
30 Aug 2024
ಚಳ್ಳಕೆರೆ/ಚಿತ್ರದುರ್ಗ, ಆ.30 : ಒಂದು ಕಾಲದಲ್ಲಿ ಅಭಿವೃದ್ಧಿ ಕಾರ್ಯಗಳು ಅಂದರೆ ಅದು ಕೇವಲ ಪಟ್ಟಣ, ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿತ್ತು. ಒಂದಷ್ಟು ಸಮಾಜ ಸೇವಾ ಕಾರ್ಯವನ್ನು ಮಠಗಳು ಮಾಡಿರುವ ಕಾರಣ ಅದರ ಜತೆಗೆ ಈಗೀಗ ಸರ್ಕಾರಗಳು ಹಳ್ಳಿಗಳ ಅಭಿವೃದ್ಧಿಯ ಕಡೆಗೆ ಗಮನಿಸಿರುವುದನ್ನು ಕಾಣಬಹುದಾಗಿದೆ. ಇದಕ್ಕೆ ಕಾರಣ ಆ ಭಾಗಗಳಲ್ಲಿ ಇರಬಹುದಾದ ಮಠ ಮಾನ್ಯಗಳ ಪ್ರೇರಣೆ ಇರುವುದು ಸಹಜ ಎಂದು ಚಿತ್ರದುರ್ಗ ಬಾಪೂಜಿ ಪ್ರಥಮದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ভেত. ໖.໖. ರಾಜಣ್ಣ ಅಭಿಪ್ರಾಯಪಟ್ಟರು.
ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಆಯೋಜಿಸಿರುವ ಅನುಭಾವ
ಶ್ರಾವಣ ಚಿಂತನಮಾಲೆಯ ಅಂಗವಾಗಿ ತಾಲೂಕಿನ ನಾಗಗೊಂಡನಹಳ್ಳಿಯ ಚಿಲುಮೆ ರುದ್ರಸ್ವಾಮಿ ಕ್ಷೇತ್ರದಲ್ಲಿ
ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಷಣ್ಮುಖ ಶಿವಯೋಗಿಗಳ ಕುರಿತು ಉಪನ್ಯಾಸ ನೀಡುತ್ತಾ
ಸಾಧಕರು, ಪವಾಡ ಪುರುಷರು ನಡೆದಾಡಿದ ಜಾಗಗಳು ತಪೋಭೂಮಿಯಾಗಿ ಸಾರ್ವಜನಿಕರ ಶ್ರದ್ಧಾಭಕ್ತಿ
ಕೇಂದ್ರಗಳಾಗಿವೆ. ಅದರಂತೆ ವೇದಾವತಿ ನದಿಯ ತೀರದಲ್ಲಿ ಸಮಾಧಿಯಾಗಿರುವ ಚಿಲುಮೆ ರುದ್ರಸ್ವಾಮಿಯವರು.
ಅವರು ಸಾಮಾಜಿಕ ಕಾರ್ಯಗಳ ಮೂಲಕ ಈ ಭಾಗದಲ್ಲಿ ಜನಮನ್ನಣೆಗಳಿಸಿದ್ದಾರೆ. ಚಿಲುಮೆ ಎಂದರೆ
ಇಲ್ಲಿರುವ ಪ್ರದೇಶದಲ್ಲಿ ಅವರ ಸಂಕಲ್ಪ ಶಕ್ತಿಯಿಂದ ಸ್ವಲ್ಪ ಮಣ್ಣನ್ನ ಸರಿಸಿದರು ಅಲ್ಲಿ ನೀರು ಜಿನುಗುವುದನ್ನು
ಕಾಣಬಹುದಿತ್ತಂತೆ. ಆ ಕಾರಣದಿಂದ ಚಿಲುಮೆ, ಚಿಲುಮೆರುದ್ರರು ಎಂಬುದಾಗಿ ಹೆಸರಾಗಿದೆ. ಜೊತೆಗೆ ಅವರು
ಸಮಾಧಿಯಾದ ಸ್ಥಳ ಇದು. ಇಂಥ ಸಮಾಧಿ ಸ್ಥಳಗಳು ಮಹಿಮಾ ಸ್ಥಳಗಳು. ಈ ಕ್ಷೇತ್ರವು ಕೂಡ ಅಭಿವೃದ್ಧಿ
ಕಾಣುತ್ತಿದೆ. 12ನೇ ಶತಮಾನದಲ್ಲಿ ಮಾತಿಲ್ಲದ ಕೆಳವರ್ಗಗಳಿಗೆ ಮಾತು ಕೊಟ್ಟವರು ಬಸವಣ್ಣನವರು. ಕಷ್ಟಪಡುವ
ಶ್ರಮಿಕರ ಸಂಘಟನೆ ಮಾಡಿ ಒಂದೆಡೆ ಸೇರಿಸಿದವರು ಬಸವಣ್ಣನವರು. ಅದು ಅದ್ಭುತ ಸಮ ಸಮಾಜ. ದುಡ್ಡಿದ್ದರೆ
ಎಲ್ಲಿಗೆ ಬೇಕಾದರೂ ಹೋಗಬಹುದು. ಅದು ದೊಡ್ಡದಲ್ಲ. ಕಾಯಕದಲ್ಲಿ ಕೈಲಾಸ ಕಾಣುವುದು ದೊಡ್ಡದು.
ದೇವರನ್ನ ಹುಡುಕುತ್ತಾ ದೇವಸ್ಥಾನಗಳಿಗೆ ಓಡಾಡುವುದು ದೊಡ್ಡದಲ್ಲ. ದೇವರೆಂಬ ಭಾವನೆಯಲ್ಲಿ ಸೇರಿ
ಹೋಗುವುದು ದೊಡ್ಡತನ. ಈ ರೀತಿಯ ಅನುಭವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಎಲ್ಲರೂ
ಜ್ಞಾನವಂತರಾಗಬೇಕು. ನಮ್ಮ ಬದುಕಿನ ಶಿಲ್ಪಿಗಳು ನಾವೇ ಎಂದುಕೊಂಡು ಎಲ್ಲರೂ ಒಂದೆಡೆ ಸೇರಿಕೊಂಡವರು
ಬಸವೇಶ್ವರರು. ಅವರಂತೆ ನಾವು ಸಮಾಜದಲ್ಲಿ ಯಾರಿಗೂ ಕೆಡುಕನ್ನ ಮಾಡದೆ ನೋವನ್ನ ಕೊಡದೆ
ಬದುಕಬೇಕು ಎಂದು ಹೇಳಿದರು.
ಸಮಾರಂಭದ ಸಮ್ಮುಖ ವಹಿಸಿದ್ದ ಮುರುಘಾಮಠದ ಮುರುಘಂದ್ರ ಸ್ವಾಮೀಜಿಯವರು ಮಾತನಾಡುತ್ತಾ
ಷಣ್ಮುಖ ಶಿವಯೋಗಿಗಳು ಕಲ್ಬುರ್ಗಿಯವರು ಜೇವರ್ಗಿಯಲ್ಲಿ ಬಸವಾದಿ ಶರಣರ ನಂತರದ 15-16ನೇ
ಶತಮಾನದ ಕಾಲಘಟ್ಟದಲ್ಲಿ ಬಂದವರು. ಅವರು ಅನೇಕ ವಚನಗಳನ್ನು ರಚಿಸಿ ಸಮಾಜಕ್ಕೆ ಕೊಡುಗೆಯಾಗಿ
ನೀಡಿದ್ದಾರೆ. ಅವರ ಬದುಕೇ ಒಂದು ನಿದರ್ಶನ ಮತ್ತು ದರ್ಶನ. ಹಗಲಲ್ಲಿ ಸೂರ್ಯನ ಬೆಳಕು ಇದೆ.
ರಾತ್ರಿಯಲ್ಲಿ ಚಂದ್ರನ ಬೆಳಕು ಬರುತ್ತದೆ ಅದು ಸತ್ಯ. ಗೋಡೆಗೆ ಬಣ್ಣ ಬಳಿಯಬಹುದು. ಮುಖಕ್ಕೂ ಅಲಂಕಾರ
ಮಾಡಿಕೊಳ್ಳಬಹುದು. ಆದರೆ ಪ್ರಕೃತಿಯಲ್ಲಿ ಹೂವಿಗೆ ವಿವಿಧ ವಿಧವಾದ ಬಣ್ಣ ನಮ್ಮಿಂದ ಬಳಿಯಲು ಸಾಧ್ಯವಿಲ್ಲ.
ಇದೇ ಸತ್ಯ. ಪ್ರಾಣಿಗಳಿಗೂ ಬದುಕಿದೆ ನಮಗೂ ಬದುಕಿದೆ. ಪ್ರಾಣಿಗಳಿಗೆ ಹೋಲಿಸಿದರೆ ನಮ್ಮದು ವಿಶೇಷವಾದ
ಬದುಕು. ಅದನ್ನು ನಾವು ಸಾರ್ಥಕ ಪಡಿಸಿಕೊಳ್ಳಬೇಕು. ಇಂತಹ ಬದುಕು ನಮಗೆ ಏಕೆ ಸಿಕ್ಕಿದೆ, ಅದನ್ನ ಹೇಗೆ
ಸಾರ್ಥಕ ಪಡಿಸಿಕೊಳ್ಳುವುದು. ನಾವು ಸಮಾಜದಲ್ಲಿ ಹೇಗೆ ಬದುಕಬೇಕು ಇವೆಲ್ಲದರ ಮಾಹಿತಿಗಳನ್ನ ನಮಗೆ
ಬಸವಾದಿ ಶರಣರು ಒದಗಿಸಿಕೊಟ್ಟಿದ್ದಾರೆ. ಸತ್ಯ ಹೇಳಬೇಕು, ಆದರೆ ಅಪ್ರಿಯವಾದ ನೋವು ನೀಡುವ ಸತ್ಯವನ್ನ
ಹೇಳುವ ಸಮಯದಲ್ಲಿ ಮೌನ ವಹಿಸಬೇಕು. ಆಗಿದ್ದಾಗ ಮಾತ್ರ ಸಮಸ್ಯೆಯಿಂದ ಪಾರಾಗಬಹುದು. ಕೆಲವೊಮ್ಮೆ
ಮೂಕನಾಗುವುದನ್ನು ಕಲಿಯಬೇಕು. ಇನ್ನೂ ಕೆಲವೊಮ್ಮೆ ಎಷ್ಟು ಬೇಕೋ ಅಷ್ಟು ಮಿತವಾದ ಮಾತನಾಡಬೇಕು.
ಏನು ಮಾಡಬೇಕು ಎಂಬುದನ್ನ ಜೀವನ ಪೂರ್ತಿ ಕಲಿಯುತ್ತೇವೆ. ಆದರೆ ಏನು ಮಾಡಬಾರದು ಎಂಬುದರ ಬಗ್ಗೆ ಗಮನಹರಿಸಬೇಕು. ಮನೆಯ ಮಕ್ಕಳಲ್ಲಿ ತಮ್ಮತನ ಗೋಚರಿಸುತ್ತದೆ. ತಂದೆ-ತಾಯಿಗಳು ಸಂಸ್ಕಾರವಂತರಾದರೆ ಅದನ್ನು ಮಕ್ಕಳು ಅನುಸರಿಸುತ್ತಾರೆ. ಈ ರೀತಿಯ ಮಾರ್ಗದರ್ಶನ ನೀಡಿದವರು ನಮ್ಮ ಷಣ್ಮುಖ ಶಿವಯೋಗಿಗಳು. ನಮ್ಮ ನಮ್ಮ ಪಾತ್ರಗಳನ್ನ ನಾವು ಸರಿಯಾಗಿ ನಿಭಾಯಿಸಿಕೊಂಡು ಹೋಗಬೇಕು. ಸತ್ಯ- ಶುದ್ಧತೆಯಿಂದ ಬದುಕನ್ನು ನಿಭಾಯಿಸುವವರು ನಾವಾಗಬೇಕು. ಅದಕ್ಕೆ ಶಿವಪಥ ಗುರುಪಥ ನಮಗೆ ಸಹಕಾರಿ. ಜಯದೇವ ಶ್ರೀಗಳು ಕಟ್ಟಿದ್ದ ಪ್ರಸಾದ ನಿಲಯವನ್ನು ಗಮನಿಸಿದ ಸರ್ಕಾರಗಳು ಕೂಡ ಉಚಿತ ಹಾಸ್ಟೆಲ್ ತೆರೆಯಲು ಮುಂದಾದರೂ ಎನ್ನುವುದು ಇತಿಹಾಸ. ಇಂಥ ಎಲ್ಲ ಮಹಾತ್ಮರ ಮಾರ್ಗದರ್ಶನ ಅನುಸರಿಸುವ ಮೂಲಕ ಒಂದೊಳ್ಳೆಯ ಸಮಾಜ ನಿರ್ಮಾಣ ಕಾರ್ಯ ಆಗಬೇಕೆಂಬ ಆಶಯ ಎಲ್ಲರಿಂದ ಬರಲಿ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಪಿ. ವೀರೇಂದ್ರ ಕುಮಾರ್, ಅಶೋಕ್, ಚೆಲಮಣಿ, ರವಿ, ಓಬಯ್ಯ ಮತ್ತಿತರರು ಇದ್ದರು.
ಕಾರ್ಯಕ್ರಮಕ್ಕು ಮುನ್ನ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಸಮಾರಂಭದ ಆರಂಭಕ್ಕೆ ಜಮುರಾ ಕಲಾವಿದರಿಂದ ವಚನ ಪ್ರಾರ್ಥನೆ ನಡೆಯಿತು. ಶಿವಮೂರ್ತಿಯವರು ಸ್ವಾಗತ. ಕೋರಿದರೆ ಬಂಡೆ ರುದ್ರಪ್ಪ ನಿರೂಪಣೆ ಮಾಡಿದರು. ಹೆಚ್.ಸಿ. ಮಹೇಶ್ ಶರಣು ಸಮರ್ಪಣೆ ಮಾಡಿದರು.







