
9 Jul 2024
ಚಿತ್ರದುರ್ಗ, ಜು. 9 : ಕೆಲವರು ಅಧಿಕಾರ ಹುಡುಕಿಕೊಂಡು ಸ್ಥಾನ ಪಡೆದುಕೊಂಡರೆ ಮತ್ತೆ ಕೆಲವರಿಗೆ ಉನ್ನತ ಸ್ಥಾನಮಾನ ಇತ್ಯಾದಿ ಅವರನ್ನೇ ಆರಸಿ ಬರುತ್ತವೆ. ಅಂತಹುದೇ ಪ್ರಸಂಗ ಲಿಂಗೈಕ್ಯ ಮಲ್ಲಿಕಾರ್ಜುನ ಶ್ರೀಗಳವರಿಗೆ ಚಿತ್ರದುರ್ಗ ಬೃಹನ್ಮಠದ ಪೀಠಾಧ್ಯಕ್ಷರಾಗುವ ಅವಕಾಶ ಒದಗಿ ಬಂದಿದ್ದು ಅವರ ವಿದ್ವತ್ ಪಾಂಡಿತ್ಯಕ್ಕೆ ಎನ್ನುವುದು ಸರ್ವವಿಧಿತ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಅಭಿಪ್ರಾಯಪಟ್ಟರು.
ಹೊಳಲ್ಕೆರೆ ಒಂಟಿಕಂಬದ ಮುರುಘಾಮಠದಲ್ಲಿ ಏರ್ಪಡಿಸಿದ್ದ ಮಾಸಿಕ ಶರಣಸಂಗಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತ ಶಿಕ್ಷಣಪ್ರೇಮಿಗಳಾಗಿದ್ದ ಅವರಿಗೆ ಎಸ್.ಜೆ.ಎಂ. ವಿದ್ಯಾಪೀಠದ ಸ್ಥಾಪನೆ ಮಾಡಲು ಸಾಧ್ಯವಾಯಿತು. ಶ್ರೀಗಳವರ ಕುರಿತಾದ ಒಂದು ಕೃತಿ ಮುಂದಿನ ತಿಂಗಳ 8ನೇ ತಾರೀಕಿಗೆ ಅವರ ಸ್ಮರಣೋತ್ಸವ ನಡೆಯಲಿದ್ದು, ಆ ಸಂದರ್ಭದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಅವರ ಬಗ್ಗೆ ಮತ್ತೇನಾದರೂ ದಾಖಲೆ ಸಿಗಬಹುದು ಎಂದು ಹುಡುಕಿದಾಗ ಸ್ವತಃ ಅವರ ಹಸ್ತಾಕ್ಷರದ ಲೀಗಲ್ ಅಳತೆಯ ನಾಲ್ಕು ಪ್ರಖರ ಸುಂದರ ಎನಿಸುವ ಪತ್ರ ಸಿಕ್ಕಿತು. ಅದರಲ್ಲಿ ಅವರ ಕೆಲವೊಂದು ನಿಬಂಧನೆಗಳಿವೆ. ಎಷ್ಟೊಂದು ಕಾಳಜಿ ಮತ್ತು ಅವರಿಗೆ ದೂರದೃಷ್ಟಿ ಇತ್ತು ಎನ್ನುವುದು ಆ ಪತ್ರ ನೋಡಿದಾಗ ವ್ಯಕ್ತವಾಗುತ್ತದೆ. ಆ ಪತ್ರಕ್ಕೆ ಅರವತ್ತು ವರ್ಷ ಆದರೂ ಆದು ಇನ್ನು ನೈಜತೆಯನ್ನಿಟ್ಟುಕೊಂಡಿದೆ. ವಿದ್ಯಾಪೀಠ ಆ ಮೂಲಕ ಶಾಲಾ ಕಾಲೇಜು ಸ್ಥಾಪನೆ ಯಾವುದೇ ಒಂದು ಆಡಂಬರಕ್ಕೆ
ಮಾಡದೆ ಸಮಾಜದ ಶೈಕ್ಷಣಿಕ ಪ್ರಗತಿಗೆ ಅವರು ಸ್ಥಾಪಿಸಿದ್ದರು ಎಂದರು. ಸ್ವಾಮಿಗಳಾದವರಿಗೆ ಸೇವಾಭಾವ ಇರಬೇಕು. ಆಗ ನಾಯಕತ್ವ ಬರುತ್ತದೆ. ಆಳಾಗಿ ದುಡಿದು ಅರಸಾಗಿ ತಿನ್ನು ಎನ್ನುವುದು ಸ್ವಾಮಿತ್ವದ ಜವಾಬ್ದಾರಿ. ಅದನ್ನು ಸಮಾಜಸೇವೆ ಎಂದು ತಿಳಿದು ಋಣ ತೀರಿಸಬೇಕಿದೆ. ಇನ್ನು ಪ್ರತಿತಿಂಗಳು 8ನೇ ತಾರೀಕು ಇಲ್ಲಿ ಶರಣಸಂಗಮ ನಡೆಯಲಿದ್ದು, ತಾಲ್ಲೂಕಿನ ಎಲ್ಲ ಗ್ರಾಮಗಳಿಂದ ಭಕ್ತರು ಆಗಮಿಸಬೇಕೆಂದರು.
ಸಮಾರಂಭದಲ್ಲಿ ಪ.ಪಂ. ಉಪಾಧ್ಯಕ್ಷ ಕೆ.ಸಿ.ರಮೇಶ್ ಮಾತನಾಡಿ, ಆನೇಕರು ಈ ಜಾಗವನ್ನು ಉಳಿಸಲು ಪ್ರಯತ್ನಿಸಿದ್ದಾರೆ. 1994ರಲ್ಲಿ ನಡೆದ ಸ್ಮರಣೋತ್ಸವದಲ್ಲಿ ನಿರ್ಣಯಿಸಿದಂತೆ ಯೋಜನೆ ಕಾರ್ಯರೂಪಕ್ಕೆ ಬರಬೇಕಿದೆ. ಹೆಚ್ಚಿನ ಆದ್ಯತೆ ಒಂಟಿಕೆಂಬ ಮಠದ ಮೇಲೆ ಇರಲಿ ಎಂದರು.
ನಿವೃತ್ತ ಉಪತಹಶೀಲ್ದಾರ್ ಗಂಗಮ್ಮ ವೀರಭದ್ರಯ್ಯ ಮಾತನಾಡಿ, ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಇಷ್ಟಪಟ್ಟು ಈ ಜಾಗವನ್ನು ಆಯ್ದುಕೊಂಡು ಇಲ್ಲಿ ನೆಲೆಸಿದ್ದಾರೆ. ಇನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಆಗಬೇಕೆಂದರು.
ರಮೇಶ್, ಚಿನ್ನಪ್ಪ, ಪಟ್ಟಣದ ಮತ್ತು ಸುತ್ತಮುತ್ತಲಿನ ಗ್ರಾಮಗಳ ಮುಖಂಡರು, ಎಸ್.ಜೆ.ಎಂ. ವಿದ್ಯಾಸಂಸ್ಥೆಯ ಶಾಲಾಕಾಲೇಜುಗಳ ಮುಖ್ಯಸ್ಥರುಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ನವಿಲುಕಟ್ಟೆ, ಗಿಲಿಕೇನಹಳ್ಳಿ ಹಾಗೂ ಮಲಸಿಂಗನಹಳ್ಳಿ ಗ್ರಾಮಗಳ ಭಜನಾ ತಂಡದವರಿಂದ ವಿವಿಧ ಪ್ರಕಾರದ ಗೀತೆಗಳನ್ನು ಹಾಡಿದರು.
ಸಂಗೀತ ಶಿಕ್ಷಕಿ ಮಮತ ಪ್ರಾರ್ಥಿಸಿದರು. ಶಿಕ್ಷಕ ಧನಂಜಯ ಸ್ವಾಗತಿಸಿದರು. ತಿಪ್ಪೇರುದ್ರಸ್ವಾಮಿಗಳು ಕಾರ್ಯಕ್ರಮ
ನಿರ್ವಹಿಸಿದರು.



