
1 Oct 2024
ಚಿತ್ರದುರ್ಗ, ಅ. 1 - ಇಷ್ಟಲಿಂಗ ಪೂಜೆಯು ನಿರಾಕಾರ ದೇವರನ್ನು ಸಾಕಾರ ರೂಪದಲ್ಲಿ ಪೂಜಿಸುವುದು. ಧ್ಯಾನಿಸುವುದು, ಆರಾಧಿಸುವುದಾಗಿದೆ ಎಂದು ಯೋಗಗುರು ಚನ್ನಬಸವಣ್ಣ ತಿಳಿಸಿದರು.
ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆಯುತ್ತಿರುವ ಆರೋಗ್ಯ ಹಾಗೂ ಆಧಾತ್ಮಿಕ ಶಿಬಿರದ 7ನೇ ದಿನದ ಸಂಜೆಯ ಕಾರ್ಯಕ್ರಮದಲ್ಲಿ ಇಷ್ಟಲಿಂಗದ ಪ್ರಾರ್ಥನೆ, ಪೂಜೆ, ಧ್ಯಾನದಿಂದ ಪರಿಪೂರ್ಣ ಆರೋಗ್ಯ ಕುರಿತು ಮಾತನಾಡುತ್ತ, ಇಷ್ಟಲಿಂಗವೆಂಬುದು ಬ್ರಹ್ಮಾಂಡದ ಸ್ವರೂಪ. ವ್ಯಕ್ತಿಯನ್ನು ಯಾವುದೇ ರೀತಿಯ ಋಣಾತ್ಮಕ ಹಾಗೂ ತಪ್ಪುದಾರಿಗೆಳೆಯುವ ಸಂದರ್ಭಗಳಲ್ಲಿ ಮನಃಸಾಕ್ಷಿಯನ್ನು ಜಾಗೃತಗೊಳಿಸಿ ಕಾಯವು ಶುದ್ಧವಾಗಿಡಲು ಇಷ್ಟಲಿಂಗ ಧಾರಣೆಯಿಂದ ಸಾಧ್ಯವಾಗುತ್ತದೆ ಎಂದರು.
ಪೂಜೆ ಎಂಬುದು ತೋರಿಕೆ ಅಲ್ಲ. ಕಾಯ ಸ್ವಚ್ಛವಾಗಿದ್ದಾಗ ಮಾತ್ರ ಇಷ್ಟಲಿಂಗ ಧಾರಣೆಗೆ ಅರ್ಥ ಬರುತ್ತದೆ. ಸತ್ತ ಹೆಣದ ಮುಂದೆ ಕುಳಿತುಕೊಳ್ಳಬಹುದು. ಆದರೆ ಕೊಳೆತ ಮನಸ್ಸಿನ ಮುಂದೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇಷ್ಟಲಿಂಗ ಪೂಜೆಯಿಂದ ತನವು, ಪ್ರಾರ್ಥನೆಯಿಂದ ಮನವು ಶುಚಿಯಾಗುತ್ತದೆ. ಎಲ್ಲರೊಡನೆ ವಿನಯದಿಂದ ವರ್ತಿಸಿದಾಗ ಪರಮಾತ್ಮನನ್ನು ಬೆರೆತಂತೆ. ದೇವರನ್ನು ಹೃದಯ ಕಮಲದಲ್ಲಿ ಪ್ರಕಟ ಮಾಡಿಕೊಳ್ಳುವುದೇ ಇಷ್ಟಲಿಂಗ ಧ್ಯಾನ. ತಾಯಿಯ ವಾತ್ಸಲ್ಯ ಹಾಗೂ ತಂದೆಯ ನೀತಿಪಾಠ ದೊರೆತಾಗ ಬದುಕು ಹಸನಾಗುತ್ತದೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಮಠದ ಆಡಳಿತ ಸಮಿತಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀ ಜಯದೇವ ಜಗದ್ಗುರುಗಳ ಕುರಿತ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.
ಶ್ರೀಮತಿ ಮಮತ ಪ್ರಾರ್ಥಿಸಿದರು. ಎಸ್.ಜೆ.ಎಂ. ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎನ್.ಬಿ. ತಿಪ್ಪೇಸ್ವಾಮಿ ಸ್ವಾಗತಿಸಿದರು. ಡಾ|| ಸ್ನೇಹಲತಾ ವಂದಿಸಿದರು. ಡಾ| ಬಸವರಾಜ ಹರ್ತಿ ನಿರೂಪಿಸಿದರು.


