top of page

ಶ್ರೀ ಅಥಣಿ ಮುರುಘಂದ್ರ ಶಿವಯೋಗಿಗಳವರ ಜಯಂತಿ ಆಚರಣೆ-2025

26 Jun 2025


ಚಿತ್ರದುರ್ಗ, ಜೂ. 27 : ಬಸವಾದಿ ಶಿವಶರಣರ ಗುಣಸ್ವಭಾವಗಳು ಹಾಗೂ ಅವರ ಘನವ್ಯಕ್ತಿತ್ವವು ಅಥಣಿ ಮುರುಘಂದ್ರ ಶಿವಯೋಗಿಗಳವರಲ್ಲಿ ಅಡಕವಾಗಿತ್ತು. ಆ ಶರಣರ ಇಡೀ ಬದುಕನ್ನು ಶಿವಯೋಗಿಗಳವರು ಅನುಸರಿಸಿ ನಡೆದವರಾಗಿದ್ದರು. ಅಪರೂಪದಲ್ಲೇ ಅಪರೂಪದವರಾಗಿದ್ದರು ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳವರು ಶಿವಯೋಗಿಗಳ ಜೀವನ ವೃತ್ತಾಂತವನ್ನು ವಿಶ್ಲೇಷಿಸಿದರು.
ಶ್ರೀಗಳವರು, ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಲೀಲಾವಿಶ್ರಾಂತಿ ತಾಣದ ಆವರಣದಲ್ಲಿ ಏರ್ಪಡಿಸಿದ್ದ ಮುರುಘಾ ಪರಂಪರೆ ಹಾಗೂ ಬಸವತತ್ತ್ವದ ಕೊಂಡಿಯಂತೆ ಕೆಲಸ ಮಾಡಿದ್ದ ಅಥಣಿ ಮುರುಘಂದ್ರ ಶಿವಯೋಗಿಗಳವರ 190ನೇ ಜಯಂತಿ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡುತ್ತ, ಗುರು, ಜಗದ್ಗುರು ಆಗುವುದು ಬಹುಶಃ ಸುಲಭದ ಕೆಲಸ. ಆದರೆ ಶಿವಯೋಗಿಯಾಗುವುದು ಕಠಿಣದ ಹಾದಿ. ಅದು ತ್ಯಾಗದ ಸ್ಥಾನ. ಅಂತಹ ಸವಾಲನ್ನು ಎದುರಿಸಿ ಆ ಸ್ಥಾನ ಪಡೆದಿದ್ದರು. ವಿಶ್ವಭಾತೃತ್ವ ಸಮಭಾವ, ಶುದ್ಧಹಸ್ತ, ಸಕಲ ಜೀವರಾಶಿಗಳಿಗೆ ಲೇಸನ್ನೆ ಬಯಸುವ ಸಮರ್ಪಣಾ ಭಾವ, ಪ್ರೀತಿ ಕರುಣೆ ದಯೆ, ಅಂತಃಕರಣದಂತಹ ಮಹಾಮೇರು ಗುಣಗಳು ಅವರಲ್ಲಿ ಮಿಳಿತವಾಗಿದ್ದವು. ಇಂಥ ಗುಣವಿಶೇಷಗಳ ಮೂರ್ತ ಸ್ವರೂಪರಾಗಿದ್ದ ಮುರುಘಂದ್ರ ಶಿವಯೋಗಿಗಳವರ ಜೀವನದ ಘಟನೆಗಳನ್ನು ಹೇಳಿದರು.
ಪತ್ತೆ-ಪುಷ್ಪಗಳನ್ನು ಕೀಳಬಾರದು. ಅದಕ್ಕೂ ಜೀವವಿದೆ. ಆದ್ದರಿಂದ ಅವು ಬಿದ್ದಾಗ ತಂದು ಶಿವನ ಮುಡಿಗೇರಿಸುವುದು ಅಂದರೆ ಯಾರಿಗೂ ನೋವುಂಟು ಮಾಡಬಾರದೆಂಬ ಮಾನವೀಯ ಅವರಲ್ಲಿತ್ತು. ಪಂಕ್ತಿಭೇದ ಮಾಡಬಾರದೆಂಬುದಕ್ಕೆ, ಶ್ರೀಮಠದ ಬಾಗಿಲಿಗೆ ಯಾರೋ ಒಬ್ಬರು ಭಕ್ತರು ಬೆಳ್ಳಿ ನಾಣ್ಯ ಬಡಿದು ಹೋಗಿದ್ದರಂತೆ. ಅದನ್ನು ಇನ್ನೊಬ್ಬ ಎಬ್ಬಿಕೊಂಡು ಹೋಗಿದ್ದನ್ನು ಮಠದ ಸಿಬ್ಬಂದಿ ತಿಳಿಸಿದಾಗ, ಇದ್ದವು ಬಡಿದ. ಇಲ್ಲದವನು ಎಬ್ಬಿಕೊಂಡು ಹೋದ. ಅದಕ್ಕೇಕೆ ಪರಿತಾಪ ಎಂದರಂತೆ ಶ್ರೀಗಳು. ಇಂತಹ ನೂರಾರು ಘಟನೆಗಳು ಶಿವಯೋಗಿಗಳವರ ಬದುಕಿನಲ್ಲಿ ನಡೆದದ್ದನ್ನು ಉದಾಹರಿಸಿದರು.
ಜಯಂತಿ ಮಹೋತ್ಸವ ಸಮ್ಮುಖ ವಹಿಸಿದ್ದ ಶ್ರೀ ಬಸವ ಮುರುಘಂದ್ರ ಮಹಾಸ್ವಾಮಿಗಳವರು ಮಾತನಾಡಿ, ಮುರುಕೇಂದ್ರ ಶಿವಯೋಗಿಗಳವರ ಚಾರಿತ್ರ್ಯವನ್ನು ಶಬ್ದಗಳಲ್ಲಿ ಹಿಡಿದಿಡುವುದು ಕಷ್ಟದ ಕೆಲಸ. ಅಂತಹ ಶಿವಯೋಗ ಸಾಧನೆಯ ಮೂಲಕ ಎತ್ತರಕ್ಕೆ ಹೋಗಿದ್ದರು. ಈ ನಾಡಿನಲ್ಲಿ ಮೂರು ಜನ ಶಿವಯೋಗಿಯ ಸ್ಥಾನ ಪಡೆದವರಾಗಿದ್ದಾರೆ. ಅವರಲ್ಲಿ 12ನೇ ಶತಮಾನದ ಬಸವಾದಿ ಶರಣ ಪರಂಪರೆಯ ಸಿದ್ದರಾಮ ಶಿವಯೋಗಿಗಳು, ಎಡೆಯೂರು ಸಿದ್ಧಲಿಂಗ ಶಿವಯೋಗಿಗಳು ಮತ್ತೊಬ್ಬರು 19ನೇ ಶತಮಾನದ ಅಥಣಿಯ ಶ್ರೀ ಮುರುಘಂದ್ರ ಶಿವಯೋಗಿಗಳು. ಇವರು ಸಿದ್ಧಪುರುಷರು. ತಮ್ಮ ನಡೆನುಡಿ ಮೂಲಕ ಜಗತ್ಪಸಿದ್ಧರಾದವರು. ಅವರ ನಿತ್ಯ ನೇಮದ ಹಾದಿಯೇ ಲಿಂಗಪೂಜೆ. ವ್ರತಗಳ ಮೂಲಕ ಅನುಸರಿಸಿದ ಕ್ರಮಗಳು ಅಷ್ಟು ಸುಲಭದ್ದಾಗಿರಲಿಲ್ಲ. ಅವರಿಗೆ ಚಿಕ್ಕ ಕೆಲಸವೂ ಅಪ್ಯಾಯಮಾನವಾಗಿತ್ತು. ಏಕಾಏಕಿ ಅವರು ದೊಡ್ಡವರಾಗಲಿಲ್ಲ. ತನ್ನ ಜವಾಬ್ದಾರಿಗಳನ್ನು ಸಮಾಜದ ಬಗೆಗಿನ ಕಾಳಜಿ ಸವೆಸಿದ ಸವಾಲುಗಳಿಂದ ಸಾಧನೆಯ ಶಿಖರ ತಲುಪಿ ಶಿವಯೋಗಿಗಳಾದರು ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜ ಕಟ್ಟಿ, ಎಸ್.ಜೆ.ಎಂ. ಫಾರ್ಮಸಿಯ ಪ್ರಾಚಾರ್ಯರಾದ ನಾಗರಾಜ್, ಶ್ರೀಮಠದ ಗುರುಕುಲದ ಸಾಧಕರು ಸೇರಿದಂತೆ ಭಕ್ತರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಶಿವಯೋಗಿಗಳವರ ವ್ಯಕ್ತಿತ್ವದ ಬಗೆಗಿನ ಗೀತೆಗಳನ್ನು ಜಮುರಾ ಕಲಾವಿದ ಉಮೇಶ್ ಸಂಗಪ್ಪ ಪತ್ತಾ‌ರ್ ಹಾಡಿದರು. ಬೃಹನ್ಮಠದ ಆವರಣದಲ್ಲಿರುವ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಕೊಟ್ರಮ್ಮ ಗಡ್ಡೆಪ್ಪನವರ್‌ ಸ್ವಾಗತಿಸಿದರು. ಹಿರಿಯ ಶಿಕ್ಷಕ ಶಿವಮೂರ್ತಯ್ಯ ಕಾರ್ಯಕ್ರಮ ನಿರೂಪಿಸಿದರು. ಮತ್ತೋರ್ವ ಶಿಕ್ಷಕ ಗಿರೀಶಾಚಾ‌ರ್ ಶರಣು ಸಮರ್ಪಣೆ ಮಾಡಿದರು.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page