್ಯಗಳನ್ನು ನೀಡಿ ಕೊನೆಯಲ್ಲಿ ಶ್ರೀಶೈಲದಲ್ಲಿ ಇಬ್ಬರು ಬಯಲಾದದ್ದು ಕುತೂಹಲಕಾರಿ ಎಂದು ಸ್ಮರಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಚಿತ್ರದುರ್ಗದ ಹಿರಿಯ ಪತ್ರಕರ್ತರು, ಕಥೆಗಾರರು, ಕವಿಗಳು, ಸಂಗೀತಗಾರರು ಆದ ಜಿ.ಎಸ್. ಉಜ್ಜಿನಪ್ಪ ಮಾತನಾಡಿ, ನಾಳೆ ಎಂಬ ಚಿಂತೆ ಇಲ್ಲದೆ ನಿರ್ಲಿಪ್ತ ಜೀವನ ಸಾಗಿಸುವುದರ ಮೂಲಕ ಇವತ್ತಿನ ಜೀವನವೇ ಮುಖ್ಯ ಎನ್ನುವ ಪರಿಕಲ್ಪನೆಯ ಮೌಲ್ಯ ಪ್ರತಿಪಾದನೆಯನ್ನು ನಮಗೆ ನೀಡಿದವರು 12ನೇ ಶತಮಾನದ ಬಸವಾದಿ ಶಿವಶರಣರು. ಅನುಭವ ಮಂಟಪದಲ್ಲಿ ಲೌಕಿಕತೆಗೆ ಅಷ್ಟಾಗಿ ಗಮನ ಹರಿಸದೆ ಪಾರಮಾರ್ಥಿಕ ಜೀವನಕ್ಕೆ ಏನು ಬೇಕೋ ಎಲ್ಲವನ್ನು ಅವರು ನೀಡಿ ಹೋಗಿದ್ದಾರೆ. ಇಂದಿನ ಆಧುನಿಕ ಪ್ರಪಂಚಕ್ಕೆ ಅದು ರಾಜಮಾರ್ಗ ಎಂದು ವಿಶ್ಲೇಷಿಸಿದರು.
ಕವಿ ಮತ್ತು ಸಾಹಿತಿಯೂ ಆದ ಎಚ್. ಆನಂದಕುಮಾರ್ ಅವರು ಚಿತ್ರದುರ್ಗ ಮತ್ತು ಮುರುಘಾ ಪರಂಪರೆಯ ಮೇಲೆ ಬೆಳಕು ಚೆಲ್ಲುವಂತ ಸ್ಮರಣೀಯ ಮಾತುಗಳನ್ನಾಡಿದರು.
ಸಮಾಜದ ಗಣ್ಯರುಗಳಾದ ಎಸ್. ಷಣ್ಮುಖಪ್ಪ, ಕೆ.ಎಂ. ವೀರೇಶ್, ಡಿ.ಎಸ್. ಸುರೇಶ್ ಬಾಬು, ಕಣಿವೆ ಮಾರಮ್ಮ ತಿಪ್ಪೇಸ್ವಾಮಿ, ರುದ್ರಮುನಿ, ಆನಂದ್, ವಿನಯ್, ನವೀನ್ ಸಜ್ಜನ್, ಪತ್ರಕರ್ತ ಮಾಲತೇಶ ಅರಸ್, ರವಿ ಅಂಬೇಕರ್, ಸೇರಿದಂತೆ ಎಸ್.ಜೆ.ಎಂ. ವಿದ್ಯಾಪೀಠದ ಶಾಲಾ ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಹಾಗೂ ವಿವಿಧ
ಸಮಾಜಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಮುರಾ ಕಲಾವಿದರಾದ ತೋಟಪ್ಪ ಉತ್ತಂಗಿ, ಉಮೇಶ್ ಪತ್ತಾರ್, ಶ್ರೀಮತಿ ಶಶಿಕಲ ಬಸವರಾಜ್, ಕರಿಬಸಪ್ಪ ಅವರು ಸುಶ್ರಾವ್ಯ ವಚನ ಗಾಯನ, ಭಾವಗೀತೆ ಹಾಡಿ ನೂತನ ವರ್ಷಾರಂಭದ ಸಮಾರಂಭಕ್ಕೆ ಕಳೆಗಟ್ಟಿಸಿದರು. ಕೊನೆಯಲ್ಲಿ ಎಲ್ಲರಿಗೂ ಬೇವು ಬೆಲ್ಲ, ಕೋಸಂಬರಿ ಹಾಗೂ ಪಾನಕ ವಿತರಿಸಲಾಯಿತು.
ಎನ್. ಬಸವರಾಜ್ ಸ್ವಾಗತಿಸಿದರು. ಮೌನೇಶ್, ಎಂ. ಶರಣು ಸಮರ್ಪಣೆ ಮಾಡಿದರು. ಡಾ. ನವೀನ್ ಮಸ್ಕಲ್ ಕಾರ್ಯಕ್ರಮ ನಿರೂಪಿಸಿದರು.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page