
5 Aug 2024
ಚಿತ್ರದುರ್ಗ, ಆ. 8 - ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳಬೇಕು. ಅಂಬೇಡ್ಕರ್, ಗಾಂಧೀಜಿಯವರು ಮೊದಲಾದ ದಾರ್ಶನಿಕರು ಸಾಮೂಹಿಕ ವಿವಾಹಕ್ಕೆ ಉತ್ತೇಜನ ನೀಡಿದರು ಎಂದು ಡಾ. ಬಸವಕುಮಾರ ಸ್ವಾಮಿಗಳು ಹೇಳಿದರು.
ಶೀಮುರುಘರಾಜೇಂದ್ರ ಮಠದಲ್ಲಿಂದು ನಡೆದ 34ನೇ ವರ್ಷದ ಎಂಟನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ನೇತೃತ್ವ ವಹಿಸಿ ಮಾತನಾಡಿದ ಶ್ರೀಗಳು, ಶ್ರೀಮಂತರು ಕೋಟಿ ಕೋಟಿ ಖರ್ಚು ಮಾಡುವ ಮದುವೆಗಳಲ್ಲಿ ಹಸಿದ ಹೊಟ್ಟೆಗಳಿಗಿಂತ ತುಂಬಿದ ಹೊಟ್ಟೆಗಳಿಗೆ ತುಂಬಿಸುವ ಕೆಲಸ ನಡೆಯುತ್ತದೆ. ಶ್ರೀಮಠವು ಬಡವರ ಪರವಾಗಿ ನಿಂತಿದೆ. ಇಲ್ಲಿ ಆಗಿಹೋಗಿರುವ ಎಲ್ಲ ಜಗದ್ಗುರುಗಳು ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಬಯಲು ಸೀಮೆಯ ನಾಡಿನಲ್ಲಿರುವ ಶ್ರೀಮಠದಲ್ಲಿ ಪ್ರೀತಿ ಇದೆ. ಹಸಿದವರಿಗೆ ಅನ್ನ, ಜ್ಞಾನ ಎಲ್ಲ ರೀತಿಯ ದಾಸೋಹ ನಡೆಯುತ್ತಿದೆ. ದಂಪತಿಗಳಲ್ಲಿ ಪರಸ್ಪರ ಹೊಂದಾಣಿಕೆ ಮುಖ್ಯ. ಪ್ರೀತಿ ಇಲ್ಲದ ಬದುಕು ಅರ್ಥವಿಲ್ಲದ್ದು, ಪರಸ್ಪರ ಅರ್ಥೈಸಿಕೊಳ್ಳುವಲ್ಲಿ ನಾವು ಸೋಲಬಾರದು. ಏನೇ ಕಷ್ಟಗಳು ಬಂದರೂ ಜೊತೆಗಿದ್ದುಕೊಂಡು ಎದುರಿಸಬೇಕು. ಸಂಸಾರದ ಬಂಡಿಯನ್ನು ಪ್ರೀತಿಯಿಂದ ಎಳೆಯಬೇಕು ಎಂದರು.
ಮುಖ್ಯ ಅತಿಥಿ ದಾವಣಗೆರೆ ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಪ್ರೊ. ಪಾಲಾಟೆ ವೆಂಕಟರಾವ್ ಮಾತನಾಡಿ, 12 ಶತಮಾನದ ಆಶೋತ್ತರಗಳನ್ನು ನಿಜವಾಗಿ ಆಚರಿಸುತ್ತಿರುವುದು ಚಿತ್ರದುರ್ಗದ ಶ್ರೀ ಬೃಹನ್ಮಠ ಯಾವುದೇ ಲಿಂಗಭೇದ ಜಾತಿಭೇದವಿಲ್ಲದೆ ವಿವಾಹಗಳು ನಡೆಯುತ್ತಿರುವುದು ಪ್ರೀತಿಯ ದ್ಯೋತಕವಾಗಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೀಮಠ ಹೆಸರುವಾಸಿಯಾಗಿದೆ. ಇಲ್ಲಿ ವಿದ್ಯಾದಾನ ಮತ್ತು ಅನ್ನದಾಸೋಹ ನಡೆಯುತ್ತಿರುವುದು ಸಂತಸದ ವಿಷಯ. ಆರ್ಥಿಕವಾಗಿ ಸಾಮಾಜಿಕವಾಗಿ ಜನರನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯುವುದರಲ್ಲಿ ಶ್ರೀಮಠದ ಹಿರಿಮೆ ದೊಡ್ಡದಾಗಿದೆ. ಎಲ್ಲರನ್ನು ಸಮಾನವಾಗಿ ಪರಿಗಣಿಸುವ ಮಠವು ಕಳೆದ 35ವರ್ಷಗಳಿಂದ ಉಚಿತ ಸಾಮೂಹಿಕ ಕಲ್ಯಾಣ ಮಹೋತ್ಸವವನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.
ಡಾ. ಬಸವಪ್ರಭು ಸ್ವಾಮಿಗಳು ಮಾತನಾಡಿ, ದೇಹ ಎರಡಾದರೂ ಮನಸ್ಸು ಒಂದೇ ರೀತಿ ಇರಬೇಕು. ಹಾಗೆ ನವದಂಪತಿಗಳು ಒಂದೇಯಾಗಿರಬೇಕು. ಸಂಸಾರದಲ್ಲಿ ನೆಮ್ಮದಿ ಬೇಕು. ಕಾರು, ಸಂಪತ್ತು ಇದ್ದರೆ ಮಾತ್ರ ಸಾಂಸಾರಿಕ ಬದುಕು ಸುಧಾರಿಸುವುದಿಲ್ಲ. ಆದರೆ ಸತಿ ಪತಿಯ ಮಧ್ಯೆ ಪ್ರೀತಿ ಇರಬೇಕು. ಎಷ್ಟೋ ದಂಪತಿಗಳ ನಡುವೆ ಮಾತುಕತೆಗಳು ಇರುವುದಿಲ್ಲ. ಗಂಡ ಹೆಂಡತಿ ಜೊತೆಯಾಗಿರಬೇಕು. ಕೈ ಕೈ ಹಿಡಿದುಕೊಂಡವರು ಕೊನೆಯವರೆಗೆ ಹಾಗೇ ಇರಬೇಕು. ಪ್ರೀತಿಗೆ ಬಡತನವಿರಬಾರದು. ಪ್ರೀತಿಯ ಜಲ ಬತ್ತಿ ಹೋಗಬಾರದು. ಸಂಸಾರದಲ್ಲಿ ಸುಖದುಃಖ ಬರುವುದು ಸಾಮಾನ್ಯ. ಅನುಸರಿಸಿಕೊಂಡು ಹೋಗಬೇಕು. ಸಂಸಾರವೆಂಬ ನದಿಯಲ್ಲಿ ಸಾಗುವಾಗ ತೆಪ್ಪದಂತೆ ತೆಪ್ಪಗಿರಬೇಕು. ಜಗಳ ಪ್ರೀತಿಯಿಂದಿರಬೇಕು. ಯಾವ ದಿನವೂ ಶ್ರೇಷ್ಠ, ಕನಿಷ್ಠವಲ್ಲ, ಎಲ್ಲ ದಿನವೂ ಶ್ರೇಷ್ಠ ಎನ್ನುವ ಮಾತಿಗೆ ಮುರುಘಾಮಠವು ಸಾಕ್ಷಿಯಾಗಿದೆ. ವೈಚಾರಿಕ ಮಂತ್ರ ಮಾಂಗಲ್ಯ ಇಲ್ಲಿ ನಡೆಯುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 4 ಜೋಡಿಗಳು ವಿವಾಹ ನೆರವೇರಿತು.
ಜಮುರಾ ಕಲಾವಿದರು ಪ್ರಾರ್ಥಿಸಿದರು. ವೀರಭದ್ರಪ್ಪ ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.






