
9 Sept 2024
ಚಿತ್ರದುರ್ಗ, ಸೆ. 9 ಕರ್ನಾಟಕ ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಅನನ್ಯತೆಯನ್ನು ಹೊಂದಿರುವ ಚಿತ್ರದುರ್ಗ ಶ್ರೀ ಮುರುಘರಾಜೇಂದ್ರ ಬೃಹನ್ಮಠದ 24ನೇ ಪೀಠಾಧೀಶರಾಗಿದ್ದ ತ್ರಿವಿಧ ದಾಸೋಹದ ರೂವಾರಿ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150 ಜಯಂತ್ಯುತ್ಸವವನ್ನು ಪ್ರಧಾನವಾಗಿರಿಸಿಕೊಂಡು ಶರಣಸಂಸ್ಕೃತಿ ಉತ್ಸವ-2024ನ್ನು ಆಯೋಜಿಸಲಾಗಿದೆ ಎಂದು ಜಯದೇವ ಕಪ್ ಕ್ರೀಡಾಜಾತ್ರಾ ಸಮಿತಿ ಪೋಷಕರಾದ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳು ತಿಳಿಸಿದರು.
ಮುರುಘಾಮಠದಲ್ಲಿ ಕ್ರೀಡಾಕೂಟ ಕುರಿತು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಶ್ರೀಗಳು. ಇದಕ್ಕೆ ಕಳೆಕಟ್ಟುವಂತೆ ಕರ್ನಾಟಕದ ಕ್ರೀಡಾಲೋಕಕ್ಕೆ ಚಿತ್ರದುರ್ಗ ಜಿಲ್ಲೆಯ ಯುವ ಕ್ರೀಡಾ ಪ್ರತಿಭಾ ಶೋಧ ಹಾಗೂ ಜಿಲ್ಲೆಯ ಕ್ರೀಡಾಲೋಕವನ್ನು ವಿಸ್ತರಿಸುವ ಮತ್ತು ಉತ್ತೇಜಿಸುವ ಆಶಯದೊಂದಿಗೆ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ 17ವರ್ಷದೊಳಗಿನ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಕಬಡ್ಡಿ, ಖೋಖೋ, ಹ್ಯಾಂಡ್‌ಬಾಲ್, ಕ್ರಿಕೆಟ್, ವಾಲಿಬಾಲ್ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ಭಾಗವಹಿಸುವ ಕ್ರೀಡಾಪ್ರತಿಭೆಗೆ ಪ್ರಯಾಣ ಭತ್ಯೆಯೊಂದಿಗೆ, ಉಚಿತ ಊಟ, ವಸತಿ ಹಾಗೂ ಟೀಶರ್ಟ್‌ಗಳನ್ನು ವಿತರಿಸಲಾಗುವುದು ಎಂದರು.
ಅಕ್ಟೋಬರ್ 1ರಂದು ಮಂಗಳವಾರ ಮುಂಜಾನೆ ಶ್ರೀಮಠದಿಂದ ಬೈಕ್ ರ್ಯಾಲಿಯೊಂದಿಗೆ ವರ್ಣರಂಜಿತ ಕ್ರೀಡಾಜಾತ್ರೆಗೆ ವಿದ್ಯುಕ್ತ ಚಾಲನೆ ನೀಡಲಾಗುವುದು. ಅಕ್ಟೋಬರ್ 1, 2, 3 ಮತ್ತು 4ರವರೆಗೆ ಕ್ರಿಕೆಟ್ ಹಾಗೂ 5, 6, ಮತ್ತು 7ರಂದು ಇತರೆ ಕ್ರೀಡೆಗಳನ್ನು ಆಯೋಜಿಸಲಾಗಿದೆ. ವಿಜೇತರಿಗೆ ಪ್ರಥಮ ಬಹುಮಾನವಾಗಿ ಹತ್ತು ಸಾವಿರ ರೂ., ದ್ವಿತೀಯ ಬಹುಮಾನ ಎಂಟು ಸಾವಿರ ರೂ., ತೃತೀಯ ಬಹುಮಾನ 6 ಸಾವಿರ ರೂ. ಹಾಗೂ ನಾಲ್ಕನೇ ಬಹುಮಾನ ನಾಲ್ಕು ಸಾವಿರ ರೂ.ಗಳ ನಗದು ಬಹುಮಾನದೊಂದಿಗೆ ಪಾರಿತೋಷಕ ಮೆಡಲ್ ಹಾಗು ವೈಯುಕ್ತಿಕ ಬಹುಮಾನ ನೀಡಲಾಗುವುದು ಎಂದು ವಿವರಿಸಿದರು.
ಈ ವರ್ಷ ವಿಶೇಷವಾಗಿ ಮಹಿಳಾ ಕ್ರೀಡಾಕೂಟವನ್ನು ಏರ್ಪಡಿಸಲಾಗಿದ್ದು, ಅಕ್ಟೋಬರ್ 6ರಂದು ಭಾನುವಾರ ಹಗ್ಗ- ಜಗ್ಗಾಟ, ಮ್ಯೂಜಿಕಲ್ ಚೇರ್, ಮಡಿಕೆ ಹೊಡೆಯುವುದು, ಬಕೆಟ್ ಇನ್ ದ ಬಾಲ್, ಥೋಬಾಲ್, ಶರಣ-ಶರಣೆಯರ ವೇಷಭೂಷಣ ಸ್ಪರ್ಧೆಯನ್ನು 20-50 ವಯೋಮಾನದ ಮಹಿಳೆಯರು ಹಾಗೂ 50ರ ವಯೋಮಾನದ ನಂತರದ ಮಹಿಳೆಯರು ಪಾಲ್ಗೊಳ್ಳಬಹುದಾಗಿದೆ. ವಿಜೇತರಿಗೆ ಪ್ರಥಮ ಬಹುಮಾನ 3 ಸಾವಿರ ರೂ. ದ್ವಿತೀಯ ಬಹುಮಾನ 2 ಸಾವಿರ ರೂ. ಹಾಗು ತೃತೀಯ ಬಹುಮಾನ 1 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಕ್ರೀಡಾಸಕ್ತರು ಆಧಾರ್ ಕಾರ್ಡ್ ನೊಂದಿಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಕ್ರೀಡಾಕೂಟದ ಮಹಾಪೋಷಕರಾದ ಡಾ. ಬಸವ ಕುಮಾರ ಸ್ವಾಮಿಗಳು, ಆಡಳಿತ ಮಂಡಳಿ ಸದಸ್ಯರು, ಶ್ರೀ ಮುರುಘಾಮಠ ಮತ್ತು ವಿದ್ಯಾಪೀಠ, ಕ್ರೀಡಾಕೂಟದ ಅಧ್ಯಕ್ಷರಾದ ಶ್ರೀರಾಮ್, ಗೌರವಾಧ್ಯಕ್ಷರಾದ ನಿವೃತ್ತ ಡಿಡಿಪಿಐ ರವಿಶಂಕರ್ ರೆಡ್ಡಿ, ಉಪಾಧ್ಯಕ್ಷ ಶಂಕರಮೂರ್ತಿ, ಪ್ರಧಾನಕಾರ್ಯದರ್ಶಿ ಸೈಯದ್ ಅನೀಸ್, ಮಹಿಳಾ ಕ್ರೀಡಾಕೂಟದ ಅಧ್ಯಕ್ಷೆ ಶ್ರೀ ರುದ್ರಾಣಿ ಗಂಗಾದರ್ ಇದ್ದರು.