
12 Feb 2025
ಚಿತ್ರದುರ್ಗ ಫೆ. 12 : ತನ್ನ ಕೆಲಸ ಅಥವಾ ಕಾಯಕದಲ್ಲಿ ಯಾರು ನಿಷ್ಠೆ, ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ನಿರ್ವಹಿಸುತ್ತಾರೋ ಅವರು ಅವಮಾನ ಮತ್ತು ಅನುಮಾನಗಳನ್ನು ಸಹಿಸುವುದಿಲ್ಲ. ಇಂತಹುದೇ ಘಟನೆ 12ನೇ ಶತಮಾನದಲ್ಲಿ ಬರುವ ಶಿವಶರಣರಾದ ಕಿನ್ನರಿಬ್ರಹ್ಮಯ್ಯ ಅವರ ವೃತ್ತಿ ಬದುಕಿನಲ್ಲಿ ಆದ ಒಂದು ಅನುಮಾನ ಅಥವಾ ಅವಮಾನವನ್ನು ಸಹಿಸಿಕೊಳ್ಳದೇ ತನ್ನ ಅಕ್ಕಸಾಲಿಗ ವೃತ್ತಿಯನ್ನೇ ತ್ಯಾಗ ಮಾಡಿ ಕಲ್ಯಾಣಕ್ಕೆ ಬರುತ್ತಾರೆ. ಅಲ್ಲಿ ಕಿನ್ನರಿ ನುಡಿಸುತ್ತ ಬಂದ ಹಣದಲ್ಲಿ ದಾಸೋಹ ಮಾಡುವ ಮೇರುವ್ಯಕ್ತಿತ್ವವನ್ನು ರೂಢಿಸಿಕೊಂಡ ಘನಮಹಿಮ ಶಿವಶರಣ ಕಿನ್ನರಿ ಬ್ರಹ್ಮಯ್ಯನವರು ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ನುಡಿದರು.
ಅವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ತಾಣದ ಆವರಣದಲ್ಲಿ ಏರ್ಪಡಿಸಿದ್ದ ಶಿವಶರಣ ಕಿನ್ನರಿ ಬ್ರಹ್ಮಯ್ಯ ಅವರ ಜಯಂತಿ (ಶರಣೋತ್ಸವ) ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡುತ್ತ, ನಮ್ಮ ಬದುಕಿನಲ್ಲಿ ಯಾವುದೇ ಊಟ, ಬಟ್ಟೆ, ಇತರೆ ಭೌತಿಕ ವಸ್ತುಗಳಿಂದ ನೆಮ್ಮದಿ ಸಿಗುತ್ತದೆನ್ನುವುದು ಕಷ್ಟ. ಆದರೆ ತಾನು ವಹಿಸಿಕೊಂಡ ಅಥವಾ ವಹಿಸಿದ ಕೆಲಸವನ್ನು ನಿರ್ವಂಚನೆಯಿAದ ನಿಷ್ಠೆ, ದಕ್ಷತೆ ಮತ್ತು ಬದ್ಧತೆಯಿಂದ ನಿರ್ವಹಿಸಿದಾಗ ಸಿಗುವ ನೆಮ್ಮದಿ ಬದುಕಿನಲ್ಲಿ ಅಮಿತಾನಂದವನ್ನು ನೀಡುತ್ತದೆ. ಅಂತಹ ವ್ಯಕ್ತಿಗಳಿಗೆ ಸಮಾಜದಲ್ಲಿ ಗೌರವ, ಮನ್ನಣೆ ಮತ್ತು ನಾಯಕತ್ವ ಗುಣ ಪ್ರಾಪ್ತವಾಗುತ್ತದೆ. ಕಾಯಕವನ್ನು ಶ್ರದ್ಧೆಯಿಂದ ಮಾಡಿದಾಗ ಯಾವುದೇ ಕುಟುಂಬ, ಸಂಸ್ಥೆ ಮತ್ತು ಸಮಾಜ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವಿದೆ. ಆ ದಾರಿಯಲ್ಲಿ ಸಾಗಿ ಆರೋಗ್ಯ, ಸಮಸಮಾಜ, ಸಮೃದ್ಧ ನಾಡಾಗಲು ನಮ್ಮೆಲ್ಲರ ಕಾಣ್ಕೆ ತುಂಬಾ ಅಗತ್ಯವಿದೆ ಎಂದು ಹೇಳಿದರು.
ಸಮ್ಮುಖ ವಹಿಸಿದ್ದ ಕಲಬುರ್ಗಿ ಜಿಲ್ಲೆ ಚಿಗರಹಳ್ಳಿ ಮರುಳಶಂಕರದೇವರ ಪೀಠದ ಸಿದ್ಧಬಸವ ಕಬೀರ ಸ್ವಾಮಿಗಳು ಮಾತನಾಡಿ, ಕಿನ್ನರಿ ಬ್ರಹ್ಮಯ್ಯ ಅಂದರೆ ವಾಸ್ತವವಾದಿ, ನಿಷ್ಠಾವಂತ, ಪರಿಪೂರ್ಣ, ಪಕ್ವ ವ್ಯಕ್ತಿತ್ವವುಳ್ಳ ಶರಣರು. ಹಾಗಾಗಿ ಅವರು ಅನುಭವ ಮಂಟಪದಲ್ಲಿ ಯಾರೇ ಬಂದರೂ ಅವರನ್ನು ಪರೀಕ್ಷಿಸದೇ ಪ್ರಶ್ನಿಸದೆ ಅವಕಾಶ ನೀಡುತ್ತಿರಲಿಲ್ಲ. ಅಂತಹ ಒಂದು ಪ್ರಸಂಗದಲ್ಲಿ ಮಹಾಮನೆಯಲ್ಲಿ ಈರುಳ್ಳಿಯ ಬಗೆಗೆ ಸ್ವಲ್ಪ ತಿರಸ್ಕಾರದ ಭಾವ ತೋರಿದ ಬಸವಣ್ಣನವರ ನಡೆಗೆ ಕಿನ್ನರಿ ಬ್ರಹ್ಮಯ್ಯ ಅವರು ಅನುಭವ ಮಂಟಪವನ್ನೇ ತೊರೆಯುತ್ತಾರೆ. ಈ ವಿಷಯ ಬಸವಣ್ಣನವರಿಗೆ ಗೊತ್ತಾಗಿ ನಾನೆಂತಹ ತಪ್ಪು ಮಾಡಿದೆ ಎಂಬ ಅರಿವಿನಿಂದ ಕಿನ್ನರಿ ಬ್ರಹ್ಮಯ್ಯನವರನ್ನು ಕರೆತಂದು ಈರುಳ್ಳಿಗೆ ಸಿಗಬೇಕಾದ ಮಾನ್ಯತೆ ಮತ್ತು ಅಂದು ರಾಜಬೀದಿಗಳಲ್ಲಿ ಈರುಳ್ಳಿಯ ಮಹೋತ್ಸವವನ್ನೇ ಮಾಡುತ್ತಾರೆ ಎಂದು ಈರುಳ್ಳಿಯ ಘನತೆ ಎತ್ತಿಹಿಡಿದ ಪ್ರಸಂಗವನ್ನು ಸ್ಮರಿಸಿಕೊಂಡರು.
ಜಯAತಿ ಮಹೋತ್ಸವದ ಸಮ್ಮುಖ ವಹಿಸಿದ್ದ ಗುರುಮಠಕಲ್‌ನ ಖಾಸಾ ಮುರುಘಾಮಠದ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ಪರೀಕ್ಷಿಸುವ, ಓರೆಗೆ ಹಚ್ಚುವ, ಗಟ್ಟಿವ್ಯಕ್ತಿತ್ವದ ಮಡಿವಾಳ ಮಾಚಿದೇವರ ವ್ಯಕ್ತಿತ್ವದ ಕಿನ್ನರಿ ಬ್ರಹ್ಮಯ್ಯನವರು ಮಹಾದೇವಿ ಅಕ್ಕನವರನ್ನೇ ಪರಾಮರ್ಶಿಸುವ ಹಂತಕ್ಕೆ ಹೋಗುತ್ತಾರೆ. ನಂತರ ಸಾತ್ವಿಕ ವೈರಾಗ್ಯದ ಮಹಾಮೇರು ಅಕ್ಕನ ಗುಣಸ್ವಭಾವವನ್ನು ಅರಿತ ಬ್ರಹ್ಮಯ್ಯನವರು ಪಶ್ಚಾತ್ತಾಪಪಟ್ಟು, ನೀನು ನನ್ನ ಸಹೋದರ ಎನ್ನುವ ಅಕ್ಕನ ವಾತ್ಸಲ್ಯಕ್ಕೆ ಶರಣಾಗಿ ಅಕ್ಕನ ಬಗ್ಗೆಯೇ ಒಂದು ವಚನ ಬರೆದ ಧೀಮಂತ ಶರಣರು. ಹಾಗೆಯೇ ವಚನ ಸಂರಕ್ಷಣೆಯ ಕಾಲಕ್ಕೆ ಶರಣ ಚಳವಳಿಯಲ್ಲಿ ದಂಡಿನ ದಳಪತಿಯ ಕಾರ್ಯವನ್ನು ನಿರ್ವಹಿಸಿ ಸೈ ಎನಿಸಿಕೊಂಡ ಶರಣರಾಗಿದ್ದಾರೆ. ಇಂತಹ ಶರಣರ ಧೀರೋದಾತ್ತ ನಿಲುವಿನಿಂದಾಗಿ ಇಂದು ನಮಗೆ ಆ ಎಲ್ಲ ಶರಣರ ವಚನಗಳು ಲಭ್ಯವಾಗಿರುವುದು ನಮ್ಮ ಪುಣ್ಯ ಎಂದರು.
ವಿವಿಧ ಸಮಾಜಗಳ ಮುಖಂಡರಾದ ಆನಂದ್, ಬಸವರಾಜ ಕಟ್ಟಿ, ಡಾ. ನವೀನ್ ಮಸ್ಕಲ್, ಶಿಕ್ಷಕರಾದ ಶ್ರೀಮತಿ ಗಾಯತ್ರಿ ಬಿ.ಆರ್., ಜವಳಿ ಶಾಂತಕುಮಾರ್, ಭಾರತಿ, ಶಾಂತಲಾದೇವಿ, ಮಂಗಳಾ ಜಿ.ವಿ., ನೇತ್ರಾವತಿ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ, ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತಾದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಎಸ್.ಜೆ.ಎಂ. ರೆಸಿಡೆನ್ಸಿಯಲ್ ಶಾಲೆಯ ನಿರ್ವಹಣೆಯಿಂದ ನಡೆದ ಸಮಾರಂಭದ ಆರಂಭಕ್ಕೆ ಶಾಲೆ ಶಿಕ್ಷಕಿಯರಾದ ಶಿಲ್ಪ ಎಂ. ಮತ್ತು ಭಾಗ್ಯಲಕ್ಷಿö್ಮ ಪ್ರಾರ್ಥಿಸಿದರು. ಜಮುರಾ ಕಲಾವಿದ ಉಮೇಶ್ ಪತ್ತಾರ್ ಕಿನ್ನರಿ ಬ್ರಹ್ಮಯ್ಯನವರ ವಚನಗಳನ್ನು ಹಾಡಿದರು. ಶಿಕ್ಷಕಿ ಅನಿತಾ ಕುಮಾರಿ ಸ್ವಾಗತಿಸಿದರು. ಮತ್ತೋರ್ವ ಶಿಕ್ಷಕಿ ಅನಿತಾ ನಿರೂಪಿಸಿದರು. ಮುಖ್ಯಶಿಕ್ಷಕಿ ಶ್ರೀಮತಿ ಪರಂಜ್ಯೋತಿ ಶರಣು ಸಮರ್ಪಿಸಿದರು.






