
27 Sept 2024
ಚಿತ್ರದುರ್ಗ, ಸೆ. 27 ಪ್ರಪಂಚದಾದ್ಯಂತ ಪ್ರಸ್ತುತ ಹೊಟ್ಟೆ ಹೊರೆಯುವ ಮತ್ತು ಹೊಟ್ಟೆ ಹೊರುವ ಎರಡು ವರ್ಗಗಳಿವೆ. ಇದಕ್ಕೆ ನಮ್ಮ ಸಾಮಾಜಿಕ ವ್ಯವಸ್ಥೆ, ಕಲುಷಿತವಾದ ಆಹಾರ ಪದ್ಧತಿಯೇ ಕಾರಣ ಎಂದು ಯೋಗಗುರು ಚನ್ನಬಸವಣ್ಣನವರು ಹೇಳಿದರು.
ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಆಯೋಜಿಸಲಾಗಿರುವ ಸರಣಿ ಆರೋಗ್ಯ-ಆಧ್ಯಾತ್ಮ ಶಿಬಿರದ 2ನೇ ದಿನದ ಕಾರ್ಯಕ್ರಮದಲ್ಲಿ ಆಹಾರವೇ ಪರಮೌಷಧಿ, ಯಾವ ರೋಗ ನಿವಾರಣೆಗೆ ಯಾವ ಆಹಾರ, ಸರ್ವ ರೋಗಗಳಿಗೆ ಮನೆ ಮದ್ದುಗಳು ವಿಷಯ ಕುರಿತು ಮಾತನಾಡುತ್ತ. ಸುವರ್ಣಕ್ಕಿಂತ ಶ್ರೇಷ್ಠ ಸಪ್ತಧಾತುಗಳು. ಮಾನವ ನಾಲಿಗೆ ರುಚಿಗೋಸ್ಕರ ಆಹಾರವನ್ನು ಸೇವಿಸದೇ ಪ್ರಸಾದವನ್ನಾಗಿ ಸ್ವೀಕರಿಸಬೇಕು. ಅನ್ನ ಪರಬ್ರಹ್ಮ. ಶ್ರದ್ಧೆ, ಭಕ್ತಿ ಮತ್ತು ಪ್ರಸನ್ನತೆಯಿಂದ ಸೇವಿಸಿದಾಗ ಅನ್ನ ಪ್ರಸಾದವಾಗುತ್ತದೆ. ನಿಂತು ಊಟ ಮಾಡಬಾರದು ಹೃದಯಾಘಾತ ಆಗುವ ಸಂಭವವಿರುತ್ತದೆ. ಮಾತನಾಡುತ್ತ ಪ್ರಸಾದ ಸ್ವೀಕರಿಸಿದರೆ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಹಾಗಾಗಿ ಊಟವನ್ನು ಪ್ರಸನ್ನತೆಯಿಂದ ಸೇವಿಸಬೇಕು ಎಂದು ಹಿತವಚನ ನುಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು, ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ, ಡಾ. ಎಂ. ಚಿದಾನಂದಮೂರ್ತಿ, ಮಾಜಿ ಉಪಪ್ರಧಾನಿ ಬಿ.ಡಿ.ಜತ್ತಿ, ಮಾಜಿ ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪ, ಜೆ.ಹೆಚ್.ಪಟೇಲ್ ಅವರುಗಳು ಜಯದೇವ ವಿದ್ಯಾರ್ಥಿ ನಿಲಯದ ಮೂಲಕ ತಮ್ಮ ಸಾಧನೆಯ ರಹದಾರಿಗಳನ್ನು ಶೋಧಿಸಿಕೊಂಡವರು. ಇದು ಶ್ರೀಮಠದ ಹೆಮ್ಮೆಯ ವಿಚಾರ ಎಂದರು.
ನಿಪ್ಪಾಣಿಯ ಶ್ರೀ ಬಸವಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಮುರುಕೇಂದ್ರ ಸ್ವಾಮಿಗಳು, ಉಳವಿಯ ಶ್ರೀ ಬಸವಲಿಂಗಮೂರ್ತಿ ಸ್ವಾಮಿಗಳು, ಲಾಳನಹಳ್ಳಿಯ ಶರಣೆ ಜಯದೇವಿ ತಾಯಿ, ಶರಣೆ ಚಿನ್ಮಯಿತಾಯಿ, ಹೊಳಲ್ಕೆರೆ ಒಂಟಿಕಂಬ ಮುರುಘಾಮಠದ ಶ್ರೀ ತಿಪ್ಪೇರುದ್ರ ಸ್ವಾಮಿಗಳು ವೇದಿಕೆಯಲ್ಲಿದ್ದರು.
ಚಿತ್ರದುರ್ಗದ ಗಾನಯೋಗಿ ಸಂಗೀತ ಬಳಗ ಮತ್ತು ಜಮುರಾ ಕಲಾವಿದರು ಜಯದೇವ ಜ್ಯೋತಿ ರೂಪಕವನ್ನು ಅಭಿನಯಿಸಿದರು.
ಜಮುರಾ ಕಲಾವಿದರು ಪ್ರಾರ್ಥಿಸಿದರು. ಶ್ರೀಮತಿ ಅನ್ನಪೂರ್ಣ ಲಿಂಗರಾಜು ಸ್ವಾಗತಿಸಿದರು. ಡಾ. ಬಿ. ರೇವಣ್ಣ ವಂದಿಸಿದರು. ಪ್ರೊ. ಲಕ್ಷ್ಮಿಕಾಂತ ನಿರೂಪಿಸಿದರು. ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಚಂದ್ರವಳ್ಳಿ ಮತ್ತು ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ಪ್ರಾಚಾರ್ಯರು ಮತ್ತು ಸಿಬ್ಬಂದಿವರ್ಗದವರು, ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.






