top of page

ಮುರುಘಾಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ - July 2024

5 Jul 2024

ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಪ್ರತಿತಿಂಗಳ 5ರಂದು ನಡೆಯುವ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ಚರಿತ್ರೆ ನಿರ್ಮಿಸಿದೆ ಎಂದರೆ ಅತಿಶಯೋಕ್ತಿಯೆನಿಸದು. ಈ ಪದ್ಧತಿ ಕಳೆದ ಮೂರೂವರೆ ದಶಕಗಳಿಂದ ಅನೂಚಾನವಾಗಿ ನಡೆದು ದಾಖಲೆ ನಿರ್ಮಿಸಿದೆ. ಅದು ಈಗಲೂ ನಡೆದಿದೆ. ಈ ವೇದಿಕೆಯಡಿ ಬಡವರು, ಬಲ್ಲಿದರು ಎನ್ನುವ ಯಾವುದೇ ಬೇಧವಿಲ್ಲ. ಕಾರಣ ಕೇವಲ ಇಲ್ಲದವರು ಮಾತ್ರ ಮದುವೆ ನಡೆಸಿಲ್ಲ. ಉನ್ನತ ಅಧಿಕಾರಿಗಳು, ಆಗರ್ಭ ಶ್ರೀಮಂತರೂ ಆದ ಉದಾಹರಣೆ ಇದೆ. ಏನೂ ಇಲ್ಲದವರು ವಧು-ವರರು ಬಂದು ತಮ್ಮ ಕಲ್ಯಾಣ ಮಾಡಿಕೊಂಡಿದ್ದಾರೆ.
ಇನ್ನು ಇಲ್ಲಿ ಶಾಸ್ತ್ರ ಸಂಪ್ರದಾಯಗಳ ಗೊಡವೆ ಇಲ್ಲವೇ ಇಲ್ಲ. ಬಸವಾದಿ ಶಿವಶರಣರ ಆಶಯದಂತೆ ಎಲ್ಲ ಸಮಯವೂ ಶುಭಸಮಯವೆಂದು ಅದು ಸಂಜೆಯಾಗಿರಲಿ, ಬೆಳಗ್ಗೆಯಾಗಿರಲಿ ಮದುವೆಗಳು ನಡೆದಿವೆ. ಅಮಾವಾಸ್ಯೆ, ಹುಣ್ಣಿಮೆ, ರಾಹುಕಾಲ, ಗುಳಿಕ, ಆಷಾಢ ಎಲ್ಲ ಕಾಲದಲ್ಲೂ ಮದುವೆಗಳಾಗಿವೆ. ಅದಕ್ಕೆ ಕಾರಣ ಶ್ರೀಮಠದಲ್ಲಿ ಎಮ್ಮವರು ಬೆಸಗೊಂಡರೆ ಶುಭ ಲಗ್ನವೆನ್ನಿರಯ್ಯ ಎನ್ನುವ ಬಸವಣ್ಣನವರ ವಚನದ ಆಶಯ ಸಾಕಾರಗೊಂಡಿದೆ. ಅಂದ ಹಾಗೆ ಆಷಾಢದಲ್ಲಿ ನೂರಾರು, ಎರಡು ದಶಕಗಳ ಹಿಂದೆ ಅಮಾವಾಸ್ಯೆ ದಿನದಂದು 101 ಜೋಡಿ ಮದುವೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಹಾಗೆಯೇ ಕಾಲ ನೋಡಿ ಮದುವೆಯಾದವರೂ ಚೆನ್ನಾಗಿದ್ದಾರೆ. ಇನ್ನು ಅಮಾವಾಸ್ಯೆ, ಆಷಾಢ ಎಂದು ಲೆಕ್ಕಿಸದೇ ಮದುವೆಯಾದರೂ ಸುಖವಾಗಿದ್ದಾರೆ. ಕಾಲಕ್ಕೆ ಮಹತ್ವ ನೀಡದೆ ನಾವು ಮಾಡುವ ಕಾರ್ಯಕ್ಕೆ ಮಹತ್ವ ನೀಡಿದಾಗ ಸ್ವಅಭಿವೃದ್ಧಿಯ ಜತೆಗೆ ದೇಶದ ಅಭಿವೃದ್ಧಿಯೂ ತನ್ಮೂಲಕ ನಡೆಯುತ್ತದೆ ಎನ್ನುವುದನ್ನು ಶ್ರೀಮಠವು ತೋರಿಸಿದೆ. ಹೀಗೆ ಸಾಮಾಜಿಕ ಕಾರ್ಯಗಳ ಮೂಲಕ ಸೇವಾ ತತ್ಪರತೆಯಲ್ಲಿ ತೊಡಗಿದೆ.
ಅಮಾವಾಸ್ಯೆಯಂದು ಮೂರುಜೋಡಿ ಕಲ್ಯಾಣ ಮಾಡಿಕೊಂಡ ದಂಪತಿಗಳು
ಚಿತ್ರದುರ್ಗ, ಜು. 05 ಸಾಮೂಹಿಕ ಇಲ್ಲವೇ ಯಾವುದೋ ಒಂದು ದೇವಸ್ಥಾನ ಇತರೆಡೆ ಮದುವೆಯಾಗುವವರು ಬಡವರು ಎಂದು ಅಪಹಾಸ್ಯ ಮಾಡುತ್ತಿದ್ದ ಕಾಲದಲ್ಲಿ ಇದನ್ನು ತೊಡೆದು ಹಾಕುವ ಬಡವ, ಬಲ್ಲಿದ ಎನ್ನುವ ಅಸಮಾನತೆ ತೊಲಗಿಸಿ ಸರ್ವರೂ ಒಂದು ವೇದಿಕೆಯಲ್ಲಿ ಭಾಗಿಯಾಗಿ ಸತಿಪತಿಗಳಾಗುವ ಅವಕಾಶವನ್ನು ಚಿತ್ರದುಗ್ ಶ್ರೀಮುರುಘಾಮಠ ಕಲ್ಪಿಸಿದೆ ಎಂದು ಶಿವಶರಣ ಮಾದಾರಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳು ಅಭಿಪ್ರಾಯಪಟ್ಟರು.
ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಜರುಗಿದ ಮೂವತ್ನಾಲ್ಕನೇ ವರ್ಷದ 7ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಕೇವಲ ಲಿಂಗಾಯತ ಜಾತಿಗೆ ಸೀಮಿತವಾಗದೆ ಶೋಷಿತ, ಅಲಕ್ಷಿತ ಸಮಾಜಗಳ ಕಲ್ಯಾಣಕ್ಕೆ ಈ ಸಾಮೂಹಿಕ ವಿವಾಹ ಕಾರ್ಯಕ್ರಮ ವರದಾನವಾಗಿದೆ ಎಂದರೆ ತಪ್ಪಾಗಲಾರದು. ಹೆಚ್ಚಾಗಿ ಈ ಸಮಾಜಗಳಿಗೆ ಹೆಚ್ಚು ಪ್ರಯೋಜನವಾಗಿದೆ ಎಂದರು.
ಈ ಹಿಂದೆ ಆರ್ಥಿಕ ಸ್ಥಿತಿಗತಿ ಅಷ್ಟೊಂದು ಸಬಲರಾಗಿರದೇ ಇರುವವರು ದೂರದ ಧರ್ಮಸ್ಥಳ ಇನ್ನಿತರೆ ಕ್ಷೇತ್ರಗಳಿಗೆ ಹೋಗಬೇಕಿತ್ತು. ಆ ಸಮಸ್ಯೆ ಇಲ್ಲವಾಗಿಸಿ ಬಡವರಿಗೆ ಒಂದು ಪ್ರೇರಣಾದಾಯಕ ಸಾಮಾಜಿಕ ಕಾರ್ಯ ಮಾಡುತ್ತಿದೆ. ಹಾಗೆಯೇ ಇಲ್ಲಿ ಯಾವುದೇ ಮುಹೂರ್ತ ಶುಭಗಳಿಗೆಗೆ ಮಹತ್ವ ನೀಡದೆ 5ನೇ ತಾರೀಕು ಅದು ಯಾವುದೇ ದಿನ ಇರಲಿ ಸಾಮೂಹಿಕ ನಡೆದಿದೆ. ಅದಕ್ಕೆ ಸಾಕ್ಷಿ ಎಂದರೆ ಇಂದಿನ ಅಮಾವಾಸ್ಯೆ ದಿನ ಹಸೆಮಣೆ ಏರಿದ ದಂಪತಿಗಳೇ ಸಾಕ್ಷಿ. ಇಂತಹ ಸಾಮಾಜಿಕ ಪರಿವರ್ತನೆ ಕಾರ್ಯಗಳು ಶ್ರೀಮಠದಲ್ಲಿ ನಿರಂತರವಾಗಿ ನಡೆಯುತ್ತಿವೆ ಎಂದು ಹೇಳಿದರು.
ನೇತೃತ್ವ ವಹಿಸಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಮಾತನಾಡಿ, ಕರ್ನಾಟಕದ ಇತಿಹಾಸದಲ್ಲಿ ಚಿತ್ರದುರ್ಗ ಬೃಹನ್ಮಠಕ್ಕೆ ತನ್ನದೇ ಆದ ಉಜ್ವಲ ಇತಿಹಾಸವಿದೆ. ಶ್ರೀಮಠ ಹಿಂದಿನಿಂದ ಇಂದಿನವರೆಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳನ್ನು ಮಾಡುತ್ತ ಈಗ ಅದು ಬಹು ವಿಸ್ತಾರಗೊಂಡಿದೆ. ಸಾರ್ವಜನಿಕರು ಈ ಸತ್ಕಾರ್ಯಗಳಿಗೆ ಸಹಕಾರ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಶ್ರೀಮಠವು ಮಾಡುವ ಕಾರ್ಯ ಯೋಜನೆಗಳಿಗೆ ಹೇಗೆ ಸ್ಪಂದನೆ ನೀಡುತ್ತಿದ್ದಾರೆ ಎಂದರೆ ಈಗ ನಡೆದಿರುವ ಕಲ್ಯಾಣ ಮಹೋತ್ಸವವೇ ಸಾಕ್ಷಿ. ಕಾರಣ ಇಂದು ಅಮಾವಾಸ್ಯೆ ಆದರೂ ಲೆಕ್ಕಿಸದೇ ಜನ ಶ್ರೀಮಠ ಮಾಡುತ್ತಿರುವ ಕೆಲಸಕ್ಕೆ ಕೈಜೋಡಿಸಿರುವುದು ಪರಿವರ್ತನೆಯ ಸಂಕೇತ ಎಂದು ನುಡಿದರು.
ನಾವು ಬದುಕಿನಲ್ಲಿ ಅಂಧಶ್ರದ್ಧೆ, ಆಲಸ್ಯ ತೊಡೆದು ಸರಳತೆ, ಸದುವಿನಯ ರೂಢಿಸಿಕೊಳ್ಳುವ ಮೂಲಕ ಜೀವನದಲ್ಲಿ ಶಿಸ್ತು, ಸನ್ನಡತೆ, ಸ್ವಚ್ಚತೆಯೂ ಅಗತ್ಯ. ನಮ್ಮ ಜೀವನ ಇನ್ನೊಬ್ಬರಿಗೆ ಮಾದರಿಯಾಗಿರಬೇಕು. ಆ ರೀತಿಯ ಮಾರ್ಗದರ್ಶಿ ಪಥದಲ್ಲಿ ಸಾಗಬೇಕು. ಇದ್ದಾಗ ಸತ್ಕಾರ್ಯ ಮಾಡುವ ಹೊಣೆಗಾರಿಕೆ ಹೊಂದಬೇಕು. ಕಾಯಕದಿಂದ ಬಂದುದ್ದರಲ್ಲಿ ದಾಸೋಹ ಮಾಡಬೇಕು. ನಾವು ಸತ್ತಾಗ ಏನೂ ತೆಗೆದುಕೊಂಡು ಹೋಗುವುದಿಲ್ಲ ಎಂಬ ಅರಿವಿನೊಂದಿಗೆ ಪರೋಪಕಾರ ಜೀವನ ಸಾಗಿಸುತ್ತ ನಡೆಯಬೇಕೆಂದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮಿಗಳು ಮಾತನಾಡಿ, ಚಿತ್ರದುರ್ಗದ ಶ್ರೀಮಠವು ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಂದಿದೆ. ಅದರ ಭಾಗವೇ ಈ ಸಾಮೂಹಿಕ ಕಲ್ಯಾಣ ಮಹೋತ್ಸವ. ಈ ಕಾರ್ಯಕ್ರಮವು ಎಂತಹುದೇ ಸಂದರ್ಭ ಬಂದರೂ ನಿಂತಿಲ್ಲ. ಅದು ಶ್ರೀಮಠದ ಹೆಗ್ಗಳಿಕೆ ಎಂದ ಶ್ರೀಗಳು, ಒಳ್ಳೆಯ ಕೆಲಸಕ್ಕೆ ಶ್ರೀಮಠವು ಸದಾ ಮುಂದೆ ನಿಂತಿದೆ ಎಂದು ನುಡಿದರು.
ಶಿರಸಂಗಿಯ ಶ್ರೀ ಬಸವಮಹಾಂತ ಸ್ವಾಮಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಸವಾದಿ ಶರಣಪದ್ಧತಿಯಂತೆ ಮೂರು ಜೋಡಿಗಳ ಕಲ್ಯಾಣ ಮಹೋತ್ಸವ ನಡೆಯಿತು.
ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ವಿನಯ್‌ದೇವರು ಸ್ವಾಗತಿಸಿದರು. ನಿವೃತ್ತ ಉಪನ್ಯಾಸಕ ಟಿ.ಪಿ.ಜ್ಞಾನಮೂರ್ತಿ ನಿರೂಪಿಸಿದರು.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page