
30 Apr 2025
ಶ್ರೀ. ಬಸವೇಶ್ವರ ಜಯಂತ್ಯೋತ್ಸವ-2025
ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಶ್ರೀ ಬಸವೇಶ್ವರ ಜಯಂತಿ 2025 ರ ಪ್ರಯುಕ್ತ ದಿನಾಂಕ 30.04.2025ರಂದು ಬೆಳಿಗ್ಗೆ 10.00 ಗಂಟೆಗೆ 3ನೇಯ ದಿನದ ಬಸವೇಶ್ವರರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ನಗರದ ಹೊರವಲಯದಲ್ಲಿರುವ ಗೋನೂರಿನ ನಿರಾಶ್ರಿತರ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ ಬಸವ ಕುಮಾರ ಸ್ವಾಮೀಜಿ, ನಿಜವಾದ ಬಸವಣ್ಣನವರ ಆಶಯವೆಂದರೆ ಇಂತಹ ಅನೇಕ ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ಮಾಡುವುದಾಗಿದೆ. ಆದುದರಿಂದ ಈ ಕಾರ್ಯಕ್ರಮವನ್ನು ನಿಮ್ಮಗಳ ಸನ್ನಿಧಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು. ಈ ಕೇಂದ್ರದಲ್ಲಿ 282 ನಿರಾಶ್ರಿತರಿದ್ದಾರೆ, ಇವರಿಗೆ ನಮ್ಮ ಬಸವೇಶ್ವರ ಆಸ್ಪತ್ರೆಯಲ್ಲಿ ಪ್ರತಿದಿನ 25 ಜನರಿಗೆ ಆರೋಗ್ಯ ತಪಾಸಣೆಯನ್ನು ಮಾಡಿಸಲಾಗುವುದು ಮತ್ತು ಉಚಿತ ದಾಖಲಾತಿಯನ್ನು ಸಹ ಕಲ್ಪಿಸಿ ಕೊಡಲಾಗುವುದು. ದುರಾಸೆಯ ಸ್ವಾರ್ಥಜಗತ್ತು ಇಂದಿನ ದಿನ ಸೃಷ್ಟಿಯಾಗುತ್ತಿದೆ. ಮುಂದಿನ ದಿನಮಾನಗಳಲ್ಲಾದರೂ ಬಸವಾದಿ ಶರಣರ ತತ್ವಗಳನ್ನು ಅನುಸರಿಸಿ ನಿಸ್ವಾರ್ಥ ಜಗತ್ತು ಸೃಷ್ಟಿಯಾಗಲಿ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡಿದ ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ ಸ್ವಾಮಿಗಳು, ನಿರಾಶ್ರಿತರೆಲ್ಲರೂ ಬಸವಣ್ಣನವರ ಮಕ್ಕಳು, 12ನೇ ಶತಮಾನದಲ್ಲಿ ಬಸವಣ್ಣನವರು ನಮ್ಮ ನಾಡಿನಲ್ಲಿ ಹುಟ್ಟಿರದಿದ್ದರೆ ನಾವೆಲ್ಲ ಸಮಾನತೆಯಿಂದ ಕೂಡಿರಲು ಸಾಧ್ಯವಿರಲಿಲ್ಲ. ಸಮಾನತೆಯ ಆಶಯ ನೀಡಬೇಕೆಂದು ಬಯಸಿದವರು ಬಸವಣ್ಣನವರು. ಉಳ್ಳವರು ಬಡಾವಣೆಯಲ್ಲಿ ಕಾರ್ಯಕ್ರಮ ನಡೆಸುವ ಬದಲು ಇಂತಹ ನಿರಾಶ್ರಿತರ ಕೇಂದ್ರಗಳಲ್ಲಿ ಆಚರಿಸಿದರೆ ಅರ್ಥಪೂರ್ಣವಾಗಿರುತ್ತದೆ. ನಿರಾಶ್ರಿತರಾದ ತಮಗೆ ಯಾರು ಇಲ್ಲ ಎಂದ ಭಾವಿಸಬೇಡಿ, ನಿಮ್ಮ ಬಳಿ ಬಸವಣ್ಣನವರಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಈ ಆಶ್ರಮ ಇರುವುದು ನಿಮ್ಮಗಳ ಜೀವನದಲ್ಲಿ ಆಶಾದಾಯಕವಾದಂತಹದು. ಶ್ರೀಮಠವು ಬಸವಣ್ಣನವರ ಆಶಯದಂತೆ ಸಮಾಜದಲ್ಲಿ ಅನೇಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಅಧ್ಯಕ್ಷರಾದ ಶ್ರೀ. ಶಿವಯೋಗಿ.ಸಿ.ಕಳಸದ ಐ.ಪಿ.ಎಸ್ (ನಿ). ಮಹಾನ್ ಮಾನವತಾವಾದಿ ಸಂದೇಶವನ್ನು ಬಸವಣ್ಣನವರು ನೀಡಿದ್ದಾರೆ. ಸುಸಜ್ಜಿತ ಮತ್ತು ಪೂರಕವಾದ ಆಶ್ರಮ ಇದಾಗಿದೆ. ಎಲ್ಲೋ ಹುಟ್ಟಿ ಎಲ್ಲೋ ಬೆಳದು ಜೀವನದ ತೊಡಕಿನಿಂದ ನಿರಾಶ್ರಿತರಾಗಿದ್ದೀರ, ನೀವು ಜೀವನ ನಡೆಸಲು ಬಹಳ ಬಹಳ ಕಷ್ಟ ಪಟಿದ್ದೀರಾ. ಈ ನಿಟ್ಟಿನಲ್ಲಿ ಸರ್ಕಾರವು ಶಿಸ್ತುಬದ್ದತೆಯ ಜೀವನ ನಡೆಸಲು ಆಶ್ರಯ ಇಲ್ಲದವರಿಗೆ ಈ ರೀತಿಯ ನಿರಾಶ್ರಿತ ಕೇಂದ್ರವನ್ನು ನೀಡಿರುವುದು ಸ್ವಾಗತಾರ್ಹ. ಆದರೆ 900 ವರ್ಷಗಳ ಹಿಂದೆ ಯಾವುದೇ ಸೌವಲತ್ತುಗಳು ಇಲ್ಲದಿರವುದನ್ನು ಕಾಣಬಹುದು, ಅಂತಹ ಸಮಯದಲ್ಲಿ ಬಸವಣ್ಣನವರ ಸಂದೇಶಗಳು, ಮಾರ್ಗದರ್ಶನಗಳು ಶಕ್ತಿಯುತವಾದಂತಹವುಗಳು ಎಂದು ತಿಳಿಸುತ್ತಾ ಕಾರ್ಯಕ್ರಮದಲ್ಲಿ ಸೇರಿದ್ದ ಎಲ್ಲರಿಗೂ ಬಸವ ಜಯಂತಿಯ ಶುಭಾಶÀಯಗಳನ್ನು ಕೋರಿದರು.
ಕಾರ್ಯಕ್ರಮದಲ್ಲಿ ಖ್ಯಾತ ವಕೀಲರಾದ ಶ್ರೀ ಉಮೇಶ್, ನಿರಾಶ್ರಿತ ಕೇಂದ್ರದ ಸಂಯೋಜಕರಾದ ಎಂ.ಮಹಾದೇವಯ್ಯ ಮತ್ತು ವಿಜಯ ಕುಮಾರ, ಎಸ್.ಜೆ.ಎಂ.ವಿದ್ಯಾಪೀಠದ ವಿವಿಧ ಸಂಸ್ಥೆಗಳ ಮುಖ್ಯಸ್ಥರುಗಳು, ಸಿಬ್ಬಂದಿ ವರ್ಗದವರು, ಹರಗುರುಚರ ಮೂರ್ತಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಸ್.ಜೆ.ಎಂ.ಐ.ಟಿ ಕಾಲೇಜಿನ ಶ್ರೀಮತಿ.ವಿಶಾಲಾಕ್ಷಿಯವರು 26 ನಿರಾಶ್ರಿತ ಮಹಿಳೆಯರಿಗೆ ಉಚಿತವಾಗಿ ಸೀರೆಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಜಮುರಾ ಕಲಾಲೋಕದ ಉಮೇಶ್ ಪತ್ತಾರ್ ಪ್ರಾರ್ಥಿಸಿ, ಎಸ್.ಜೆ.ಎಂ.ಐ.ಟಿ ಕಾಲೇಜಿನ ಡಾ. ಹೆಚ್.ಜೆ.ಲೋಕೇಶ್ ಸ್ವಾಗತಿಸಿ, ಶ್ರೀಮತಿ.ಪಲ್ಲವಿ.ಎಂ ವಂದಿಸಿ, ಆಕಾಶವಾಣಿಯ ನವೀನ್ ಮಸ್ಕಲ್ ನಿರೂಪಿಸಿದರು.