
7 Oct 2024
ಶ್ರೀ ಜಗದ್ಗುರುಗಳ 150ನೇ ಜಯಂತ್ಯುತ್ಸವ ಹಾಗೂ ಶರಣಸಂಸ್ಕೃತಿ ಉತ್ಸವ -2024
ಜಯದೇವಕಪ್ ಸಮಾರೋಪ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ
ದಿನಾಂಕ:07.10.2024ರಂದು ಹಳೆಯ ಮಾಧ್ಯಮಿಕ ಶಾಲಾ ಆವರಣದಲ್ಲಿ ಜಯದೇವಕಪ್ ಸಮಾರೋಪ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಅಥಣಿಗಚ್ಚಿಮಠದ ಶ್ರೀ ಶಿಬಸವ ಗುರುಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ಜಯದೇವ ಜಗದ್ಗುರುಗಳು ಧಾರ್ಮಿಕ ಕ್ಷೇತ್ರಕ್ಕೆ ಒಂದು ಸ್ಫೂರ್ತಿಯ ಸೆಲೆ ಇದ್ದಂತೆ. 1934ರಲ್ಲಿ ಕೊಲ್ಲಾಪುರದ ನಗರದಲ್ಲಿ ಷಾಹು ಮಹಾರಾಜರು 15 ಎಕರೆ ಜಾಗವನ್ನು ಕೊಟ್ಟರು. ಮಹಾರಾಷ್ಟ್ರದ ಈ ಕ್ಷೇತ್ರದಲ್ಲಿ ಒಂದು ದೊಡ್ಡ ಮಠವನ್ನು ಕಟ್ಟಿಸಿದರು. ಪ್ರತಿ ವರ್ಷ ಜಮುರಾ ಕಪ್ ನಡೆಯುತ್ತಿತ್ತು. ಅದನ್ನು ಜಯದೇವ ಗುರುಗಳ 150ನೇ ಜನ್ಮದಿನದ ಅಂಗವಾಗಿ ಜಯದೇವ ಕಪ್ ಎಂದು ಮಾಡಲಾಗಿದೆ. ಕ್ರೀಡೆಯು ಮಾನಸಿಕ ನೆಮ್ಮದಿ ಮತ್ತು ದೈಹಿಕವಾದ ಆರೋಗ್ಯವನ್ನು ನೀಡುತ್ತದೆ. ಆದ ಕಾರಣ ಕ್ರೀಡೆಯನ್ನು ನೀವುಗಳು ಅಳವಡಿಸಿಕೊಳ್ಳಿ. ಚಿತ್ರದುರ್ಗ ನಗರವು ಸಾಂಸ್ಕೃತಿಕ ನಗರಿ. ಅದೇ ನಿಟ್ಟಿನಲ್ಲಿ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಸಾಗಲಿ. ಮುರುಘಾಮಠ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂದು ತಿಳಿಸಿದರು.
ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿಗಳು ಮಾತನಾಡಿ, ಜಯದೇವ ಶ್ರೀಗಳ ಕೃಪೆಯಿಂದ ಇಲ್ಲಿ ಸೇರಿದ್ದೇವೆ. ಶ್ರೀಗಳು ಎಲ್ಲಾ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದಾರೆ. ಶ್ರೀಗಳ ಬಗ್ಗೆ ಹೇಳಬೇಕೆಂದರೆ ಸೊಲ್ಲಾಪುರದ ಮಲ್ಲಯ್ಯನವರು ಜಯದೇವ ಸ್ವಾಮಿಗಳ ಕಾರ್ಯವೈಖರಿಯನ್ನು ತಿಳಿದು ಶ್ರೀಗಳ ದರ್ಶನ ಪಡೆಯಲು ದೀಡ್ ನಮಸ್ಕಾರವನ್ನು ಮಾಡುತ್ತ 550 ಕಿಲೋಮೀಟರ್ ದೂರದಿಂದ ಬರುತ್ತಾರೆ. ಮಲ್ಲಯ್ಯನ ನಿಷ್ಠೆಯನ್ನು ಕಂಡು ಆತನ ಪತ್ನಿಯು ಆತನಿಗೆ ಸಹಕರಿಸಿಕೊಂಡು ಆತನ ಜೊತೆ ಆಕೆಯೂ ಹಿಂಬಾಲಿಸುತ್ತಾಳೆ. ಇದನ್ನು ಅರಿತ ಜಯದೇವ ಶ್ರೀಗಳು ಹಾಗೂ ಜಯವಿಭವ ಜಗದ್ಗುರುಗಳು ಲಕ್ಷ್ಮೀಶ್ವರದಲ್ಲಿ ಮಲ್ಲಯ್ಯನ ಭೇಟಿ ಮಾಡಿ ದರ್ಶನ ಭಾಗ್ಯ ನೀಡುತ್ತಾರೆ. ಸೊಲ್ಲಾಪುರದ ಮಲ್ಲಯ್ಯನಂತಹ ಶಿಷ್ಯರು ಆದರ್ಶಪ್ರಾಯರಾಗುತ್ತಾರೆ. ಜಯದೇವ ಶ್ರೀಗಳಿಗೆ ಕೇವಲ ಚಿತ್ರದುರ್ಗದ ಜನತೆ ಮಾತ್ರ ಭಕ್ತರಾಗಿರಲಿಲ್ಲ. ನಾಡಿನ ಮೂಲೆ ಮೂಲೆಯಿಂದ ಮತ್ತು ಹೊರರಾಜ್ಯಗಳಲ್ಲೂ ಭಕ್ತರನ್ನು ಹೊಂದಿದ್ದರು ಎಂದು ತಿಳಿಸಿದರು.
ಶಾಸಕರಾದ ಶ್ರೀ ಕೆ.ಸಿ.ವೀರೇಂದ್ರ (ಪಪ್ಪಿ) ಮಾತನಾಡಿ, ಈ ನಾಡಿನಿಂದ ಸರ್ಕಾರಿ ಶಾಲೆಯ ಮಕ್ಕಳು ಸೇರಿದಂತೆ ಈ ಬಾರಿಯ ಶರಣ ಸಂಸ್ಕೃತಿ ಉತ್ಸವದ ಕ್ರೀಡಾ ಜಾತ್ರೆಯಲ್ಲಿ 1500 ಕ್ರೀಡಾಪಟುಗಳು ಭಾಗವಹಿಸಿದ್ದು ಅದರ ಯಶಸ್ಸಿನ ಸಾಕ್ಷಿಯಾಗಿದೆ ಈ ಜಯದೇವ ಕಪ್. ಶ್ರೀಮಠದ ಸೇವಕನಾಗಿ ತಾನು ತನ್ನನ್ನು ತಾನು ತೊಡಗಿಸಿಕೊಳ್ಳುವುದಾಗಿ ತಿಳಿಸಿದರು.




