
6 Aug 2025
ಚಿತ್ರದುರ್ಗ, ಆ. 6 – ಚಿತ್ರದುರ್ಗದ ಶೂನ್ಯಪೀಠದ ಮುರುಘಾಪರಂಪರೆಯಲ್ಲಿ ಬರುವ ಸಣ್ಣಬರಹದ ರಾಚವಟ್ಟಿ ಸ್ವಾಮಿಗಳವರು ವಿಶಿಷ್ಟ ವ್ಯಕ್ತಿತ್ವದವರಾಗಿದ್ದ ಕಾರಣ ಇಂದಿನ ದಿನಪತ್ರಿಕೆಗಳಲ್ಲಿನ ಅಕ್ಷರವನ್ನು ಸಣ್ಣದಾಗಿರುವುದನ್ನು ನೋಡುತ್ತೇವೆ. ಅದೇ ರೀತಿಯ ಮುದ್ದಾದ ಮುದ್ದಿನಂತೆ ಪೋಣಿಸಿದ ಸಣ್ಣಬರಹಕ್ಕೆ ಅವರು ಹೆಸರಾಗಿದ್ದವರು. ಒಂದು ರೀತಿಯಲ್ಲಿ ಇವರು ಸರ್ವಜ್ಞರಾಗಿದ್ದರು. ಜ್ಞಾನದ ಬಲ ಅಷ್ಟೊಂದು ಅವರಿಗೆ ಸಿದ್ಧಿಸಿತ್ತು. ಶೂನ್ಯಪೀಠ ಮುರುಘಾ ಪರಂಪರೆಯಲ್ಲಿ ಸಕಲ ಜೀವರಾಶಿಗೆ ಲೇಸನ್ನೆ ಬಯಸುವ ಮಹಾಮೇರುಗುಣ ಪೀಠದ ಸ್ವಾಮಿಗಳವರು ಹೊಂದಿದ್ದರು. ಕೇವಲ ಮಾನವರ ಕಲ್ಯಾಣ ಬಯಸಲಿಲ್ಲ. ಲೇಸಾಗಲಿ ಎಂದು ಹೇಳಲಿಲ್ಲ. ಸಕಲ ಜೀವರಾಶಿಗೂ ಲೇಸಾಗಲಿ ಎನ್ನುವ ಸದ್ಗುಣ ಸ್ವಭಾವದವರಾಗಿದ್ದರಿಂದ ಅವರಿಗೆ ಸರ್ವಶಕ್ತರೆನ್ನಬಹುದು. ಹಾಗೆಯೇ ನಮಗೆ ನಿಮಗೆ ಎರಡು ಕಣ್ಣುಗಳಿವೆ. ಮತ್ತೆ ಕಣ್ಮುಚ್ಚಿದರೆ ಹೊರಗಿನ ಪ್ರಪಂಚ ಕಾಣುವುದಿಲ್ಲ. ಆದರೆ ಈ ಮಹಾಸ್ವಾಮಿಗಳಿಗೆ ಕಣ್ಣು ತೆರೆದು, ಕಣ್ಮುಚ್ಚಿಯೂ ಪ್ರಪಂಚದ ಆಗುಹೋಗುಗಳನ್ನು ಗಮನಿಸಬಲ್ಲ ಆಧ್ಯಾತ್ಮ ಶಕ್ತಿ ಪ್ರಾಪ್ತವಾಗಿತ್ತು ಎಂದು ಮುರುಘಾಮಠದ ಸಾಧಕ ಗುರುಗಳಾದ ಮುರುಘಂದ್ರ ಶ್ರೀಗಳು ಮುರುಘಾ ಪರಂಪರೆ ಘನತೆಯನ್ನು ತಮ್ಮ ನುಡಿಯಲ್ಲಿ ಹೇಳಿದರು.
ಶ್ರೀಗಳವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶ್ರಾವಣಮಾಸದ ಪ್ರಯುಕ್ತ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಕರ್ತವಿನ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ವಚನಾಭಿಷೇಕ, ವಚನ ಪಠಣ ಹಾಗೂ ಮುರುಘಾ ಗುರುಪರಂಪರೆಯ ಮಹಾಸ್ವಾಮಿಗಳವರ ವ್ಯಕ್ತಿತ್ವದರ್ಶನದ ಪಥದರ್ಶನ ಕಾರ್ಯಕ್ರಮದ 13ನೇ ದಿನದ ಪೀಠ ಪರಂಪರೆಯ 11ನೇ ಗುರುಗಳ ಬಗೆಗೆ ಮಾತನಾಡುತ್ತ, ನಾವೀಗ ನಮ್ಮ ಮನೆ ಮುಂದೆ ಎಚ್ಚರಿಕೆ ಅದು ಇದೆ ಅಂತ ಬೋರ್ಡ್ ಹಾಕಿರುತ್ತೇವೆ. ಆದರೆ ಅದ್ಯಾವುದನ್ನು ಹಾಕಿಸದೆ ಮಠದ ಒಳಹೊರಗನ್ನು ಗಮನಿಸುತ್ತ ಮಠದ ಕಾರ್ಯವನ್ನು ಸುಗಮವಾಗಿ ನಡೆಸುವಂತಹ ವ್ಯವಸ್ಥೆ ಮಾಡಿದ್ದರು. ಹಾಗೆಯೇ ನಾವು ನಮ್ಮ ಅಂತರಂಗ ಬಹಿರಂಗ ಶುದ್ದಿಯೊಂದಿಗೆ ನಮ್ಮ ನಡೆ-ನುಡಿ ಮತ್ತು ಕಾಯಕಗಳು ಸತ್ಯ ಮತ್ತು ಶುದ್ದವಾಗಿದ್ದರೆ ಬದುಕು ನೆಮ್ಮದಿಯಿಂದ ಸಾಗುತ್ತದೆಂದು ನುಡಿದರು.
ವಿಷಯಾವಲೋಕನ ಮಾಡಿದ ಭರಮಸಾಗರ ಬಾಪೂಜಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತ ತಿಪ್ಪಣ್ಣ ಮಾತನಾಡಿ, ಸಣ್ಣಬರಹದ ರಾಚವಟ್ಟಿ ಸ್ವಾಮಿಗಳವರು ನೈಘಂಟಿನ ಸಿದ್ದಬಸವ ಸ್ವಾಮಿಗಳವರು ಬಯಲಾದ ನಂತರ ಇವರಿಗೆ ಪಟ್ಟಾಧಿಕಾರ ನೆರವೇರಿತು. ನಂತರ ಪರಂಪರೆಯಲ್ಲಿ ಸಾಗಿಬಂದ ದಾಸೋಹ ಕಾಯಕ ಶಿವಯೋಗ ಧಾರ್ಮಿಕ ಪ್ರಸಾರದಂತಹ ಕಾರ್ಯಗಳು ಶ್ರೀಗಳವರಿಂದ ಮುಂದುವರೆದವು. ಸಂಚಾರದ ವೇಳೆ ಭಕ್ತರು ನೀಡಿದ ದವಸ-ಧಾನ್ಯ-ಧನ ಇತ್ಯಾದಿಗಳು ಶ್ರೀಮಠಕ್ಕೆ ಬರುತ್ತಿದ್ದವು. ಇದರಿಂದ ನಿತ್ಯದಾಸೋಹ, ಜಂಗಮಪೂಜೆ, ಮಠದ ಕಟ್ಟಡಗಳ ಜೀರ್ಣೋದ್ದಾರದಂತಹ ಕೆಲಸಗಳು ನಡೆದವು. ಶ್ರೀಗಳು ಸಮಾಜೋಧಾರ್ಮಿಕ ಕೆಲಸಗಳ ಪ್ರಭಾವ ಮೈಸೂರಿನ ಅಂದಿನ ಅರಸರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ತಿಳಿದು, ಮುರುಘಾ ಪರಂಪರೆಯ ಶ್ರೀಗಳನ್ನು ಸಂದರ್ಶಿಸಲು ಉತ್ಸುಕತೆ ತೋರಿ ಸಕಲ ಬಿರುದಾವಳಿಗಳೊಂದಿಗೆ ಬಿನ್ನಹದ ಓಲೆ ಕಳುಹಿಸಿದರು. ಅದಕ್ಕೆ ಒಪ್ಪಿದ ಗುರುಗಳು ಮೈಸೂರಿಗೆ ದಯಮಾಡಿಸುತ್ತಾರೆ. ಅರಸರೂ ಸಹ ಪೀಠ ಪರಂಪರೆಗೊಪ್ಪುವಂತೆ ಗೌರವಾದರಗಳಿಂದ ಗುರುಗಳನ್ನು ಸತ್ಕರಿಸುತ್ತಾರೆ. ಆನಂತರದ ಕೆಲದಿನಗಳಲ್ಲಿ ಅವರ ಶಿಷ್ಟರೊಬ್ಬರನ್ನು ಕರೆದು ನನಗೆ ನನ್ನ ಬಯಲಾಗುವ ಲಿಂಗೈಕ್ಯ ಸ್ಥಿತಿ ಹತ್ತಿರ ಬರುತ್ತಿದೆ ಎಂದು ಹೇಳಲು ಆಗ ಭಕ್ತಗಣಕ್ಕೆ ಕಂಪನ, ಆಶ್ಚರ್ಯ ಒಮ್ಮೆಲೆ ಆಗುತ್ತದೆ. ನಂತರ ಶ್ರೀಗಳು ತಮ್ಮ ಬಯಲಾಗುವ ದಿನ ನಿಗಧಿಯಾಗಿದೆ. ನಾವು ಹೊರಡುತ್ತೇವೆಂದು ಹೇಳಿದ್ದಕ್ಕೆ ಸಿದ್ಧತೆ ನಡೆದು ಮುರಿಗೆ ಶಾಂತವೀರರ ಗದ್ದುಗೆ ಮುಂಭಾಗದ ಮಂಚದ ಮೇಲೆ ಪವಡಿಸಿದ ಶ್ರೀಗಳು ಅಂದು ಶಿವಾನುಭವ ಗೋಷ್ಠಿ ನಡೆಸದೆ ಮೌನವಾಗಿದ್ದು ನಂತರದಲ್ಲಿ ಲಿಂಗದಲ್ಲಿ ಲೀನವಾಗುವಂತೆ ಬಯಲಲ್ಲಿ ಬಯಲಾಗುತ್ತಾರೆ. ಅವರ ಲೀಲಾವಿಶ್ರಾಂತಿ ತಾಣ ಬೃಹನ್ಮಠದಲ್ಲಿ ನಿರ್ಮಾಣವಾಗಿದೆ ಎಂಬಿತ್ಯಾದಿ ಘಟನಾವಳಿಗಳನ್ನು ಹೇಳಿದರು.
ಬೃಹನ್ಮಠ ಪ್ರೌಢಶಾಲೆ, ಎಸ್.ಜೆ.ಎಂ. ಆಂಗ್ಲಮಾಧ್ಯಮ ಶಾಲೆ ಹಾಗೂ ಸಿಬಿಎಸ್‌ಇ ಶಾಲೆ ಹಾಗೂ ಗೊಡಬನಹಾಳ್ ಮುರಿಗೆಮ್ಮ ಮತ್ತು ಮಕ್ಕಳು ಇಂದಿನ ಸೇವಾಕರ್ತರಾಗಿದ್ದರು. ಬಸವರಾಜ ಕಟ್ಟಿ, ದಗ್ಗೆ ತಿಪ್ಪೇರುದ್ರಪ್ಪ, ಎಸ್.ಜೆ.ಎಂ. ಶಾಲಾಕಾಲೇಜುಗಳ ಕೆಲ ಸಿಬ್ಬಂದಿ, ಭಕ್ತರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಉಮೇಶ್ ಪತ್ತಾರ್ ಅವರ ವಚನಗಳ ಪ್ರಾರ್ಥನೆಯೊಂದಿಗೆ ಸಮಾರಂಭ ಆರಂಭವಾಯಿತು. ಶಿಕ್ಷಕಿ ಭಾರತಿ ಸ್ವಾಗತಿಸಿದರು. ಮತ್ತೋರ್ವ ಶಿಕ್ಷಕಿ ಶ್ರೀಮತಿ ನೇತ್ರಾವತಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಆಶಾರಾಣಿ ಶರಣು ಸಮರ್ಪಣೆ ಮಾಡಿದರು.