
2 Oct 2024
ಚಿತ್ರದುರ್ಗ, ಆಟಿ : ಮಾನವನ ಸಕಲ ರೋಗಕ್ಕೆ ಸರಿಯಾದ ಸಮಯಕ್ಕೆ ಮಲಗದಿರುವುದು ಮತ್ತು ಬೆಳಿಗ್ಗೆ ಬೇಗ ಏಳದೇ ಇರುವುದೇ ಕಾರಣವಾಗಿದ್ದು, ಜೊತೆಗೆ ನಮ್ಮ ಆಹಾರ ಪದ್ಧತಿಯು ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ ಎಂದು ಯೋಗ ಗುರುಗಳಾದ ವೈದ್ಯಶ್ರೀ ಚನ್ನಬಸವಣ್ಣ ಅವರು ವೈಜ್ಞಾನಿಕ ನೆಲೆಗಟ್ಟಿನಲ್ಲಿ ತಮ್ಮ ಚಿಂತನೆ ನೀಡಿದರು.
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತ್ಯುತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ 2024ರ ಅಂಗವಾಗಿ ನಡೆಯುತ್ತಿರುವ 10 ದಿನಗಳ ಯೋಗ ಆರೋಗ್ಯ ಆಧ್ಯಾತ್ಮಿಕ ಪ್ರವಚನದಲ್ಲಿ ದಿನಾಂಕ 2-10-2024 ರಂದು ಎಂಟನೇ ದಿನದ ಸಂಜೆಯ ಕಾರ್ಯಕ್ರಮದಲ್ಲಿ 'ವಾತ ಪಿತ್ತ ಮತ್ತು ಕಫ ದೋಷಗಳನ್ನು ಸಮತೋಲನವಾಗಿರಿಸಿಕೊಂಡು ದೀರ್ಘಾವಧಿ ಆರೋಗ್ಯವಾಗಿ ಬದುಕುವ ರಹಸ್ಯ' ಹೇಗೆಂದು ಪ್ರವಚನ ನೀಡುತ್ತಾ, ನಾವು ಹಿತಮಿತವಾಗಿ ಋತುವಿಗೆ ಅನುಗುಣವಾಗಿ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡರೆ ಹಾಗೂ ಸಮಯಕ್ಕೆ ಸರಿಯಾಗಿ ನಿದಿಸಿದರೆ ಎಲ್ಲಾ ರೋಗಗಳಿಂದ ದೂರ ಇರಬಹುದು. ನಮ್ಮ ವಾತ ಪಿತ್ತ ಮತ್ತು ಕಫಗಳನ್ನು ಸುಖನಿದ್ದೆ ಸ್ವಾಸ್ಥ್ಯ ಆಹಾರಗಳಿಂದ ಸಮತೋಲನದಲ್ಲಿ ಇಡಬಹುದೆಂದು ತಿಳಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗದ ಮುರುಘಾಮಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರಸ್ವಾಮೀಜಿ ಅವರು ಮಾತನಾಡುತ್ತಾ, ಈ ಯೋಗ ಸಂಬಂಧಿತ ಕಾರ್ಯಕ್ರಮವು ತುಂಬಾ ಯಶಸ್ವಿಯಾಗಿ ನಡೆಯುತ್ತಿದ್ದು, ಉತ್ಸವದ ಕಾರ್ಯಕ್ರಮಗಳೂ ಸಹ ಭಕ್ತರು ಸಕ್ತಿಯವಾಗಿ ಭಾಗವಹಿಸುವುದರ ಮೂಲಕ "ಯಶಸ್ವಿಯಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿ, ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕೆಂದು ಕರೆ ನೀಡಿದರು.
ಕಲ್ಲುರ್ಗಿ ಚಿಗರಳ್ಳಿ ಮರುಳಶಂಕರ ಪೀಠದ ಶ್ರೀ ಸಿದ್ದಬಸವ ಕಬೀರ ಸ್ವಾಮಿಗಳು ಮಾತನಾಡುತ್ತಾ, ವಚನಕಾರರ ಕಾಲದ ತತ್ವಾದರ್ಶಗಳು ಹಾಗೂ ಜೀವನ ಪದ್ಧತಿಯನ್ನು ಅನೇಕ ನಿದರ್ಶನಗಳ ಮೂಲಕ ತಿಳಿಸಿದರು..
ದಾವಣಗೆರೆ ವಿರಕ್ತ ಮಠದ ಡಾ. ಬಸವ ಪ್ರಭು ಸ್ವಾಮಿಗಳು ಮಾತನಾಡಿ, ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಜೀವನಾದರ್ಶಗಳನ್ನು ಸ್ಮರಿಸುತ್ತಾ, ನಾವೆಲ್ಲರೂ ಅವರ ಹಾದಿಯಲ್ಲಿಯೇ ಸಾಗಬೇಕಾಗಿದೆ ಎಂಬುದನ್ನು ಮನನ ಮಾಡಿದರು.
ಶಿವಶರಣ ಮಾದರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮಿಗಳವರು ಜಯದೇವ ಕಪ್ ಕ್ರೀಡಾಕೂಟದ ಬಗ್ಗೆ ಮಾಹಿತಿ ತಿಳಿಸುತ್ತಾ, ದಿನಾಂಕ 05.10.2024ರ ಶನಿವಾರ ಶ್ರೀ ಜಯದೇವ ಕಪ್ ಪಂದ್ಯಾವಳಿ 'ಅಂಗವಾಗಿ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಜಯದೇವ ಶ್ರೀಗಳ ಬೆಳ್ಳಿ ಮೂರ್ತಿಯ ಪಲ್ಲಕ್ಕಿ ಉತ್ಸವ ಹಾಗೂ ಪಥ ಸಂಚಲನವು ಅಂದು ಸಂಜೆ ನಾಲ್ಕು ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾಗಿ ವಿವಿಧ ಮಾರ್ಗಗಳ ಮೂಲಕ ಹಳೆ ಮಾಧ್ಯಮಿಕ ಶಾಲಾ ಅವರಣ ತಲುಪುವುದು ಎಂದು ತಿಳಿಸಿ, ಅಂದು ಸಂಜೆ 06 ಗಂಟೆಗೆ ವಿವಿಧ ಕ್ರೀಡಾ ಕೂಟಗಳು ಅಲ್ಲಿಯೇ ಪ್ರಾರಂಭವಾಗುತ್ತವೆ. ಎಲ್ಲರೂ ಭಾಗವಹಿಸಬೇಕೆಂದರು.
ಕಾರ್ಯಕ್ರಮದಲ್ಲಿ ನಿಪ್ಪಾಣಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಉಳವಿ ಬಸವಲಿಂಗ ಮೂರ್ತಿ ಸ್ವಾಮಿಗಳು. ಗುರುಮಠಕಲ್‌ನ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿಗಳು, ಭಲವಾದಿ ಗುರುಪೀಠದ ಬಸವ ನಾಗಿದೇವ ಸ್ವಾಮಿಗಳು ಸೇರಿದಂತೆ ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ವಚನ ಗಾಯನ ನೀಡಿದರು. ಕೋಮಲ ಎನ್. ಸ್ವಾಗತಿಸಿದರು. ತಿಪ್ಪೇರುದ್ರಪ್ಪ ಸಿ.ಎಂ. ಕಾರ್ಯಕ್ರಮ ನಿರೂಪಿಸಿ, ಶರಣಬಸಮರ್ಪಣೆ ಮಾಡಿದರು.

