
5 Aug 2025
ಮುರುಘಾಮಠದಲ್ಲಿ 6 ಜೋಡಿಗಳ ಸಾಮೂಹಿಕ ಕಲ್ಯಾಣ ಮಹೋತ್ಸವ
ಚಿತ್ರದುರ್ಗ, ಆ. 5 ವಿವಾಹದ ಹೆಸರಿನಲ್ಲಿ ದುಂದುವೆಚ್ಚ ಮಾಡುವುದು ಒಂದು ರೀತಿಯ ಭ್ರಷ್ಟಾಚಾರ. ಸಾಮೂಹಿಕ ವಿವಾಹದ ಮುಖಾಂತರ ಗುರುಗಳ ಆಶೀರ್ವಾದ ಪಡೆದು ವಿವಾಹವಾಗುವುದು ಶ್ರೇಷ್ಠ. ಶ್ರೀಮಠವು ಕಳೆದ 35 ವರ್ಷಗಳಿಂದ ಸಾಮೂಹಿಕ ವಿವಾಹಗಳಿಗೆ ಸಾಕ್ಷಿಯಾಗಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ನುಡಿದರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ನಡೆದ ಮೂವತ್ತೈದನೇ ವರ್ಷದ ಎಂಟನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಸತಿ-ಪತಿಗಳು ಒಂದಾದ ಭಕ್ತಿ ಹಿತವಾಗುವುದು ಶಿವಂಗೆ ಎಂದು ಬಸವಣ್ಣ ಹೇಳಿದ್ದಾರೆ. ಒಳ್ಳೆಯ ಮಾತುಗಳನ್ನು ಪ್ರಸನ್ನತೆಯಿಂದ ಕೇಳಿದರೆ ಅದು ಪ್ರಸಾದ. ಯಾರೂ ಸಹ ಕೆಟ್ಟ ಪದಗಳನ್ನು ಕೇಳಬಾರದು. ಕಿವಿಗೆ ಪ್ರಸಾದ ಲಿಂಗ ಎಂದಿದ್ದಾರೆ ಶರಣರು. ನಾಲಿಗೆಯು ಕೆಟ್ಟದಾಗಿ ಮಾತನಾಡುತ್ತದೆ ಅದನ್ನು ತಡೆಯಬೇಕು. ಮಾತಿಗೆ ಮಾತು ಬೆಳೆಸಬಾರದು. ಅದು ಸಂಸ್ಕಾರಯುತವಾಗಿರಬೇಕು ಆದ್ದರಿಂದ ನಾಲಗೆಯನ್ನು ಗುರುಲಿಂಗ ಎಂದಿದ್ದಾರೆ ಶರಣರು. ಮನೆಯಲ್ಲಿ ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಣಬೇಕು. ಎಲ್ಲವೂ ನಿಮ್ಮದೇ ಎಂಬ ಪದ ಬಳಸಿದರೆ ಎಲ್ಲವೂ ಒಳ್ಳೆಯದಾಗುತ್ತದೆ. ನನ್ನದೇ ಎಲ್ಲಾ ಎಂದರೆ ದಾರಿಯೇ ಬೇರೆಯಾಗುತ್ತದೆ. ಮೂರನೆಯ ಲಿಂಗ ಕಣ್ಣು. ಅದನ್ನು ಇಷ್ಟಲಿಂಗ ಎನ್ನುತ್ತಾರೆ. ಒಳ್ಳೆಯದನ್ನೇ ನೋಡಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮಿಗಳು ಮಾತನಾಡಿ, ಮುರುಘಾಮಠವು ನಾಡಿನಲ್ಲಿ ತ್ರಿವಿಧ ದಾಸೋಹಕ್ಕೆ ಹೆಸರುವಾಸಿಯಾಗಿದೆ. ಮಠದಲ್ಲಿ ಅನ್ನದಾಸೋಹ ನಿರಂತರವಾಗಿ ನಡೆದಿದೆ. ಅಂತೆಯೇ ಜ್ಞಾನದಾಸೋಹ. ಈ ರೀತಿಯ ಕಾರ್ಯಗಳ ಮೂಲಕ ಅರಿವನ್ನು ನೀಡುತ್ತಿದೆ. ಜ್ಞಾನ ಎಂದರೆ ತಿಳುವಳಿಕೆ. ಅಕ್ಷರ ದಾಸೋಹ ರೂಪದಲ್ಲಿ ಶಾಲೆ-ಕಾಲೇಜುಗಳನ್ನು ಸ್ಥಾಪಿಸಿ ಶಿಕ್ಷಣವನ್ನು ನೀಡುತ್ತಾ ಬಂದಿದೆ. ತ್ರಿವಿಧ ದಾಸೋಹದ ಜೊತೆಗೆ 4ನೇ ದಾಸೋಹವಾಗಿ ಸಾಮೂಹಿಕ ಕಲ್ಯಾಣ ಮಹೋತ್ಸವವನ್ನು ಮಾಡಿದರೆ, 5ನೇ ದಾಸೋಹವಾಗಿ ಆರೋಗ್ಯ ದಾಸೋಹವನ್ನು ಉಚಿತ ಆರೋಗ್ಯ ತಪಾಸಣೆ ಮಾಡುವುದರ ಮುಖಾಂತರ ಪಂಚದಾಸೋಹದ ಕತೃವಾಗಿ ಮುರುಘಾಮಠ ಸೇವೆ ಸಲ್ಲಿಸುತ್ತಿದೆ. ದೇವರಿಗೆ ಹಾಲಿನ ಪಂಚಾಮೃತ ಅಭಿಷೇಕ ಮಾಡುತ್ತಾರೆ. ಆದರೆ ಶ್ರೀಮಠವು ಹಸಿದವರಿಗೆ ಅನ್ನ ನೀಡುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ನವಜೋಡಿಗಳಿಗೆ ಕಿವಿಮಾತಾಗಿ ಅತ್ತೆ-ಸೊಸೆಯರು ಹೊಂದಿಕೊಂಡು ಬಾಳಬೇಕು. ಮನುಷ್ಯನಾದ ಮೇಲೆ ಏನಾದರೊಂದು ಸೇವೆ ಸಲ್ಲಿಸುವ, ಒಳ್ಳೆಯದನ್ನು ಮಾಡುವ ಕಾರ್ಯದಲ್ಲಿ ತೊಡಗಬೇಕು ಎಂದು ಹೇಳಿದರು.
ಶ್ರೀ ಬಸವ ಮುರುಘಂದ್ರ ಸ್ವಾಮಿಗಳು ಮಾತನಾಡಿ, ಮದುವೆ ಎಂಬುದು ಕೇವಲ ವ್ಯವಹಾರಿಕವಲ್ಲ. ಎರಡು ಸಂಬಂಧಗಳನ್ನು ಒಟ್ಟುಗೂಡಿಸುವುದು. ಬಸವಣ್ಣನವರು ಹೇಳುವಂತೆ ಸತಿಪತಿ ಒಂದಾಗಿ ನಡೆದರೆ ಸಂಸ್ಕಾರವಂತರನ್ನಾಗಿ ಮಾಡುತ್ತದೆ. ಗಂಡ-ಹೆಂಡತಿಯರು ಜ್ಞಾನದ ಜ್ಯೋತಿಯಾಗಿ ಬೆಳಗಬೇಕು. ಅದಕ್ಕೆ ಪ್ರೀತಿಯೆಂಬ ತೈಲವನ್ನು ಹಾಕಿದರೆ ಮಾತ್ರ ಬೆಳಕು ಚೆಲ್ಲುತ್ತದೆ. ಇದು ದುಬಾರಿ ಕಾಲ. ಬಡವರು ಮದುವೆ ಮಾಡುವುದು ಕಷ್ಟವಿರುವ ಕಾಲವಿದು. ಹಾಗಾಗಿ ಇಂಥವರಿಗೆ ಶ್ರೀಮಠವು ಸಾಮೂಹಿಕ ಕಲ್ಯಾಣದ ಮೂಲಕ ಸಹಕಾರಿಯಾಗಿದೆ. ಜೀವನದಲ್ಲಿ ಸಹಬಾಳ್ವೆ ಮುಖ್ಯ. ಶುಭ ಅಶುಭಗಳಿಗೆ ಶ್ರೀಮಠದಲ್ಲಿ ಅರ್ಥವೇ ಇಲ್ಲ. ಶಿವಶರಣರ ಗುರುಹಿರಿಯರ ಆಶೀರ್ವಾದ ಯಾವುದೇ ಶುಭ-ಅಶುಭಕ್ಕೆ ಎಡೆಮಾಡಿಕೊಡದು ಎಂದರು.
ಮುಂಬೈನ ಕೆ.ಇ.ಎಂ. ಆಸ್ಪತ್ರೆಯ ವೈದ್ಯ ಡಾ. ಬ್ರಿಜೇಶ್ ಕೆ. ಶ್ರೀಮಠದ ಗೌರವವನ್ನು ಸ್ವೀಕರಿಸಿ ಮಾತನಾಡುತ್ತ, ಶ್ರೀಮಠದಲ್ಲಿ 25 ಸಾವಿರ ಜೋಡಿಗಳ ವಿವಾಹಗಳು ನೆರವೇರಿಸಿರುವುದು ಶ್ಲಾಘನೀಯ ಕಾರವಾಗಿದೆ. ಎಲ್ಲರೂ ಆರೋಗ್ಯದ ಕಡೆ ಗಮನ ನೀಡಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ 6 ಜೋಡಿಗಳ ವಿವಾಹ ನೆರವೇರಿಸಲಾಯಿತು. ಜಾನಪದ ಕಲಾವಿದ ಗಂಜಿಗಟ್ಟೆ ಕೃಷ್ಣಮೂರ್ತಿ ಲಾವಣಿಗೀತೆ ಹಾಡಿದರು.
ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ವೀರಭದ್ರಪ್ಪ ಸ್ವಾಗತಿಸಿದರು. ಜ್ಞಾನಮೂರ್ತಿ ನಿರೂಪಿಸಿದರು.











