
30 Jul 2025
ಚಿತ್ರದುರ್ಗ, ಜು. 30 ಚಿತ್ರದುರ್ಗದ ಮುರುಘಾ ಪರಂಪರೆಯ ಜಗದ್ಗುರುಗಳಲ್ಲಿ ನಾಲ್ಕನೆಯವರು ಶ್ರೀ ಶಿರಹಟ್ಟಿ ಸಿದ್ಧಲಿಂಗ ಮಹಾಸ್ವಾಮಿಗಳು. ಇವರದು ಅಪರೂಪದ ವ್ಯಕ್ತಿತ್ವ. ಇವರು ತುಂಬಾ ಜನಾನುರಾಗಿ ಶ್ರೀಗಳಾಗಿದ್ದು ಸತ್ಯ, ಸಹಜ. ಸದ್ಭಾವ ಹಾಗೂ ಸದ್ವರ್ತನೆಯಿಂದ ಅವರ ನಿತ್ಯದ ಕೆಲಸ ಕಾರ್ಯಗಳು ನಡೆಯುತ್ತಿದ್ದವು. ಇವರ ಸಮಾಜ ಸುಧಾರಣೆ ಹಾಗೂ ಅಭಿವೃದ್ಧಿಯ ಕೆಲಸಗಳನ್ನು ಅಂದಿನ ಭಕ್ತರು, ರಾಜಮಹಾರಾಜರು ಅನೇಕ ಬಿರುದುಗಳನ್ನು ನೀಡಿದ್ದರು ಎಂದು ಶ್ರೀ ಮುರುಘಾಮಠದ ಸಾಧಕ ಶ್ರೀಗಳಾದ ಬಸವ ಮುರುಘಂದ್ರ ಸ್ವಾಮೀಜಿ ಅವರು ಇತಿಹಾಸ ಅವಲೋಕನ ಮಾಡುತ್ತ ಹೇಳಿದರು.
ಅವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಶ್ರಾವಣಮಾಸದ ಪ್ರಯುಕ್ತ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಕರ್ತೃವಿನ ಸನ್ನಿಧಿಯಲ್ಲಿ ವಚನಾಭಿಷೇಕ, ವಚನ ಪಠಣ, ಪೀಠ ಪರಂಪರೆಯಲ್ಲಿ ಸಾಗಿ ಬಂದ ಮಹಾಸ್ವಾಮಿಗಳವರ ವ್ಯಕ್ತಿತ್ವ ಸಾಧನೆಯ ದರ್ಶನ ಕಾರ್ಯಕ್ರಮವು ಶ್ರೀಮಠದಲ್ಲಿ ಆಯೋಜಿಸಲಾಗಿತ್ತು. ಪೀಠದ ನಾಲ್ಕನೆಯ ಜಗದ್ಗುರುಗಳಾದ ಶಿರಹಟ್ಟಿ ಸಿದ್ಧಲಿಂಗ ಮಹಾಸ್ವಾಮಿಗಳವರ ಸಾಧನೆಯ ಬಗ್ಗೆ ವಿವರಿಸುತ್ತ, ಇವರೂ ಸಹ ಚರಜಂಗಮರಾಗಿ ಮಠದಲ್ಲಿ ನಿಲ್ಲದೆ ನಾಡನ್ನು ಸುತ್ತಿ ಮಠಕ್ಕೆ ತನ್ನದೇ ಆದ ಇತಿಹಾಸ ಕಟ್ಟಿಕೊಟ್ಟಿದ್ದಾರೆ. ಇವರ ಕಾಲದಲ್ಲಿ ತಮಿಳುನಾಡಿನ ಕುಂಭಕೋಣಂನಲ್ಲಿ ಮಠ ಸ್ಥಾಪನೆಯಾಗಿದೆ. ಈಗಲೂ ಮಠ ಆಸ್ತಿ ಇದೆ. ಹಾಗೆ ಮೈಸೂರು, ಚಾಮರಾಜನಗರ, ಕೊಡಗು ಭಾಗಗಳಲ್ಲಿ ನೂರಾರು ಮಠಗಳನ್ನು ಸ್ಥಾಪಿಸಿದ್ದರು. ಕೆಲ ಮಠಗಳಲ್ಲಿ ಈಗಲೂ ತ್ರಿವಿಧ ದಾಸೋಹದ ಕೆಲಸ ಮುನ್ನಡೆದಿದೆ. ಕೊಡಗಿನ ದೊರೆವೀರರಾಜೇಂದ್ರರು ಸಹ ಜಮೀನನ್ನು ಕೊಟ್ಟಿದ್ದರು. ಮುರುಘಾ ಪರಂಪರೆಯಲ್ಲಿ ಶಿರಹಟ್ಟಿಯ ಸಿದ್ದಲಿಂಗ ಸ್ವಾಮಿಗಳವರು ತಮ್ಮದೇ ಆದ ಕೊಡುಗೆಯನ್ನು ಕೊಟ್ಟು ಚರಿತ್ರೆಯಲ್ಲಿ ದಾಖಲಾಗಿದ್ದಾರೆ. ಅವರ ಲಿಂಗೈಕ್ಯ ಸಮಾಧಿ ಕೊಡಗಿನ ಚಂಗಡಹಳ್ಳಿಯಲ್ಲಿದ್ದು, ಅಲ್ಲಿ ನಿತ್ಯ ಪೂಜಾ ಇತರ ಕೆಲಸಗಳು ನಡೆಯುತ್ತಿವೆ ಎಂದು ನುಡಿದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮೀಜಿ ಮಾತನಾಡಿ, ಮುರುಘಾಮಠದ ನಾಲ್ಕನೆಯ ಜಗದ್ಗುರುಗಳಾದ ಶಿರಹಟ್ಟಿ ಶ್ರೀ ಸಿದ್ಧಲಿಂಗ ಮುರುಘರಾಜೇಂದ್ರ ಸ್ವಾಮೀಜಿ ಆಯುರ್ವೇದ ಪಂಡಿತರು. ದೊಡ್ಡ ಕಾಯಿಲೆಗಳಿಗೂ ಔಷಧಿ ನೀಡಿ ಗುಣಪಡಿಸುತ್ತಿದ್ದರಿಂದ ಸಹಜವಾಗಿ ಪ್ರಖ್ಯಾತಿ ಪಡೆದು ಜನಮನ್ನಣೆ ಗಳಿಸಿದ್ದನ್ನು ಸಹಿಸಲಾರದೆ ತುಮಕೂರು ಭಾಗದಲ್ಲಿ ಅಂದು ರಾಣಿಯೊಬ್ಬರಿಗೆ ಶ್ರೀಗಳ ಬಗ್ಗೆ ದ್ವೇಷ ಬಂದು ಇವರಿಗೆ ಹೇಗಾದರೂ ಮಾಡಿ ಕೆಟ್ಟ ಹೆಸರು ತರಬೇಕೆಂದು ಪರೀಕ್ಷೆಗೊಳಪಡಿಸಿದಾಗ ರಾಣಿ ಈ ವಿಚಾರದಲ್ಲಿ ಸೋತು ಶರಣಾಗಿ ತಪ್ಪನ್ನು ಮನ್ನಿಸಬೇಕೆಂದು ಮೊರೆಯಿಡುತ್ತಾಳೆ. ನಂತರ ಶ್ರೀಗಳು ಅಪನಂಬಿಕೆ, ಅವಿಶ್ವಾಸ, ಅಸಮಾಧಾನ ಇದ್ದ ಜಾಗದಲ್ಲಿರಬಾರದೆಂಬ ಕಾರಣದಿಂದ ಮುಂದೆ ಸಾಗುತ್ತಾರೆ. ಮುರುಘಾ ಪರಂಪರೆಯ ಸ್ವಾಮಿಗಳಲ್ಲಿ ಮಠದಲ್ಲಿರುವ ಅಭ್ಯಾಸ ಕಡಿಮೆ. ಸುತ್ತು ಕಟ್ಟು ವಾಕ್ಯ ಪರಿಪಾಲಕರು ಜಯದೇವ ಜಗದ್ಗುರಗಳು 45 ವರ್ಷಗಳ ಪರ್ಯಟನೆಯಲ್ಲಿದ್ದ ಬಗ್ಗೆ ಇತಿಹಾಸ ಹೇಳುತ್ತದೆ. ಹಾಗೆ ಸಿದ್ದಲಿಂಗ ಶ್ರೀಗಳು ಕೂಡ ನಾಡನ್ನು ಸುತ್ತುವ ಕೊಡಗಿನ ಚಂಗಡಹಳ್ಳಿಗೆ ಬರುತ್ತಾರೆ. ಅಲ್ಲಿ ಕೆಲಕಾಲದ ನಂತರ ಲಿಂಗೈಕ್ಯರಾಗುತ್ತಾರೆ. ಅವರ ಲೀಲಾವಿಶ್ರಾಂತಿ ತಾಣವನ್ನು ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು ಹಲವು ಕಡೆಗಳಿಂದ ವಿಶೇಷ ಕಲ್ಲುಗಳನ್ನು ತರಿಸಿ ಸುಂದರವಾದ ಕಲ್ಲಿನ ಗದ್ದುಗೆಯನ್ನು ಕಟ್ಟಿಸಿದ್ದು ಒಂದು ವಿಶೇಷ. ಹೀಗೆ ಪೀಠ ಪರಂಪರೆಯ ಮಹಾಸ್ವಾಮಿಗಳೆಲ್ಲರೂ ಸಮಾಜ ಸುಧಾರಣೆಗೆ ವಿಶಿಷ್ಟ ರೀತಿ ಕೆಲಸ ಮಾಡಿದ್ದಾರೆ. ಅವರನ್ನು ಈ ಶ್ರಾವಣ ಮಾಸದಲ್ಲಿ ಸ್ಮರಿಸಿ, ಸ್ತುತಿಸುವ ಒಳ್ಳೆಯ ಮಾತನ್ನು ಕೇಳುವ ಅವಕಾಶ ಮಾಡಿಕೊಟ್ಟಿದೆ ಶ್ರೀಮಠ. ಭಕ್ತರು ಅದನ್ನು ಸದುಪಯೋಗಪಡಿಸಿಕೊಳ್ಳಲು ಮನವಿ ಮಾಡಿದರು.
ಶಿರಹಟ್ಟಿಯ ಸಿದ್ಧಲಿಂಗ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಕುರಿತಾಗಿ ಅವರ ಚಾರಿತ್ರಿಕ ಘಟನೆಗಳನ್ನು ವಿಷಯಾವಲೋಕನ ಮಾಡಿಕೊಟ್ಟವರು ಎಸ್.ಜೆ.ಎಂ. ವಸತಿಯುತ ಶಾಲೆಯ ಶಿಕ್ಷಕಿ ಅನಿತಾಕುಮಾರಿ ಎಸ್. ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಬಿ.ಟಿ. ನಂದೀಶ್ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಸೇರಿದಂತೆ ಗಾಣಿಗ ಸಮಾಜದ ಅಧ್ಯಕ್ಷರಾದ ತಿಪ್ಪೇಸ್ವಾಮಿ ಎ.ಆರ್., ಕಾರ್ಯದರ್ಶಿ ಟಿ.ಪಿ. ಜ್ಞಾನಮೂರ್ತಿ ಮತ್ತಿತರ ಪದಾಧಿಕಾರಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಾಗರಪಂಚಮಿ ಪ್ರಯುಕ್ತ ಪೌಷ್ಠಿಕ ಪದಾರ್ಥವಾದ ಹಾಲನ್ನು ಅಪವ್ಯಯ ಮಾಡಬಾರದು. ಹಬ್ಬದ ಹೆಸರಿನಲ್ಲಿ ಎನ್ನುವುದರ ದ್ಯೋತಕವಾಗಿ ಸೇರಿದ್ದ ವಿದ್ಯಾರ್ಥಿಗಳಿಗೆ ಎಲ್ಲರಿಗೂ ಹಾಲನ್ನು ವಿತರಿಸಲಾಯಿತು.
ಜಮುರಾ ಕಲಾವಿದ ಉಮೇಶ್ ಪತ್ತಾರ್ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಶಿಕ್ಷಕಿ ಅನಿತಾ ಸ್ವಾಗತಿಸಿದರು. ಇನ್ನೋರ್ವ ಶಿಕ್ಷಕಿ ವೀಣಾ ಕಾರ್ಯಕ್ರಮ ನಿರ್ವಹಿಸಿದರು.