top of page

ಮುರುಘಾಮಠ : 01-10-24ರ ಸಂಜೆಯ ಪ್ರವಚನಮಾಲೆ

2 Oct 2024

ಚಿತ್ರದುರ್ಗ, ಅ. 2 : ನಮಗೀಗ ಸುಲಭವಾಗಿ ಎಲ್ಲವೂ ಲಭ್ಯವಾಗಬೇಕು. ಹಾಗೆಯೇ ಅದನ್ನು ಹೊಂದುವ ಭರಾಟೆಯಲ್ಲಿ ಐಷಾರಾಮಿ, ಆಡಂಬರತನಗಳಿಗೆ ಒಳಗಾಗಿ ಸರಳತನ ಬಿಟ್ಟು, ಪರಿಶ್ರಮದಿಂದ ದೂರಾಗಿ ಹಿಂದಿನ ನಮ್ಮ ಪೂರ್ವಿಕರು ಪಾಲಿಸಿಕೊಂಡು ಬಂದಿದ್ದ ಎಲ್ಲ ವೈಜ್ಞಾನಿಕ ಆಚರಣೆಗಳನ್ನು ತಿರಸ್ಕರಿಸಿ ಆಧುನಿಕತೆಯಲ್ಲಿ ಸಿಗುವ ಆಹಾರ ಪದ್ಧತಿ ಸೇವಿಸುವ ಹಿನ್ನೆಲೆಯಲ್ಲಿ ರೋಗಗಳ ತವರೂರು ಭಾರತ ಆಗುತ್ತಿದೆ ಎಂದು ವೈದ್ಯ ಶ್ರೀ ಚನ್ನಬಸವಣ್ಣ ಕಳವಳ ವ್ಯಕ್ತಪಡಿಸಿದರು.
ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಶರಣಸಂಸ್ಕೃತಿ ಉತ್ಸವ 2024 ಹಾಗೂ ಜಯದೇವ ಜಗದ್ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತ್ಯುತ್ಸವದ ಅಂಗವಾಗಿ ಏರ್ಪಡಿಸಿರುವ ಆರೋಗ್ಯ ಆಧ್ಯಾತ್ಮ ಪ್ರವಚನದ ಆರನೇ ದಿನದ ಸಂಜೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ನಾವು ಸೇವಿಸುವ ಆಹಾರದಲ್ಲಿ ಸತ್ವ ಇದ್ದರೆ ಸಪ್ತಧಾತುಗಳು ಕ್ರಿಯಾಶೀಲವಾಗಿರುತ್ತವೆ. ಆಹಾರದಿಂದಲೇ ಆರೋಗ್ಯ ಎಂದು ಪ್ರತಿಪಾದಿಸಿದ ಅವರು, ಅನ್ನವನ್ನು ನಮ್ಮ ಹಿರಿಯರು ಪ್ರಸಾದ ಎಂದಿದ್ದಾರೆ. ಅದನ್ನು ಹಾಳು ಮಾಡುವುದು ಶ್ರೇಯಸ್ಕರವಲ್ಲ. ಹಿಂದೆ ಬ್ರಿಟಿಷರ ಆಳ್ವಿಕೆಯಲ್ಲಿ ಭಾರತೀಯರ ಮಾನಸಿಕ ಹಾಗೂ ದೈಹಿಕ ಶಕ್ತಿಯನ್ನು ಕುಗ್ಗಿಸಲು ಆಹಾರ ತಯಾರಿಕೆಯಲ್ಲಿ ಅಲುಮಿನಿಯಂ ಬಳಕೆಯ ಸಲಹೆ ನೀಡಿದ ಪರಿಣಾಮ ಅಪರೋಕ್ಷವಾಗಿ ಕಹಿ ಮಾರ್ಗವನ್ನು ಹೇಳಿಕೊಟ್ಟರು. ಅದನ್ನು ನಾವು ಇಂದಿಗೂ ಅನುಸರಿಸುತ್ತಿರುವ ಕಾರಣ ನಮ್ಮ ಆರೋಗ್ಯ ದುಸ್ಥಿತಿಗೆ ಬಂದು ನಿಂತಿದೆ ಎಂದರು.
ನಮ್ಮ ಹಿಂದಿನವರು ಬಳಸುತ್ತಿದ್ದ ಮಣ್ಣಿನ ವಸ್ತುಗಳನ್ನು ಬಳಸುವುದರಿಂದ ನಮ್ಮ ಆರೋಗ್ಯ ಸುಸ್ಥಿಯಲ್ಲಿ ಇರಲು ಸಾಧ್ಯವಿದೆ ಎಂದ ಅವರು ಆಧುನಿಕ ಫಲಶ್ರುತಿಗಳಾದ ಕುಕ್ಕರ್, ಮಿಕ್ಸರ್, ರೆಫ್ರಿಜಿರೇಟರ್, ಓವನ್ ಸೇರಿದಂತೆ ಇತರೆ ಯಾಂತ್ರಿಕ ವಸ್ತುಗಳ ಬಳಕೆಯಿಂದ ಮತ್ತಷ್ಟು ಮತ್ತಷ್ಟು ನಮ್ಮ ದೇಹಾರೋಗ್ಯ ಹದಗೆಡುತ್ತಿದೆ. ಹಾಗೆ ನಾವು ಬಳಸುತ್ತಿರುವ ತಂಪು ಪಾನೀಯಗಳು ಅಷ್ಟೇ ಹಾನಿಕಾರಕವಾಗಿವೆ. ಅದೇ ಒಂದು ಎಳನೀರು ಕುಡಿದು ದಿನಪೂರ್ತಿ ಇದ್ದು ಬಿಡಬಹುದು. ಅಂತ ಅದ್ಭುತ ಶಕ್ತಿ ನಮ್ಮ ಭಾರತೀಯ ಪಾನೀಯ ಎಳನೀರಿನಲ್ಲಿದೆ. ಋತುಮಾನಕ್ಕನುಗುಣವಾಗಿ ನಾವು ಆಹಾರ ಪದ್ಧತಿಯನ್ನು ಬಳಸುವುದರಿಂದ ಯಾವುದೇ ಸಮಸ್ಯೆ ಬರುವುದಿಲ್ಲ ಎಂಬಿತ್ಯಾದಿ ಅನೇಕ ಉದಾಹರಣೆ ಸಹಿತ ಸಲಹೆಗಳನ್ನು ನೀಡಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಕಲಬುರ್ಗಿ ಜಿಲ್ಲೆ ಚಿಗರಹಳ್ಳಿ ಮರುಳಶಂಕರಪೀಠದ ಸಿದ್ದಬಸವ ಕಬೀರ ಸ್ವಾಮೀಜಿ ಮಾತನಾಡಿ, ಅಕ್ಷರ ಅರಿವಿನ ಜ್ಞಾನ ಸಂಪಾದನೆಗೆ ಶಿಕ್ಷಣ ಸಂಸ್ಥೆ, ಪ್ರಸಾದ ನಿಲಯ ವಸತಿ ವ್ಯವಸ್ಥೆಯನ್ನು ಯೋಜನಾ ಬದ್ಧವಾಗಿ ನಡೆಸುವ ಮೂಲಕ ಈ ನಾಡಿನಲ್ಲಿ ಕ್ರಾಂತಿ ಮಾಡಿದವರು ಚಿತ್ರದುರ್ಗದ ಬೃಹನ್ಮಠದ ಪೀಠಾಧೀಶರು. ಅವರಲ್ಲಿ ಅಗ್ರಗಣ್ಯ ಹೆಸರು ಜಯದೇವ ಜಗದ್ಗುರು ಎಂದು ಕೊಂಡಾಡಿದರು. ಶರಣರು ಈ ಆಡಂಬರದ ಪೂಜೆ, ಜಪ, ತಪ ಇತ್ಯಾದಿಗಳನ್ನು ಒಪ್ಪದೆ ಅಂತರಂಗ ಬಹಿರಂಗ ಶುದ್ದಿಯಾಗದ ಹೊರತು ಬಹಿರಂಗದ ಯಾವ ಆಚರಣೆಗಳು ಗೌಣ ಎಂದು ಪ್ರತಿಪಾದಿಸಿದರು. ಅದರಲ್ಲಿ ಕಸಗುಡಿಸುವ ಕಾಯಕದ ಸತ್ಯಕ್ಕನೂ ಒಬ್ಬಳು, ಎಂತಹ ಧೀರೋದಾತ್ತ ವಚನಗಳನ್ನು ಆಕೆ ಬರೆದಿದ್ದಾಳೆ ಎಂದು ಉದಾರಿಸಿದರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಮಾತನಾಡುತ್ತ, ಕೆಲವರು ಮಾತನಾಡಿ ಪ್ರಚಾರಕ್ಕೆ ಬಂದರು. ಇನ್ನು ಕೆಲವರು ಮೌನವಾಗಿದ್ದುಕೊಂಡೇ ಅಗಾಧ ಕೆಲಸ ಮಾಡಿದ್ದಾರೆ. ಹಾಗೆಯೇ ಜಯದೇವ ಶ್ರೀಗಳು ನಡೆ-ನುಡಿ ಒಂದಾಗಿ ಸಮಾಜದ ಕೆಲಸ ಮಾಡಿದ್ದಾರೆ. ಇನ್ನೇನು ಎರಡು ಮೂರು ದಿನಗಳಲ್ಲಿ ಶರಣ ಸಂಸ್ಕೃತಿ ಉತ್ಸವ ಹಾಗೂ ಜಯದೇವ ಜಗದ್ಗುರುಗಳ 150ನೇ ಜಯಂತ್ಯುತ್ಸವ ಬರುತ್ತಿದೆ. ನೀವೆಲ್ಲರೂ ಅಂತಹ ಜ್ಞಾನದಾಸೋಹದಲ್ಲಿ ಭಾಗವಹಿಸಿ ಅದರ ಸಾರವನ್ನು ಸವಿಯಲು ಬನ್ನಿ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಗುರುಮಠಕಲ್‌ನ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ಕೊಲ್ಲಾಪುರ ಹಾಗೂ ಸಾಯಗಾವ ಮಠದ ಶಿವಾನಂದ ಸ್ವಾಮೀಜಿ, ಮುರುಘಾಮಠದ ಮುರುಗೇಂದ್ರ ಸ್ವಾಮೀಜಿ, ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ, ಗೋವಿಂದ ಸ್ವಾಮೀಜಿ, ಮೈಸೂರು ಜಿಲ್ಲೆಯ ಕಲ್ಯಾಣಮ್ಮ ಹಾಗೂ ಜಯದೇವಿತಾಯಿ ಅವರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವು ಎಸ್.ಜೆ.ಎಂ. ವಿದ್ಯಾಪೀಠದ ಚಿತ್ರದುರ್ಗ ನಗರದ ಎಸ್.ಜೆ.ಎಂ. ಕಲಾ, ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ಹಾಗೂ ಎಸ್.ಜೆ.ಎಂ ಪಾಲಿಟೆಕ್ನಿಕ್ ಕಾಲೇಜುಗಳ ಸಹಯೋಗದಲ್ಲಿ ನಡೆಯಿತು. ಪ್ರಾಚಾರ್ಯ ಎಸ್.ವಿ. ರವಿಶಂಕರ್ ಸ್ವಾಗತಿಸಿದರು. ಉಪನ್ಯಾಸಕ ನವೀನ್ ಮಸ್ಕಲ್ ಕಾರ್ಯಕ್ರಮ ನಿರ್ವಹಿಸಿದರು. ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page