
1 Aug 2025
ನಗರದ ಎಸ್ ಜೆ ಎಂ ಫಾರ್ಮಸಿ ಕಾಲೇಜಿನ ಫಾರ್ಮಸಿ ಪ್ರಾಕ್ಟೀಸ್ ವಿಭಾಗದ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆಯ ಅಂಗವಾಗಿ ಗುತ್ತಿ ನಾಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಯಿಯ ಹಾಲಿನ ಮಹತ್ವದ ಬಗ್ಗೆ ಕಾರ್ಯಕ್ರಮವನ್ನು ಇಂದು
ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾಂಶುಪಾಲರಾದ ಡಾ. ಟಿ.ಎಸ್ ನಾಗರಾಜ್, ವಿಭಾಗದ ಮುಖ್ಯಸ್ಥರಾದ ಡಾ ಯೋಗಾನಂದ ಆರ್, ಡಾ ಮಾರುತಿ ಟಿ. ಏಕ್ಬೋಟೆ ಮತ್ತು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ ಲತಾ ರಮೇಶ್ ಪ್ರಾಧ್ಯಾಪಕರು ಹಾಗೂ ಸ್ತ್ರೀ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥರು ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಮಲ್ಲಿಕಾರ್ಜುನಯ್ಯ ನವರು ನೆರವೇರಿಸಿದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ ಲತಾ ರಮೇಶ್ ಅವರು ಮಾತನಾಡಿ ತಾಯಿಯ ಹಾಲು (Breast milk) ಶಿಶುಗಳಿಗೆ ಅಮೃತವಿದ್ದಂತೆ. ಇದು ಬಾಲ್ಯದಲ್ಲಿ ಕಾಣಿಸಿಕೊಳ್ಳುವ ಕಾಯಿಲೆಗಳಿಂದ ಶಿಶುಗಳನ್ನು ರಕ್ಷಿಸಲು ಸಹಾಯ ಮಾಡುವ ಪ್ರತಿಕಾಯಕಗಳನ್ನು ಹೊಂದಿರುತ್ತದೆ. ತಾಯಿಯ ಎದೆ ಹಾಲು ಮಗುವಿಗೆ ಅತ್ಯುತ್ತಮವಾದ ಪೋಷಣೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಎದೆಹಾಲು ಮಗುವಿನ ಅರೋಗ್ಯಕರ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಹೊಂದಿದ್ದು, ಇದು ಮಗುವಿನ ಆರೋಗ್ಯವನ್ನು ವೃದ್ಧಿಸುವುದು ಮಾತ್ರವಲ್ಲದೆ ಹಾಲುಣಿಸುವುದರಿಂದ ತಾಯಿ ಮತ್ತು ಮಗುವಿನ ನಡುವಿನ ವಾತ್ಸಲ್ಯ, ಬಾಂಧವ್ಯ ಮತ್ತು ಪ್ರೀತಿ ಸಹ ಹೆಚ್ಚಾಗುತ್ತದೆ ಎಂದು ತಿಳಿಸಿದರು. ತಾಯಿಯ ಎದೆಹಾಲಿನ ಮಹತ್ವ ಮತ್ತು ಎದೆ ಹಾಲಿನ ಪ್ರಯೋಜನಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಡಾ ಟಿ ಎಸ್ ನಾಗರಾಜ್ ಪ್ರಾಂಶುಪಾಲರು ಮಾತನಾಡಿ ತಾಯಿಯ ಎದೆಹಾಲನ್ನು ಜೀವಾಮೃತ ಎಂದೇ ಹೇಳಬಹುದು. ಶಿಶು ಆರೋಗ್ಯಕರವಾಗಿರಬೇಕೆಂದರೆ, ತಾಯಿಯ ಎದೆಹಾಲನ್ನು ಕಡ್ಡಾಯವಾಗಿ ಕುಡಿಸಲೇಬೇಕು. ಅಲ್ಲದೆ ಶಿಶುವಿನ ಬೆಳವಣಿಗೆ ಪ್ರಯಾಣದಲ್ಲಿ ಸ್ತನ್ಯಪಾನವು ಅತ್ಯಂತ ಅವಶ್ಯಕ ಭಾಗವಾಗಿದೆ. ತಾಯಿ ಎದೆ ಹಾಲಿನ ಮಹತ್ವ ಹಾಗೂ ಸ್ತನ್ಯಪಾನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 1 ರಿಂದ 7 ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ನಂದೀಶ್ ಭೂಮಿಕ ಮತ್ತು ವಿನಾಯಕ್ ದೇಸಾಯಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಐದನೇ ಹಾಗೂ ಅಂತಿಮ ವರ್ಷದ ಫಾರ್ಮ ಡಿ ವಿದ್ಯಾರ್ಥಿಗಳು ಮತ್ತು ಸುತ್ತಮುತ್ತಲಿನ ಗ್ರಾಮದ ಮಹಿಳೆಯರು ಹಾಗೂ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.