
30 Aug 2024
ಚಿತ್ರದುರ್ಗ, ಆ. 30 : ಗಮಕ ಕಲೆ ದೇಶೀಯ ಕಲೆಯಾಗಿದ್ದು, ಕನ್ನಡ ಸಂಸ್ಕೃತಿಯ ಪೂರಕವಾಗಿರುವ ಈ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಿದೆ ಎಂದು ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಮಹಾಸ್ವಾಮಿಗಳು ಎಂದು ಹೇಳಿದರು.
ನಗರದ ಚಂದ್ರವಳ್ಳಿಯ ಎಸ್.ಜೆ.ಎಂ. ಪದವಿ ಪೂರ್ವ ಕಾಲೇಜು, ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ಜಿಲ್ಲಾ ಘಟಕ ಚಿತ್ರದುರ್ಗ ಹಾಗೂ ಗಮಕ ಕಲಾಭಿಮಾನಿಗಳ ಸಂಘ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿಂದು ನಡೆದ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪಠ್ಯಾಧರಿತ ಗಮಕ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಈ ಕಲೆಯನ್ನು ಪರಿಚಯಿಸುವ ನೆಲೆಗಟ್ಟಿನಲ್ಲಿ ನಿರಂತರವಾಗಿ ಶಾಲಾ ಕಾಲೇಜುಗಳ ಅನುಸಂಧಾನದೊಂದಿಗೆ ನಾಡಿನ ಶ್ರೇಷ್ಠ ಗಮಕಿಗಳು ಹಾಗೂ ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಗಂಗಮ್ಮ ಕೇಶವಮೂರ್ತಿ ಹಾಗೂ ಶ್ರೀಮತಿ ಶಾಂತಗೋಪಾಲ್ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಕುಮಾರವ್ಯಾಸ ಭಾರತದ ಹಾಗು ನಾಗಚಂದ್ರನ ರಾಮಚಂದ್ರಚರಿತ ಪುರಾಣದ ಆಯ್ದ ಪದ್ಯಗಳನ್ನು ಗಮಕಿಳಾದ ಶ್ರೀಮತಿ ಗಂಗಮ್ಮ ಕೇಶವಮೂರ್ತಿಯವರು ಕಂಠಸಿರಿಯೊಂದಿಗೆ ಹಾಡಿದರು ಶ್ರೀಮತಿ ಶಾಂತಗೋಪಾಲ್ ಅವರು ಸದೃಶ್ಯ ಉದಾಹರಣೆಗಳೊಂದಿಗೆ ವ್ಯಾಖ್ಯಾನಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ. ಎಸ್.ಹೆಚ್. ಪಂಚಾಕ್ಷರಿ ಮಾತನಾಡಿ, ಈ ತರಹದ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸೃಜನಶೀಲ ಅಭಿವ್ಯಕ್ತಿಗೆ ಅರ್ಥ ಸಾಧ್ಯತೆಗಳಿಗೆ ಹೊಸ ರೂಪ ಮತ್ತು ಭಾವಗಳನ್ನು ನೀಡುವಂತದ್ದು ಮತ್ತು ಪರೀಕ್ಷೆಗೆ ಪೂರಕವಾದದ್ದು ಎಂದು ಹೇಳಿದರು. ಮುತ್ತೂರು ಕೃಷ್ಣಮೂರ್ತಿ, ಹೊಸಳ್ಳಿ ಕೇಶವಮೂರ್ತಿ ಇವರ ಕಾರ್ಯಕ್ರಮಗಳನ್ನು ಖಾಸಗಿ ವಾಹಿನಿಯಲ್ಲಿ ವೀಕ್ಷಿಸಿ ಕುಮಾರವ್ಯಾಸ ಭಾರತದ ಒಳನೋಟಗಳನ್ನು ಅರ್ಥೈಸಿಕೊಂಡಿದ್ದೇನೆಂದರು.
ಕಾರ್ಯಕ್ರಮದ ಕುರಿತು ಮಾತನಾಡಿದ ಡಾ. ಕೆ. ರಾಜೀವಲೋಚನ ಗಮಕ ಕಲೆ ಹೃದಯ ಸಂವಾದಿಯಾಗಿದ್ದು ಮತ್ತು ಸಂವಹನದ ಮೂಲಕ ಪಠ್ಯದ ಅರ್ಥೈಸುವಿಕೆಯಲ್ಲಿ ಗಮಕದ ಪಾತ್ರ ಹಿರಿದು ಎಂದರು.
ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ. ಸಂಚಾಲಕ ಡಾ. ಹರ್ಷವರ್ಧನ್, ಪ್ರೊ. ಟಿ.ಎನ್. ರಜಪೂತ್, ಶ್ರೀಮತಿ.ಲತ, ಶ್ರೀಮತಿ.ದೀಪ, ಶಶಿಕುಮಾರ್.ಆರ್, ಗುರುರಾಜ್, ಪ್ರಶಾಂತ್.ಯು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಭಾಗ್ಯ ಪ್ರಾರ್ಥಿಸಿದರು. ಕನ್ನಡ ಉಪನ್ಯಾಸಕ ಸಂತೋಷ್ ಕುಮಾರ್ ಸ್ವಾಗತಿಸಿದರು. ಆಕಾಶವಾಣಿಯ ಉದ್ಯೋಷಕರಾದ ನವೀನ್ ಮಸ್ಕಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

